ಕರ್ನಾಟಕ

ಮಹಿಳೆಯ ಮೂತ್ರಚೀಲದಲ್ಲಿ ಇತಿಹಾಸದಲ್ಲೇ ಪ್ರಥಮ ಭಾರಿಗೆ 580 ಗ್ರಾಂ ಕಲ್ಲು ಪತ್ತೆ!

Pinterest LinkedIn Tumblr


ವಿಜಯಪುರ: ಶಸ್ತ್ರ ಚಿಕಿತ್ಸೆ ವೇಳೆ ಮಹಿಳೆಯ ಮೂತ್ರಚೀಲದಲ್ಲಿ ಬೃಹತ್ ಗಾತ್ರದ ಕಲ್ಲು ಪತ್ತೆಯಾಗಿ ವೈದ್ಯರನ್ನು ಅಚ್ಚರಿ ಮೂಡಿಸಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ನಗರದ ಬಿ‌ ಎಲ್‌ ಡಿ ಇ ಆಸ್ಪತ್ರೆಯಲ್ಲಿ ಸಿಂದಗಿ ಮೂಲದ 40 ವರ್ಷದ ಮಹಿಳೆಯ ಮೂತ್ರ ಚೀಲದಲ್ಲಿ 580 ಗ್ರಾಂ ಕಲ್ಲು ಇರುವುದನ್ನು ಕಂಡು ಆಸ್ಪತ್ರೆ ವೈದ್ಯರೆ ಬೆರಗಾಗಿದ್ದಾರೆ ಎನ್ನಲಾಗಿದೆ.

ಸತತ ಮೂರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಕಲ್ಲುಗಳನ್ನು ವೈದ್ಯರು ಹೊರ ತೆಗೆದಿದ್ದಾರೆ. ಇಷ್ಟು ದೊಡ್ಡ ಕಲ್ಲು ಪತ್ತೆಯಾಗಿದ್ದುಇದೇ ಮೊದಲು ಎಂದು ವೈದ್ಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಪುರುಷರ ಮೂತ್ರನಾಳದಲ್ಲಿ ಕಲ್ಲು ನಿರ್ಮಾಣವಾಗುವುದು ಸಾಮಾನ್ಯ. ಆದರೆ, ಮಹಿಳೆಯರಿಗೆ ಇಂತಹ ಪ್ರಸಂಗಗಳು ಎದುರಾಗುವುದು ಅಪರೂಪವೆನ್ನಲಾಗಿದೆ.

ಆಸ್ಪತ್ರೆಯ ವೈದ್ಯರಾದ ಡಾ. ಸಂತೋಷ ಪಾಟೀಲ, ಡಾ. ಅನುಜ ಜೈನ್, ಡಾ. ಅಭಿಸಾಯಿ ಅವರುಗಳು ಶಸ್ತ್ರಚಿಕಿತ್ಸೆ ಮಾಡಿದ್ದು, ಸಿಬ್ಬಂದಿ ಪ್ರೀತು ದಶವಂತ್ ಚಿಕಿತ್ಸೆಗೆ ಸಹಾಯ ಮಾಡಿದ್ದಾರೆ.

ಮಹಿಳೆಯ ಮೂತ್ರಚೀಲದಲ್ಲಿ ಪತ್ತೆಯಾದ ಕಲ್ಲು

ವೈದ್ಯಕೀಯ ಭಾಷೆಯಲ್ಲಿ ಇದರ ಹೆಸರು ವೆಸಿಕಲ್ ಕ್ಯಾಲ್ಕಸ್ ಎನ್ನಲಾಗಿದೆ. ಮೂತ್ರ ಚೀಲದಲ್ಲಿ ಕಲ್ಲು ಪತ್ತೆ ಮಾಡಿದ ವೈದ್ಯರು ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆಯನ್ನು ಮಾಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಮೂತ್ರಕೋಶದಲ್ಲಿ(Urinary Bladder) ಕಲ್ಲು ಹೇಗೆ ಬರುತ್ತದೆ?

ಮೂತ್ರಕೋಶ ಅಥವಾ ಮೂತ್ರಚೀಲದಲ್ಲಿ ವಿವಿಧ ಕಾರಣಗಳಿಂದ ಕಲ್ಲು ಕಟ್ಟುತ್ತದೆ. ಮೂತ್ರನಾಳದಲ್ಲಿ ಕಾಲಾನುಕ್ರಮದಲ್ಲಿ ಖನಿಜಗಳು ಶೇಖರಣೆಗೊಂಡು ಸಣ್ಣಸಣ್ಣ ಕಲ್ಲುಗಳ ರೂಪ ಪಡೆಯುತ್ತವೆ. ಮೂತ್ರ ಸಮಸ್ಯೆಗೆ ಸರಿಯಾಗಿ ಚಿಕಿತ್ಸೆ ಪಡೆಯದೆ ನಿರ್ಲಕ್ಷ್ಯ ವಹಿಸಿದರೆ ಮೂತ್ರನಾಳದಲ್ಲಿ ಕಲ್ಲು ಶೇಖರಣೆಯಾಗಬಹುದು. ಮೂತ್ರದಲ್ಲಿ ರಕ್ತ ಸೇರಿಕೊಂಡರೂ ಈ ಸಮಸ್ಯೆ ಉದ್ಭವಿಸುತ್ತದೆ.

ಮೂತ್ರಚೀಲದಲ್ಲಿ ಕಲ್ಲುಕಟ್ಟುವ ಸಮಸ್ಯೆ ಸಾಮಾನ್ಯವಾಗಿ 50 ವರ್ಷ ಮೇಲ್ಪಟ್ಟ ಪುರುಷರನ್ನು ಬಾಧಿಸುತ್ತದಂತೆ. ಮಹಿಳೆಯರಲ್ಲಿ ಈ ಸಮಸ್ಯೆ ಅಪರೂಪ. ಮೂತ್ರಕೋಶದಲ್ಲಿ ಕಲ್ಲು ಉದ್ಭವಿಸಿದ್ದರೆ, ಮೂತ್ರದ ಬಣ್ಣ ಬದಲಾಗುತ್ತದೆ ಹಾಗೂ ಮೂತ್ರ ವಿಸರ್ಜಿಸುವಾಗ ನೋವಾಗುತ್ತದೆ.

Comments are closed.