ಕರ್ನಾಟಕ

ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಮತ್ತೋರ್ವ ಕಾಂಗ್ರೆಸ್ ನಾಯಕನಿಗೆ ಕೋಕ್?

Pinterest LinkedIn Tumblr


ಬೆಂಗ​ಳೂರು : ಕರ್ನಾ​ಟಕ ಮಾಲಿನ್ಯ ನಿಯಂತ್ರಣ ಮಂಡಳಿಗೆ ಅಧ್ಯ​ಕ್ಷ​ರ​ನ್ನಾಗಿ ಕಾಂಗ್ರೆಸ್‌ ನಾಯ​ಕತ್ವ ಸೂಚಿ​ಸಿ​ರುವ ಚಿಕ್ಕ​ಬ​ಳ್ಳಾ​ಪುರ ಶಾಸಕ ಡಾ.ಸುಧಾ​ಕರ್‌ ಅವರಿಗೆ ಶತಾ​ಯ​ಗ​ತಾಯ ಹುದ್ದೆ ತಪ್ಪಿ​ಸಲು ಸಜ್ಜಾ​ಗಿ​ರುವ ಜೆಡಿ​ಎಸ್‌ ನಾಯ​ಕತ್ವವು ಮಂಡ​ಳಿಯ ಅಧ್ಯಕ್ಷ ಹುದ್ದೆಗೆ ಇರುವ ಮಾನ​ದಂಡಗಳನ್ನು ತರಾ​ತು​ರಿ​ಯಲ್ಲಿ ಬದ​ಲಾ​ಯಿ​ಸಲು ಮುಂದಾ​ಗಿದ್ದು, ಜ.15ರಂದು ನಡೆ​ಯ​ಲಿ​ರುವ ಸಚಿವ ಸಂಪುಟ ಸಭೆ​ಯಲ್ಲಿ ಮಂಡಳಿ ಅಧ್ಯಕ್ಷ ಹುದ್ದೆಗೆ ಪರಿ​ಷ್ಕೃತ ಮಾನ​ದಂಡಕ್ಕೆ ಒಪ್ಪಿಗೆ ಪಡೆ​ಯಲು ಮುಂದಾ​ಗಿದೆ ಎಂದು ಕಾಂಗ್ರೆಸ್‌ ಮೂಲ​ಗಳು ಆರೋ​ಪಿ​ಸಿ​ವೆ.

ಮಾಲಿನ್ಯ ನಿಯಂತ್ರಣ ಮಂಡ​ಳಿ​ಗೆ ನಿರ್ದಿಷ್ಟ ಮಾನ​ದಂಡ​ಗ​ಳನ್ನು ರೂಪಿ​ಸು​ವಂತೆ ಸುಪ್ರೀಂಕೋ​ರ್ಟ್‌ ಆರು ತಿಂಗಳ ಹಿಂದೆ ನೀಡಿದ್ದ ನಿರ್ದೇ​ಶ​ನ​ವನ್ನು ಇದೀಗ ತರಾ​ತು​ರಿ​ಯಲ್ಲಿ ಜಾರಿಗೆ ತರಲು ಸರ್ಕಾರ ಮುಂದಾ​ಗಿದ್ದು, ಇದರ ಪರಿ​ಣಾ​ಮ​ವಾಗಿ ಮಂಡ​ಳಿ ಅಧ್ಯಕ್ಷ ಹುದ್ದೆಯ ಮಾನ​ದಂಡ​ವನ್ನು ಪರಿ​ಷ್ಕ​ರಿ​ಸಲಾ​ಗಿದೆ. ಅದಕ್ಕೆ ಸಚಿವ ಸಂಪು​ಟದ ಅನು​ಮೋ​ದನೆ ಪಡೆ​ಯಲು ಸಜ್ಜಾ​ಗಿದೆ. ಈ ಪರಿ​ಷ್ಕೃತ ಮಾನ​ದಂಡದ ಪ್ರಕಾರ ವಿಜ್ಞಾನ ವಿಷ​ಯ​ದಲ್ಲಿ ಸ್ನಾತ​​ಕೋ​ತ್ತರ ಪದವಿ ಹಾಗೂ ಎಂಜಿ​ನಿ​ಯ​ರಿಂಗ್‌ ವಿಷ​ಯ​ದಲ್ಲಿ ಸ್ನಾತಕ ಪದವಿ ಪಡೆ​ದ​ವರು ಮಾತ್ರ ಈ ಹುದ್ದೆ ಅಲಂಕ​ರಿ​ಸಲು ಅರ್ಹರು ಎಂದು ಬದ​ಲಾ​ಯಿ​ಸಲು ಸಜ್ಜಾ​ಗಿದೆ ಎಂದು ಆರೋ​ಪಿ​ಸ​ಲಾ​ಗು​ತ್ತಿ​ದೆ.

ನಿಯಮ ಬದಲಿಸಿದರೆ ಸುಧಾಕರ್‌ಗೆ ಹುದ್ದೆಯಿಲ್ಲ: ವಿಜ್ಞಾನ ಶಾಖೆ​ಯಲ್ಲಿ ಸ್ನಾತ​ಕೋ​ತ್ತರ ಪದವಿ ಹಾಗೂ ಎಂಜಿ​ನಿ​ಯ​ರಿಂಗ್‌ ಶಾಖೆ​ಯಲ್ಲಿ ಸ್ನಾತಕ ಪದವಿ ಪಡೆ​ದಿ​ರು​ವ​ವರು ಮಾತ್ರ ಅರ್ಹರು ಎಂದು ಮಾನ​ದಂಡ ಬದ​ಲಾ​ದರೆ ಸಹ​ಜ​ವಾ​ಗಿಯೇ ವೈದ್ಯ ಪದವಿ (ಎಂಬಿ​ಬಿ​ಎ​ಸ್‌) ಪಡೆ​ದಿ​ರುವ ಡಾ.ಸುಧಾ​ಕರ್‌ ಅವರು ಅನ​ರ್ಹ​ರಾ​ಗು​ವಂತೆ ಮಾಡಿದಂತಾ​ಗು​ತ್ತದೆ. ಜೆಡಿ​ಎಸ್‌ ವರಿ​ಷ್ಠರ ಈ ತರಾ​ತುರಿ ನಿರ್ಧಾ​ರದ ಹಿಂದೆ ಕಾಂಗ್ರೆಸ್‌ ಶಾಸ​ಕಾಂಗ ಪಕ್ಷದ ನಾಯಕ ಸಿದ್ದ​ರಾ​ಮಯ್ಯ ಅವರ ಕಟ್ಟಾ ಬೆಂಬ​ಲಿ​ಗ​ರಾಗಿ ನಿಂತಿ​ರುವ ಪ್ರಮುಖ ಒಕ್ಕ​ಲಿಗ ಸಮು​ದಾ​ಯದ ಶಾಸಕ ಸುಧಾ​ಕರ್‌ ಅವ​ರಿಗೆ ಹುದ್ದೆ ತಪ್ಪಿ​ಸುವ ಮೂಲಕ ಪರೋ​ಕ್ಷ​ವಾಗಿ ಸಿದ್ದ​ರಾ​ಮಯ್ಯ ಅವ​ರಿಗೆ ಟಾಂಗ್‌ ನೀಡುವ ಉದ್ದೇ​ಶ​ವಿದೆ ಎಂದು ಕಾಂಗ್ರೆಸ್‌ ವಲ​ಯ​ದಲ್ಲಿ ವಿಶ್ಲೇ​ಷಿ​ಸ​ಲಾ​ಗು​ತ್ತಿ​ದೆ.

ವಾಸ್ತ​ವ​ವಾಗಿ ಸುಪ್ರೀಂಕೋ​ರ್ಟ್‌ ಮಾಲಿನ್ಯ ನಿಯಂತ್ರಣ ಮಂಡ​ಳಿ ಅಧ್ಯಕ್ಷರ ಆಯ್ಕೆಗೆ ಕೆಲ ಮಾನ​ದಂಡ​ಗ​ಳನ್ನು ಸಲಹೆ ರೂಪ​ದಲ್ಲಿ ನೀಡಿ ರಾಜ್ಯ ಸರ್ಕಾ​ರ​ಗಳು ಇಂತಹ ಮಾನ​ದಂಡ​ಗ​ಳನ್ನು ರೂಪಿ​ಸ​ಬೇಕು ಎಂದು ತಿಳಿ​ಸಿತ್ತು. ಹೀಗೆ ಹೇಳು​ವಾಗ ಎಂಜಿ​ನಿ​ಯ​ರಿಂಗ್‌ನಂತಹ ವೃತ್ತಿ​ಪರ ಶಿಕ್ಷ​ಣ​ದಲ್ಲಿ ಪದವಿ, ವಿಜ್ಞಾನ ವಿಷ​ಯ​ದಲ್ಲಿ ಪದವಿ, ಪರಿ​ಸರ ಸಂರ​ಕ್ಷಣೆಯಂತಹ ವಿಷ​ಯ​ದಲ್ಲಿ ಕೆಲಸ ಮಾಡಿದ ಅನು​ಭವ ಹಾಗೂ ವಿಶೇಷ ಪರಿ​ಣತಿ​ಗ​ಳನ್ನು ಹೊಂದಿ​ರ​ಬೇಕು ಎಂದು ತಿಳಿ​ಸಿ​ತ್ತು.

ಆದರೆ, ರಾಜ್ಯ ಸರ್ಕಾರ ಇಂತಹ ಮಾನ​ದಂಡ​ವನ್ನು ಕಳೆದ ಆರು ತಿಂಗ​ಳಿ​ನಿಂದ ರೂಪಿ​ಸಿ​ರ​ಲಿಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿಯ ಹಿಂದಿನ ಅಧ್ಯಕ್ಷ ಲಕ್ಷ್ಮಣ್‌ ಅವರ ಅವಧಿ ಮುಗಿದ ನಂತರ ಕೆಲ ಕಾಲ ಈ ಹುದ್ದೆ ನೇರ​ವಾಗಿ ಮುಖ್ಯ​ಮಂತ್ರಿ ಅವರ ಸುಪ​ರ್ದಿಗೆ ಬಂದಿತ್ತು. ಈ ಸಂದ​ರ್ಭ​ದಲ್ಲಿ ಅರಣ್ಯ ಇಲಾ​ಖೆಯ ಕಾರ್ಯ​ದರ್ಶಿ ಶಾಂತ​ಕು​ಮಾರ್‌ ಅವರು ಮಾಲಿನ್ಯ ನಿಯಂತ್ರಣ ಮಂಡ​ಳಿಯ ಅಧ್ಯಕ್ಷ ಹುದ್ದೆ ನೇಮ​ಕಾ​ತಿಗೆ ಪರಿ​ಷ್ಕೃತ ಮಾನ​ದಂಡ ರೂಪಿ​ಸುವ ಪ್ರಕ್ರಿಯೆ ನಡೆ​ಸಿ​ದ್ದರು. ಇದೀಗ ಈ ಪ್ರಕ್ರಿಯೆ ಒಂದು ಹಂತಕ್ಕೆ ಬಂದಿದ್ದು, ಸಚಿವ ಸಂಪು​ಟದ ಒಪ್ಪಿಗೆ ಪಡೆ​ಯು​ವುದು ಬಾಕಿ​ಯಿದೆ ಎಂದು ಕಾಂಗ್ರೆ​ಸ್‌ ನಾಯ​ಕರು ವಿವ​ರಿ​ಸು​ತ್ತಾರೆ.

ಕಾಂಗ್ರೆಸ್‌ ನಾಯ​ಕರ ಪ್ರಕಾರ ಪ್ರಕಾರ ಅರಣ್ಯ ಇಲಾ​ಖೆಯ ಕಾರ್ಯ​ದರ್ಶಿ ಶಾಂತ​ಕು​ಮಾರ್‌ ಅವರು ಜೆಡಿ​ಎ​ಸ್‌ನ ಉನ್ನತ ನಾಯ​ಕ​ರೊ​ಬ್ಬರ ಕ್ಲಾಸ್‌​ಮೇಟ್‌ ಕೂಡ ಆಗಿದ್ದು, ಆತ್ಮೀಯ ಸಂಬಂಧ ಹೊಂದಿ​ದ್ದಾರೆ. ಈ ಹಿನ್ನೆ​ಲೆ​ಯಲ್ಲಿ ಜೆಡಿ​ಎ​ಸ್‌ನ ಸದರಿ ನಾಯ​ಕರ ಸೂಚನೆ ಮೇರೆಗೆ ಮಾನ​ದಂಡ ಪರಿ​ಷ್ಕ​ರಿ​ಸ​ಲಾ​ಗಿದೆ. ಅಲ್ಲದೆ, ಶೀಘ್ರವೇ ಕಾರ್ಯ​ದರ್ಶಿ ಹುದ್ದೆ​ಯಿಂದ ನಿವೃ​ತ್ತ​ರಾ​ಗ​ಲಿ​ರುವ ಶಾಂತ​ಕು​ಮಾರ್‌ ಅವ​ರಿಗೂ ಸಹ ಮಾಲಿನ್ಯ ನಿಯಂತ್ರಣ ಮಂಡಳಿ ಹುದ್ದೆಯ ಮೇಲೆ ಕಣ್ಣಿದೆ ಎಂದು ಹೇಳ​ಲಾ​ಗು​ತ್ತಿ​ದೆ.

ವಾಸ್ತ​ವ​ವಾಗಿ ಜೆಡಿ​ಎಸ್‌ ನಾಯ​ಕ​ತ್ವವು ಈ ಹುದ್ದೆ​ಯನ್ನು ಮಾಜಿ ಕುಲಪತಿ ಪ್ರೊ.ರಂಗಪ್ಪ ಅವ​ರಿಗೆ ನೀಡಲು ಬಯ​ಸಿದೆ. ರಂಗಪ್ಪ ಅವರ ಬಗ್ಗೆ ಹಲವು ಆರೋ​ಪ​ಗ​ಳಿ​ರು​ವು​ದರಿಂದ ಏನಾ​ದರೂ ಅಡ್ಡಿ ಉಂಟಾ​ದರೆ ಆಗ ಸದರಿ ಹುದ್ದೆ​ಯನ್ನು ಶಾಂತ​ಕು​ಮಾರ್‌ ಅವ​ರಿಗೆ ನೀಡು​ವುದು ಜೆಡಿ​ಎಸ್‌ ನಾಯ​ಕ​ತ್ವದ ಉದ್ದೇಶ ಎಂದು ಕಾಂಗ್ರೆಸ್ಸಿಗರು ಅನು​ಮಾನ ವ್ಯಕ್ತ​ಪ​ಡಿ​ಸು​ತ್ತಾರೆ.

Comments are closed.