ಕರ್ನಾಟಕ

ರಾಜ್ಯದಲ್ಲಿ ಇಂಗ್ಲಿಷ್‌ ಮಾಧ್ಯಮ ಶಾಲೆಗಳು ಅಗತ್ಯ: ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಸಮರ್ಥನೆ

Pinterest LinkedIn Tumblr


ಬೆಂಗಳೂರು: 84ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ವಿರುದ್ಧವಾಗಿ ನಿರ್ಣಯ ಕೈಗೊಂಡ ಬೆನ್ನಲ್ಲೇ “ಮಕ್ಕಳಿಗೆ ಪ್ರಾಥಮಿಕ ಒಂದನೇ ತರಗತಿಯಿಂದ ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿಕೆ ಅತ್ಯಗತ್ಯ ಹಾಗೂ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಇದು ಅನಿವಾರ್ಯ’ ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಸಮರ್ಥಿಸಿಕೊಂಡಿದ್ದಾರೆ.

ಜತೆಗೆ ಇದನ್ನು ಬರುವ ಶೈಕ್ಷಣಿಕ ವರ್ಷದಿಂದ ಜಾರಿಗೊಳಿಸಲು ಸಿದ್ಧತೆಗಳೂ ನಡೆದಿವೆ. ನಗರದ ಸೆಂಟ್‌ ಜೋಸೆಫ್ ಇಂಡಿಯನ್‌ ಹೈಸ್ಕೂಲ್‌ ಸಭಾಂಗಣದಲ್ಲಿ ಸೋಮವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ವಿಶ್ವೇಶ್ವರಯ್ಯ ಕೈಗಾರಿಕೆ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯ ಸಂಯುಕ್ತವಾಗಿ ಹಮ್ಮಿಕೊಂಡಿದ್ದ “ದಕ್ಷಿಣ ಭಾರತ ರಾಜ್ಯಗಳ ವಿಜ್ಞಾನ ಮೇಳ’ದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

“ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನು ಆರಂಭಿಸುವ ವಿಚಾರದಲ್ಲಿ ಪಕ್ಷದಲ್ಲೇ ನೂರೆಂಟು ಅಭಿಪ್ರಾಯಗಳಿರಬಹುದು. ಹಾಗೆಯೇ ನನ್ನದೂ ಒಂದು ಅಭಿಪ್ರಾಯ ಇರಬಹುದು.

ಆದರೆ, ಇದು ಸರ್ಕಾರದ ನೀತಿ-ನಿರೂಪಣೆಗೆ ಸಂಬಂಧಿಸಿದ್ದಾಗಿದೆ. ಅದರಂತೆ ಒಂದನೇ ತರಗತಿಯಿಂದ ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ.

ಹಾಗಂತ ಕನ್ನಡವನ್ನು ಕಡೆಗಣಿಸುವುದಿಲ್ಲ. ಅದನ್ನೂ ಒಂದು ವಿಷಯವನ್ನಾಗಿ ಬೋಧಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕ ಮುಂದುವರಿದ ರಾಜ್ಯ. ಅದಕ್ಕೆ ಪೂರಕವಾದ ವಾತಾವರಣವೂ ಇಲ್ಲಿದೆ. ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಮಕ್ಕಳಿಗೆ 1ನೇ ತರಗತಿಯಿಂದ ಇಂಗ್ಲಿಷ್‌ ಕಲಿಕೆ ಅತ್ಯಗತ್ಯ. ಇದರೊಂದಿಗೆ 21ನೇ ಶತಮಾನದಲ್ಲಿ ಕನ್ನಡ ಕಳೆದುಹೋಗದಂತೆಯೂ ನೋಡಿಕೊಳ್ಳಲಾಗುವುದು ಎಂದರು. ಇದಕ್ಕೆ ಪೂರಕವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಶಿಕ್ಷಕರಿಗೆ ಇಂಗ್ಲಿಷ್‌ ತರಬೇತಿ, ಪ್ರತ್ಯೇಕ ಅಧ್ಯಯನ ಘಟಕ ಸೇರಿ ಈಗಾಗಲೇ ಸಾಕಷ್ಟು ಪೂರ್ವಸಿದಟಛಿತೆಗಳನ್ನು ಮಾಡಿಕೊಳ್ಳುತ್ತಿದೆ ಎಂದರು.

ಬರುವ ವರ್ಷದಿಂದ ಪ್ರಾಯೋಗಿಕವಾಗಿ ಜಾರಿ: ನಂತರ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ಪಿ.ಸಿ. ಜಾಫ‌ರ್‌,”2018ರ ಅಕ್ಟೋಬರ್‌ 25ರಂದು ಹೊರಡಿಸಿದ ಅಧಿಸೂಚನೆ ಪ್ರಕಾರ ಬರುವ ಶೈಕ್ಷಣಿಕ ವರ್ಷದಿಂದ ಸಾವಿರ ಶಾಲೆಗಳಲ್ಲಿ 1ನೇ ತರಗತಿಗೆ ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿಕೆ ವ್ಯವಸ್ಥೆ ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ’ ಎಂದು ಹೇಳಿದರು.

ಮಕ್ಕಳ ಶಿಕ್ಷಣ ಮಾಧ್ಯಮ ಆಯ್ಕೆ ಮಾಡಿಕೊಳ್ಳುವುದು ಅವರ ತಂದೆ-ತಾಯಿಗೆ ಸೇರಿದ್ದು ಎಂದು ಸುಪ್ರೀಂಕೋರ್ಟ್‌ ಹೇಳಿದೆ. ಇದು ಕನ್ನಡ ಭಾಷೆಗೆ ಮಾತ್ರ ತೊಂದರೆ ಆಗಲ್ಲ. ದೇಶದ 22 ರಾಜ್ಯ ಭಾಷೆಗಳಿಗೆ ಅನ್ವಯಿಸುತ್ತದೆ. ಆದ್ದರಿಂದ ಪ್ರಧಾನಿ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳ ಸಭೆ ನಡೆಸಿ ಒಂದು ತೀರ್ಮಾನ ಕೈಗೊಂಡು ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸಬೇಕು. ಇಲ್ಲವೇ ಸಂವಿಧಾನ ತಿದ್ದುಪಡಿ ಮಾಡಬೇಕು.
– ಸಿದ್ದರಾಮಯ್ಯ, ಮಾಜಿ ಸಿಎಂ

Comments are closed.