ರಾಷ್ಟ್ರೀಯ

ಪಿವಿ ನರಸಿಂಹರಾವ್​ಗೆ ಅಡ್ಡಗಾಲಾಗಿದ್ದ ಇಂದ್ರಾ ಸಾಹನಿಯಿಂದ ಈಗ ಮೋದಿಗೆ ತಡೆ?

Pinterest LinkedIn Tumblr


ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ನಿನ್ನೆ ಬಡ ಮೇಲ್ಜಾತಿಯವರಿಗೆ ಶೇ. 10 ಮೀಸಲಾತಿ ಕಲ್ಪಿಸಲು ಸಂವಿಧಾನದಲ್ಲಿ ತಿದ್ದುಪಡಿ ತರುವ ಮಸೂದೆಯನ್ನು ಲೋಕಸಭೆಯಲ್ಲಿ ಅನುಮೋದನೆ ಪಡೆದಿದೆ. ಇದರೊಂದಿಗೆ ದೇಶಾದ್ಯಂತ ದೊಡ್ಡ ಚರ್ಚೆಗೆ ನಾಂದಿ ಹಾಡಿದೆ. ಆದರೆ, ಬಡ ಮೇಲ್ಜಾತಿಯವರಿಗೆ ಮೀಸಲಾತಿ ಕಲ್ಪಿಸುವ ಚಿಂತನೆ ಇದೇ ಮೊದಲಲ್ಲ. ಮೀಸಲಾತಿ ನೀಡುವ ಮಂಡಲ್ ಆಯೋಗದ ವರದಿ ಅನುಷ್ಠಾನಕ್ಕೆ ಬಂದ ಬೆನ್ನಲ್ಲೇ 1991ರಲ್ಲಿ ಪಿವಿ ನರಸಿಂಹರಾವ್ ನೇತೃತ್ವದ ಕಾಂಗ್ರೆಸ್ ಸರಕಾರ ಮೇಲ್ಜಾತಿಯ ಬಡವರಿಗೆ ಶೇ. 10 ಮೀಸಲಾತಿ ಕೊಡಲು ನಿರ್ಧರಿಸಿತ್ತು. ಆಗ ಕಾಂಗ್ರೆಸ್ ಸರಕಾರದ ಕ್ರಮಕ್ಕೆ ಕಂಟಕವಾಗಿ ನಿಂತವರು ಇಂದ್ರಾ ಸಾಹನಿ. ಪಿವಿಎನ್ ರಾವ್ ಸರಕಾರದ ಕ್ರಮಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲವೆಂಬ ವಾದವನ್ನು ಮುಂದಿಟ್ಟುಕೊಂಡು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಇಂದ್ರಾ ಸಾಹನಿ ಅವರು ಮೇಲ್ಜಾತಿಯವರಿಗೆ ಮೀಸಲಾತಿ ಕಲ್ಪಿಸುವ ಕ್ರಮಕ್ಕೆ ತಡೆ ತರುವಲ್ಲಿ ಯಶಸ್ವಿಯಾಗಿದ್ದರು. ಈಗ ಅದೇ ಇಂದ್ರಾ ಸಾಹನಿ ಅವರು ಮೋದಿ ಸರಕಾರದ ಕ್ರಮವನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲು ಏರುವ ಚಿಂತನೆಯಲ್ಲಿದ್ದಾರೆ.

ಆಗ ಆಗಿದ್ದೇನು?
ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಇರುವ ಮೀಸಲಾತಿಯ ಜೊತೆಗೆ ಹಿಂದುಳಿದ ವರ್ಗಗಳಿಗೆ ಶೇ. 27ರಷ್ಟು ಮೀಸಲಾತಿ ಕಲ್ಪಿಸಲು ಶಿಫಾರಸು ಮಾಡಿದ ಮಂಡಲ್ ಆಯೋಗದ ವರದಿಯನ್ನು 1992ರಲ್ಲಿ ಪಿವಿ ನರಸಿಂಹ ರಾವ್ ನೇತೃತ್ವದ ಕೇಂದ್ರ ಸರಕಾರ ಜಾರಿಗೊಳಿಸಿತು. ಅದೇ ವರ್ಷದಂದು ಮೇಲ್ಜಾತಿಯ ಬಡವರಿಗೆ ಶೇ. 10ರಷ್ಟು ಮೀಸಲಾತಿ ಕಲ್ಪಿಸುವ ನಿರ್ಧಾರವನ್ನು ಸರಕಾರ ಕೈಗೊಂಡಿತು. ಒಟ್ಟಾರೆ ಮೀಸಲಾತಿಯು ಶೇ. 49 ಮೀರಬಾರದೆಂಬ ಮಂಡಲ್ ಆಯೋಗದ ಆಶಯವನ್ನು ಇದು ಮೀರಿತ್ತು. ಇದು ದಲಿತರ ಪ್ರತಿಭಟನೆಗೆ ಕಾರಣವಾಯಿತು. ಆಗ ಹಿರಿಯ ನ್ಯಾಯವಾದಿ ಇಂದ್ರಾ ಸಾಹನಿ ಅವರು ಕೇಂದ್ರ ಸರಕಾರದ ಕ್ರಮವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರು.

ಸಂವಿಧಾನದ ಪರಿಚ್ಛೇದ 16(4)ರಲ್ಲಿ ಹಿಂದುಳಿದ ವರ್ಗಗಳನ್ನು ಆರ್ಥಿಕ ಸ್ಥಿತಿಯ ಬದಲು ಜಾತಿಯ ಆಧಾರದ ಮೇಲೆ ಗುರುತಿಸಬೇಕು ಎಂದು ತಿಳಿಸಿದೆ. ಈ ಅಂಶವನ್ನು ಮುಂದಿಟ್ಟುಕೊಂಡು ಇಂದ್ರಾ ಸಾಹನಿ ಮಾಡಿದ ವಾದಕ್ಕೆ 9 ಸದಸ್ಯರ ಸುಪ್ರೀಂ ಕೋರ್ಟ್ ಪೀಠವು ಮನ್ನಣೆ ಕೊಟ್ಟು ಪಿವಿ ನರಸಿಂಹ ರಾವ್ ಸರಕಾರದ ಕ್ರಮವನ್ನು ಅನೂರ್ಜಿತಗೊಳಿಸಿ ಐತಿಹಾಸಿಕ ತೀರ್ಪು ನೀಡಿತು.

ಮೋದಿ ಸರಕಾರದಿಂದ ಹೋಂ ವರ್ಕ್:
ಈಗ ಮೋದಿ ಸರಕಾರ ಕೂಡ ಇದೇ ಕ್ರಮಕ್ಕೆ ಮುಂದಾಗಿರುವ ಹಿನ್ನೆಲೆಯಲ್ಲಿ ಇಂದ್ರಾ ಸಾಹನಿಗೆ ಮತ್ತೊಮ್ಮೆ ಗೆಲುವು ತಂದುಕೊಡುತ್ತಾ ಎಂಬುದು ಸದ್ಯದ ಪ್ರಶ್ನೆ. ಆದರೆ, ಪಿವಿಎನ್​ ರಾವ್ ಸರಕಾರದ ಅವಧಿಯಲ್ಲಾಗಿದ್ದ ಈ ಬೆಳವಣಿಗೆಯ ಅರಿವು ಈಗಿನ ಮೋದಿ ಸರಕಾರಕ್ಕಿದ್ದಂತಿದೆ. ಮೇಲ್ಜಾತಿ ಬಡವರಿಗೆ ಮೀಸಲಾತಿ ನೀಡಲು ಇದ್ದ ಸಾಂವಿಧಾನಿಕ ತಡೆಯನ್ನು ಮೋದಿ ಸರಕಾರ ಮೊದಲು ತೆಗೆದುಹಾಕಲು ಮುಂದಾಗಿದೆ. ಹಿಂದುಳಿದ ವರ್ಗಗಳನ್ನು ಜಾತಿಯ ಆಧಾರದ ಮೇಲೆ ಗುರುತಿಸಬೇಕೆಂದಿರುವ ಅಂಶ ಸೇರಿದಂತೆ ಸಂವಿಧಾನದ 14 ಮತ್ತು 16ನೇ ಪರಿಚ್ಛೇದಲ್ಲಿ ತುಸು ತಿದ್ದುಪಡಿ ತರುವ ನೂತನ ಮಸೂದೆಯನ್ನು ರಚಿಸಿ ಸಂಸತ್ ಸಮ್ಮತಿ ಪಡೆಯಲು ಮುಂದಾಗಿದೆ. ಈ ಸಂವಿಧಾನದ ತಿದ್ದುಪಡಿ ಮಸೂದೆಗೆ ಸಂಸತ್​ನ ಎರಡೂ ಸದನಗಳಲ್ಲಿ ಸಮ್ಮತಿ ಸಿಕ್ಕರೆ ಸುಪ್ರೀಂ ಕೋರ್ಟ್​ನಿಂದ ಯಾವುದೇ ತಡೆ ಸಿಕ್ಕುವುದಿಲ್ಲವೆಂಬ ವಿಶ್ವಾಸದಲ್ಲಿ ಕೇಂದ್ರವಿದೆ.

ಆದರೆ, ಇಂದ್ರಾ ಸಾಹನಿ ಅವರು 1992ರ ಸುಪ್ರೀಂ ಕೋರ್ಟ್ ತೀರ್ಪು ಈ ಬಾರಿಯೂ ಮಹತ್ವದ ಪ್ರಭಾವ ಹೊಂದುವ ವಿಶ್ವಾಸದಲ್ಲಿದ್ದಾರೆ. ಮೋದಿ ಅವರ ಹೊಸ ಹೆಜ್ಜೆಗೆ ಸುಪ್ರೀಂ ಕೋರ್ಟ್ ಯಾವ ರೀತಿ ಸ್ಪಂದಿಸುತ್ತದೆ ಎಂಬುದನ್ನು ಕಾದುನೋಡಬೇಕು.

Comments are closed.