ಕರ್ನಾಟಕ

ಬೆಂಗಳೂರಿನಲ್ಲಿ ಮರ ಮಾರಾಟಕ್ಕೆ ಸಂಬಂಧಿಸಿ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯ

Pinterest LinkedIn Tumblr

ಬೆಂಗಳೂರು: ಜಮೀನಿನಲ್ಲಿದ್ದ ಮರವೊಂದನ್ನು ಸಾವಿರ ರೂಪಾಯಿಗೆ ಮಾರಾಟ ಮಾಡುವ ವಿಚಾರದಲ್ಲಿ ಜಗಳವುಂಟಾಗಿ 23 ವರ್ಷದ ಯುವಕನನ್ನು ಕೊಚ್ಚಿ ಕೊಲೆ ಮಾಡಿದ ಘಟನೆ ನೆಲಮಂಗಲ ಸಮೀಪ ಮಹಿಮಾಪುರದಲ್ಲಿ ವಾರದ ಹಿಂದೆ ನಡೆದಿದೆ. ಯುವಕನ ಮೃತದೇಹ ನಿನ್ನೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಸಿಕ್ಕಿದೆ.

ಮೃತ ಯುವಕನನ್ನು ನವೀನ್ ಎಂದು ಗುರುತಿಸಲಾಗಿದ್ದು ಈತ ಮಹಿಮಾಪುರದಲ್ಲಿ ಫೈನಾನ್ಸಿಯರ್ ಆಗಿ ಕೆಲಸ ಮಾಡುತ್ತಿದ್ದನು. ಘಟನೆಗೆ ಸಂಬಂಧಿಸಿ ಪೊಲೀಸರು ಆತನ ಸಂಬಂಧಿ ವೇಣುಗೋಪಾಲ್, ಬಂಡೆ ನವೀನ್, ತಿಮ್ಮರಾಜು, ಸುರೇಶ್ ಮತ್ತು ಚಂದ್ರಶೇಖರ್ ಎಂಬುವವರನ್ನು ಬಂಧಿಸಿದ್ದಾರೆ.

ಕಳೆದ ಭಾನುವಾರ ನವೀನ್ ಮತ್ತು ವೇಣುಗೋಪಾಲ್ ಮಧ್ಯೆ ಜಗಳವಾಗಿತ್ತು. ಮರುದಿನ ವೇಣುಗೋಪಾಲ್ ನವೀನ್ ನನ್ನು ಕಾರಿನಲ್ಲಿ ಅಪಹರಿಸಿದ್ದನು. ಆತನ ಜೊತೆ ಮೂವರು ಸ್ನೇಹಿತರಿದ್ದರು. ಕಾರಿನಲ್ಲಿ ಸಕಲೇಶಪುರಕ್ಕೆ ಕರೆದುಕೊಂಡು ಹೋಗಿ ಚೂರಿಯಿಂದ ಇರಿದು ಕೊಂದಿದ್ದಾರೆ. ಶವವನ್ನು ಕಿರಿದಾದ ಸ್ಥಳದಲ್ಲಿ ಎಸೆದು ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮೃತದೇಹವನ್ನು ಶವಪರೀಕ್ಷೆಗೆ ನೆಲಮಂಗಲಕ್ಕೆ ತರಲಾಯಿತು. ತನಿಖೆ ವೇಳೆ ವೇಣುಗೋಪಾಲ್, ಮರ ಕಡಿಯುವ ವಿಚಾರದಲ್ಲಿ ನವೀನ್ ಮತ್ತು ಆತನ ಪೋಷಕರೊಂದಿಗೆ ನಮಗೆ ಜಗಳವಾಗಿತ್ತು ಎಂದು ಬಾಯ್ಬಿಟ್ಟಿದ್ದಾನೆ. ವೇಣುಗೋಪಾಲ್ ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಾರನ್ನು ಕೂಡ ವಶಪಡಿಸಿಕೊಳ್ಳಲಾಗಿದೆ.

Comments are closed.