ಕರ್ನಾಟಕ

ಸಿಎಂ ಕುಮಾರಸ್ವಾಮಿ-ಚಂಪಾ ಮಧ್ಯೆ ಮುಂದುವರಿದ ಮಾತಿನ ಚಕಮಕಿ; ಚಂಪಾ ಹೇಳಿದ್ದೇನು..?

Pinterest LinkedIn Tumblr

ಹುಬ್ಬಳ್ಳಿ: ಧಾರವಾಡದಲ್ಲಿ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ವೇಳೆ ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ್ ಅವರ ಹೇಳಿಕೆಯಿಂದ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತೀವ್ರ ಆಕ್ರೋಶಕ್ಕೀಡಾಗಿದ್ದಾರೆ. ನಿನ್ನೆ ಪ್ರತಿಕ್ರಿಯೆ ನೀಡಿದ ಅವರು ಚಂಪಾ ಅವರು ಮಾತನಾಡುವಾಗ ಇತಿಮಿತಿ ಮೀರದಿರುವುದು ಒಳ್ಳೆಯದು ಎಂದು ಹೇಳಿದ್ದಾರೆ.

ತಮ್ಮ ಮೊಮ್ಮಗ ಕನ್ನಡ ಮಾಧ್ಯಮದಲ್ಲಿಯೇ ಓದಿದ್ದು ಎಂದು ಚಂಪಾ ಅವರು ಹೇಳಿದ ನಂತರ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ, ತಮ್ಮ ಸರ್ಕಾರ ಕನ್ನಡ ಭಾಷೆಯ ಉಳಿವು-ಬೆಳವಣಿಗೆಗೆ ಬದ್ಧವಾಗಿದ್ದು ಸರ್ಕಾರ ಮಾಧ್ಯಮ ಶಾಲೆಗಳಲ್ಲಿ ಆಂಗ್ಲಮಾಧ್ಯಮ ಪ್ರಾರಂಭಿಸಲು ಯಾರ ಬಳಿಯಿಂದಲೂ ಸಲಹೆ ಪಡೆಯಲು ತಯಾರಿದ್ದೇವೆ. ಈ ಬಗ್ಗೆ ಉನ್ನತ ಮಟ್ಟದ ಸಭೆ ನಡೆಸಿ ಪರಿಶೀಲನೆ ನಡೆಸಲಾಗುವುದು ಎಂದರು.

ಮುಖ್ಯಮಂತ್ರಿಗಳು ಮೈತ್ರಿ ಧರ್ಮ ಪಾಲಿಸುತ್ತಿಲ್ಲ ಎಂಬ ಚಂಪಾ ಅವರ ಟೀಕೆಗೆ, ಅವರಿಗೆ ಮೈತ್ರಿಯ ಬಗ್ಗೆ ಏನು ಗೊತ್ತಿದೆ. ಅವರಿಗೆ ಗೊತ್ತಿಲ್ಲದ ವಿಷಯದ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದರು.

ನನ್ನ ಮಕ್ಕಳು ಓದಿದ್ದು ಕನ್ನಡ ಮಾಧ್ಯಮದಲ್ಲಿ: ನಿನ್ನೆ ಕೂಡ ಸಾಹಿತಿ ಚಂಪಾ ಮತ್ತು ಮುಖ್ಯಮಂತ್ರಿಗಳ ನಡುವೆ ಮಾತಿನ ಚಕಮಕಿ ಮುಂದುವರಿದಿತ್ತು. ತಮ್ಮ ಮಕ್ಕಳು ಧಾರವಾಡದಲ್ಲಿ ಸರ್ಕಾರಿ ಮಾಧ್ಯಮ ಶಾಲೆಯಲ್ಲಿ ಓದಿದ್ದು. ನನ್ನ ಮಗಳು ಮತ್ತು ಮಗಳು ಕಲಿತಿದ್ದು, ನನ್ನ ಮಗಳ ಮಕ್ಕಳು ಬೆಂಗಳೂರಿನಲ್ಲಿ ಅನುದಾನಿತ ಶಾಲೆಯಲ್ಲಿ ಓದುತ್ತಿದ್ದಾರೆ. ಮುಖ್ಯಮಂತ್ರಿಗಳಿಗೆ ಯಾರೋ ತಪ್ಪು ಮಾಹಿತಿ ನೀಡಿರಬೇಕು. ಮಗನ ಮಗ ಕೂಡ ಕನ್ನಡ ಮಾಧ್ಯಮದಲ್ಲಿ ಕಲಿತಿದ್ದು ಇದೀಗ ಕಾಲೇಜಿನಲ್ಲಿದ್ದಾನೆ. ಬೇಕಿದ್ದರೆ ಸಿಎಂ ಕುಮಾರಸ್ವಾಮಿಗಳು ಮಾಹಿತಿ ಪಡೆದುಕೊಳ್ಳಲಿ ಎಂದು ತಿರುಗೇಟು ನೀಡಿದರು.

ಸಿಎಂ ಅವರು ನನಗೆ ಪ್ರಶ್ನೆ ಮಾಡಿದ ಬಗ್ಗೆ ಬೇಸರವಿಲ್ಲ. ಆದರೆ ಅವರು ನೇರವಾಗಿ ಪ್ರಶ್ನೆ ಕೇಳಬಹುದಿತ್ತು, ಆದರೆ ಮಾಧ್ಯಮಗಳ ಮೂಲಕ ಪ್ರಶ್ನೆ ಕೇಳಿದ್ದಾರೆ. ಆದ್ದರಿಂದ ನಾನು ಕೂಡ ಮಾಧ್ಯಮಗಳಿಂದಲೇ ಉತ್ತರ ಕೊಡುತ್ತೆನೆ ಎಂದರು. ಅಲ್ಲದೇ ಕನ್ನಡದ ಬಗ್ಗೆ ತಾವು ಬಹಳ ಕಳಕಳಿ ವ್ಯಕ್ತಪಡಿಸಿದ್ದೀರಿ. ನೀವು ಒಂದು ಜಾತ್ಯಾತೀತ ಪಕ್ಷವಾದ ಕಾರಣ ನಿಮ್ಮ ಮಕ್ಕಳು ಯಾವ ಭಾಷೆಯಲ್ಲಿ ಓದುತ್ತಿದ್ದಾರೆ ಎಂದು ಕೇಳುತ್ತಿದ್ದೇನೆ ಎಂದರು.

ನಾನು ಬಹಳ ಮುಖ್ಯಮಂತ್ರಿಗಳನ್ನು ನೋಡಿದ್ದು, ರಾಜಕಾರಣಿಗಳು ಬಹಳ ಗಂಭೀರವಾಗಿ ಇರಬೇಕು. ಮಾತನಾಡುವಾಗ ತಾಳ್ಮೆ ಕಳೆದುಕೊಳ್ಳದೆ ಮಾತನಾಡಬೇಕು. ಮಾಜಿ ಪ್ರಧಾನಿಗಳಾದ ಎಚ್‍ಡಿ ದೇವೆಗೌಡರು ತಾಳ್ಮೆ ಮನುಷ್ಯ, ಆದರೆ ಅವರ ಮಗ ಯಾಕೋ ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ. ಅವರ ಗೆಳೆಯನಾಗಿ ನಾನು ಅವರು ಸಂಯಮದಿಂದ ಇರಬೇಕು ಎಂದು ಹೇಳುವೆ ಎಂದು ತಿಳಿಸಿದರು. ಅಲ್ಲದೇ ಸಮ್ಮೇಳನದಲ್ಲಿ ಸಿಎಂ ಅವರು ಕೊಟ್ಟ ಮಾತು ನಡೆಸಿಕೊಟ್ಟರೆ ಸಾಕು ಎಂದು ಚಂದ್ರಶೇಖರ್ ಪಾಟೀಲ್ ಹೇಳಿದರು.

Comments are closed.