ಕರ್ನಾಟಕ

ತನ್ನ ತಿಥಿಗೆ ನಾನ್ ವೆಜ್ ಊಟ ಹಾಕಿ ಎಂದ ರಮೇಶ್ ಕುಮಾರ್

Pinterest LinkedIn Tumblr
Health an

ಚಿಕ್ಕಬಳ್ಳಾಪುರ: ನನ್ನ ತಿಥಿಗೆ ನಾನ್ ವೆಜ್ ಊಟ ಹಾಕಸರಪ್ಪ ಎಂದು ಸ್ಪೀಕರ್ ರಮೇಶ್ ಕುಮಾರ್ ಹಾಸ್ಯ ಚಟಾಕಿ ಹಾರಿಸಿದ್ದಾರೆ.

ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಅವಿಭಜಿತ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಹಿರಿಯ ಧುರೀಣ ಹಾಗೂ ಕ್ಷೀರ ಕ್ರಾಂತಿಯ ಹರಿಕಾರರಾಗಿದ್ದ ದಿವಂಗತ ಎಂ.ವಿ.ಕೃಷ್ಣಪ್ಪ ನವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ರಮೇಶ್ ಕುಮಾರ್ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿ, ನನಗೀಗ 70 ವರ್ಷ ವಯಸ್ಸಾಗಿದೆ, 10 ಎಲೆಕ್ಷನ್ ಮಾಡಿದ್ದೇನೆ. ನನ್ನ ಸಾವು ಯಾವಾಗ ಹೇಗೆ ಅಂತ ಗೊತ್ತಿಲ್ಲ, ನಾನು ಸಾವಿನ ವೈಟಿಂಗ್ ಲಿಸ್ಟ್ ನಲ್ಲಿದ್ದೇನೆ. ನಮ್ಮ ಮನೆಯಲ್ಲಿ ತಿಥಿ ಮಾಡಿದರೆ ನಮ್ಮವರು 14-15 ಜನ ಸೇರುತ್ತಾರೆ. ಪಾಯಸ ವಡೆ ಹಾಕಿ ತಿಥಿ ಹೊಟ್ಟೆ ತುಂಬ ತಿಂದು ಕಾರ್ಯ ಮುಗಿಸಿಬಿಡುತ್ತಾರೆ. ಆದರೆ ನಾನು ಎರಡು ಊಟ ಮಾಡುವವನು. ಹಾಗಾಗಿ ನನಗೆ ಆ ಊಟನೂ ಹಾಕಬೇಕಲ್ಲಪ್ಪ, ನಮ್ಮ ಮನೆಯಲ್ಲಿ ಆ ಊಟ ಹಾಕಲಿಲ್ಲ ಆಂದರೆ ನೀವಾದ್ರೂ ಹಾಕಿಸಿ ಎಂದು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಕ್ಷೇತ್ರದ ಶಾಸಕ ಹಾಗೂ ವಿಧಾನಸಭೆ ಸಭಾಧ್ಯಕ್ಷ ರಮೇಶ್ ಕುಮಾರ್ ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಅವಿಭಜಿತ ಕೋಲಾರ – ಚಿಕ್ಕಬಳ್ಳಾಪುರ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಹಿರಿಯ ಧುರೀಣ ಹಾಗೂ ಕ್ಷೀರ ಕ್ರಾಂತಿಯ ಹರಿಕಾರರಾಗಿದ್ದ ದಿವಂಗತ ಎಂ ವಿ ಕೃಷ್ಣಪ್ಪ ನವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಆಚರಿಸಿಲು ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ರಮೇಶ್ ಕುಮಾರ್ ಮಾತನಾಡಿದರು. ಈ ವೇಳೆ ಎಂ ವಿ ಕೃಷ್ಣಪ್ಪ ನವರ ಜೀವನ ಯಶೋಗಾಥೆ, ಸಾಧನೆಗಳನ್ನ ಬಿಚ್ಚಿಟ್ಟು, ವಾಸ್ತವ ರಾಜಕೀಯ ಜೀವನ ನೆನೆದು ಭಾವುಕರಾದರು.

ಎಂ ವಿ ಕೃಷ್ಣಪ್ಪ ನವರು ಹಾಕಿದ ಅಡಿಪಾಯದಲ್ಲಿ ನಮ್ಮ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ನಾಯಕರು ಸಾಗಲಿಕ್ಕೆ ಆಗಲಿಲ್ಲವಲ್ಲ? ನಾವು ಅವರಿಗೆ ಅಪಚಾರ ಮಾಡಿಬಿಟ್ಟಿದ್ದೇವೆ ಎಂದು ಸ್ವತಃ ತಮ್ಮನ್ನ ಹಾಗೂ ಪ್ರಸಕ್ತ ರಾಜಕಾರಣಿಗಳ ಬಗ್ಗೆ ಬೇಸರ ಮಾಡಿಕೊಂಡರು. ಅಖಂಡ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗೆ ಮೊಟ್ಟ ಮೊದಲು ಡೆನ್ಮಾರ್ಕ್ ನಿಂದ ಸೀಮೆ ಹಸುಗಳನ್ನ ವಿಮಾನದ ಮೂಲಕ ತರಿಸಿ ಕ್ಷೀರಕ್ರಾಂತಿ ಮಾಡಿದ ಮಹಾನ್ ವ್ಯಕ್ತಿ ಎಂ ವಿ ಕೃಷ್ಣಪ್ಪ. ಆದರೆ ಅವರು ಮನೆ ಹಾಗೂ ಮಕ್ಕಳಿಗಾಗಿ ಏನೂ ಆಸ್ತಿ ಮಾಡಲಿಲ್ಲ. ಇವತ್ತು ಅವರ ಮಗ ಆಶೋಕ್ ಇಲ್ಲಿದ್ದಾರೆ. ಆದರೆ ಅವರು ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ ಎಂದು ಮರುಕ ಪಟ್ಟರು.

ಇಂದಿನ ನಾಯಕರು ತಮ್ಮ ಮಕ್ಕಳು ಮೊಮ್ಮಕ್ಕಳಿಗೆ, ಆಸ್ತಿ ಅಂತಸ್ತು, ಬಂಗಲೆ, ಫ್ಯಾಕ್ಟರಿ ಮಾಡುವ ಯೋಜನೆಗಳನ್ನು ಹಾಕುತ್ತಾರೆ. ಸ್ವಾರ್ಥ ರಾಜಕಾರಣ ಮಾಡುತ್ತಾರೆ ಎಂದು ಅಸಮಾಧಾನ ತೋಡಿಕೊಂಡರು. ಅಲ್ಲದೇ ಎಂ ವಿ ಕೃಷ್ಣಪ್ಪ ನವರಂತಹ ಮಹಾನ್ ವ್ಯಕ್ತಿಗಳನ್ನ ನೆನೆಯುವ ಯೋಗ್ಯತೆ ಕೂಡ ನಮಗೆ ಇಲ್ಲವೇ…? ಅಂತವರನ್ನ ನೆನೆದು ನಾಡಿಗೆ ಅವರ ಹೆಸರನ್ನ ಪರಿಚಯುವ ಮಾಡುವ ಸಲುವಾಗಿ ದಿವಂಗತ ಜನ್ಮಶತಮಾನೋತ್ಸವ ಕಾರ್ಯ ಮಾಡುವ ಉದ್ದೇಶದಿಂದ ಪೂರ್ವಭಾವಿ ಸಭೆ ನಡೆಸಲಾಗುತ್ತಿದೆ. ಹೀಗಾಗಿ ನಾನು ಇವತ್ತು ದಿವಂಗತ ಕೃಷ್ಣಪ್ಪನವರಿಗೆ ಈ ಕಾರ್ಯ ಮಾಡಿದರೆ ಮುಂದೊಂದು ದಿನ ನೀವು ನನಗೆ ತಿಥಿ ಕಾರ್ಯ ಮಾಡಿ ನಾನ್ ವೆಜ್ ಊಟ ಹಾಕಿಸಿ ಎಂದು ಹಾಸ್ಯ ಮಾಡಿಯೇ ತಮ್ಮೊಳಗಿನ ನೋವು ತೋಡಿಕೊಂಡರು. ಸಭೆಯಲ್ಲಿ ಅಖಂಡ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯ ಜನಪ್ರತಿನಿಧಿಗಳು ಹಾಜರಿದ್ದರು.

Comments are closed.