ರಾಷ್ಟ್ರೀಯ

ಲೋಕಸಭೆ ಚುನಾವಣೆ: ಮೋದಿ, ರಾಹುಲ್ ಮೀರಿ ಪ್ರಾದೇಶಿಕ ಪಕ್ಷಗಳದ್ದೇ ಪಾರುಪತ್ಯ

Pinterest LinkedIn Tumblr


ನವದೆಹಲಿ: ಈಗಷ್ಟೇ ಗತಿಸಿದ ವರ್ಷದಲ್ಲಿ ಸೂತ್ರ ಆಧಾರಿತ ರಾಜಕಾರಣ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದನ್ನು ನೋಡಿದ್ದೇವೆ. ಚುನಾವಣಾ ತಂತ್ರಗಳು ಹೊಸದಾಗಿದ್ದರೂ ಅದೇ ಹಳೆಯ ಜನಪ್ರಿಯ ಯೋಜನೆಗಳು, ಆಶ್ವಾಸನೆಗಳು, ನಿರ್ದಿಷ್ಟ ಸಮುದಾಯ ಕೇಂದ್ರಿತ ಭರವಸೆಗಳನ್ನ ಕೊಟ್ಟ ರಾಜಕೀಯ ಪಕ್ಷಗಳಿಗೆ ಅಧಿಕಾರ ಪ್ರಾಪ್ತವಾಗಿದೆ. ಕಾಂಗ್ರೆಸ್ ಪಕ್ಷವು ಬಹುಸಂಖ್ಯಾ ಭಾವನೆಗೆ ಸ್ಪಂದಿಸಿತು; ಅಹಿಂದ ಸಮುದಾಯಗಳನ್ನ ಓಲೈಕೆ ಮಾಡಿತು; ರೈತರಿಗೆ ಚಂದ್ರನನ್ನು ತೋರಿಸುವ ಆಸೆಯನ್ನಿತ್ತು ಸೆಳೆಯಿತು. ಅತ್ತ, ಭಾರತೀಯ ಜನತಾ ಪಕ್ಷ ಯಾವ ರೀತಿಯಲ್ಲಿ ಜನರ ಮುಂದೆ ಹೋಗಿ ಮತ ಕೇಳಬೇಕೆಂದು ದಿಕ್ಕು ತೋಚದೆ ಹಳಿ ತಪ್ಪಿತು.

ಮತದಾರರ ದೃಷ್ಟಿಯಿಂದ ನಿಂತು ನೋಡಿದರೆ, 2013ರ ಪರಿಸ್ಥಿತಿಗೂ ಇವತ್ತಿನ ಸಂದರ್ಭಕ್ಕೂ ಕಾಣುವ ಪ್ರಮುಖ ಪ್ರಮುಖ ಅಂಶವೆಂದರೆ, ಜನರಿಗೆ ಕೊಟ್ಟಿದ್ದ ‘ಭರವಸೆ’ ಇನ್ನೂ ಭರವಸೆಯಾಗಿಯೇ ಉಳಿದಿರುವುದು. ಆ ಚುನಾವಣೆಯಲ್ಲಿದ್ದ ಅಭಿವೃದ್ಧಿ ಮಂತ್ರವು ಯಾವುದೇ ಫಲ ಕೊಡಲು ವಿಫಲವಾಗಿದೆ. ಉತ್ತಮ ಭವಿಷ್ಯಕ್ಕೆ ಬೇಕಾದ ಯಾವುದೇ ಪರ್ಯಾಯ ದೃಷ್ಟಿಕೋನವಾಗಲೀ, ಭರವಸೆಯಾಗಲೀ ಈಗ ಇಲ್ಲವೇ ಇಲ್ಲ.

ಈ ನಿರ್ವಾತ ಸ್ಥಿತಿಯನ್ನು ಬಳಸಿಕೊಂಡು ಕೇಂದ್ರದ ವಿರುದ್ಧ ಪ್ರಬಲ ಆಡಳಿತವಿರೋಧಿ ಅಲೆ ಎಬ್ಬಿಸಲು ಕಾಂಗ್ರೆಸ್ ಅಷ್ಟೇನೂ ಸಫಲವಾಗಿಲ್ಲ. ಇದಕ್ಕೆ ಬೇಕಾದ ದೃಷ್ಟಿಕೋನವನ್ನು ಕಾಂಗ್ರೆಸ್ ಅಳವಡಿಸಿಕೊಂಡಿಲ್ಲ. 2018ರ ವರ್ಷದ ಮೊದಲಾರ್ಧದಲ್ಲಿ ಕರ್ನಾಟಕ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಆಡಳಿತವಿರೋಧಿ ಅಲೆಗಳಿಂದಾಗಿ ಕಾಂಗ್ರೆಸ್ ಪಕ್ಷವು ಸಾಕಷ್ಟು ಮತಗಳನ್ನ ಕಳೆದುಕೊಂಡಿತು. ವರ್ಷದ ಉತ್ತರಾರ್ಧದಲ್ಲಿ ಕೇಂದ್ರ ಸರಕಾರದ ಬಗ್ಗೆ ಜನರಲ್ಲಿದ್ದ ಅಸಮಾಧಾನವನ್ನು ಕೆರಳಿಸುವಲ್ಲಿ ಕಾಂಗ್ರೆಸ್ ಸಫಲವಾಗಿದ್ದು ಹೌದು.

ಮೂರು ಹಿಂದಿ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಗಮನಿಸಬೇಕಾದ ಮುಖ್ಯ ವಿಚಾರವೆಂದರೆ, ಬಿಜೆಪಿಗೆ ಆಡಳಿತವಿರೋಧಿ ಅಲೆಯ ಹೊಡೆತ ಬಿದ್ದಿದ್ದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ಪಕ್ಷವು ಈ ಅಲೆಯನ್ನು ಸಮರ್ಥವಾಗಿ ಉಪಯೋಗಿಸಿಕೊಂಡಿದ್ದು. ರಕ್ಷಣಾ ಆಟದಲ್ಲಿ ಬಿಜೆಪಿ ಶಕ್ತಿ ಕ್ಷೀಣಿಸಿತು. ಬಿಜೆಪಿಯಷ್ಟೇ ಅಲ್ಲ ಯಾವ ಪಕ್ಷ ಕೂಡ ಇಂಥ ರಕ್ಷಣಾ ಆಟದಲ್ಲಿ ಬಲವಾಗಿ ಆಡಲು ಸಾಧ್ಯವಿಲ್ಲ. ಇದು ಪ್ರಜಾತಂತ್ರ ವ್ಯವಸ್ಥೆಯ ಅದ್ಭುತ ಅಂಶಗಳಲ್ಲೊಂದು. ವಿವಿಧ ವಿಚಾರಗಳಿಂದಾಗಿ ಆಡಳಿತಾರೂಢ ಪಕ್ಷಕ್ಕೆ ಯಾವಾಗಲೂ ಕ್ಲಿಷ್ಟಕರ ಸವಾಲೇ ಮುಂದಿರುತ್ತದೆ.

ಇನ್ನು, ಕಾಂಗ್ರೆಸ್​ನ ಹಿರೀಕರು ಸಮರ್ಥವಾಗಿ ಜವಾಬ್ದಾರಿ ನಿಭಾಯಿಸಿದರು. ಬಿಜೆಪಿ ಸರಕಾರಗಳ ವಿರುದ್ಧ ಇದ್ದ ಅತೃಪ್ತಿಯನ್ನು ಬಡಿದೆಬ್ಬಿಸಿ ನೆಗಟಿವ್ ವೋಟ್​ಗಳ ಅಲೆ ಸೃಷ್ಟಿಸಿದರು. ಇದರಿಂದಾಗಿ, ರಾಹುಲ್ ಗಾಂಧಿ ಅವರು ಮೊತ್ತಮೊದಲ ಬಾರಿಗೆ ಒಬ್ಬ ವಿಶ್ವಾಸಾರ್ಹ ರಾಜಕಾರಣಿಯಾಗಿ ವ್ಯಕ್ತವಾಗಲು ಸಾಧ್ಯವಾಯಿತು.

ಅಧಿಕಾರದ ಆಕಾಂಕ್ಷೆಯು ಕಾಂಗ್ರೆಸ್ ಪಕ್ಷಕ್ಕೆ ಟಾನಿಕ್ ಆಗಿದ್ದು ನಿಜ. ಆದರೆ, ಇದೇ ಅಧಿಕಾರದ ವಿಚಾರವು 2019ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕಠಿಣ ಪರಿಸ್ಥಿತಿ ತಂದೊಡ್ಡುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಎರಡು ವಿಚಾರವು ಕಾಂಗ್ರೆಸ್ ಪಕ್ಷವನ್ನು ಬಾಧಿಸುತ್ತಿದೆ. ಒಂದು, ಲೋಕಸಭೆಯಲ್ಲಿ ತನಗೆ ಹೆಚ್ಚು ಸ್ಥಾನಗಳನ್ನು ತಂದುಕೊಡಬಲ್ಲವೆಂದು ಎಣಿಕೆ ಮಾಡಿಕೊಂಡಿದ್ದ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆಡಳಿತವಿರೋಧಿ ಅಲೆ ಎದುರಾಗುವ ಅಪಾಯ ಇದ್ದೇ ಇದೆ. ಮತ್ತೊಂದು ವಿಚಾರವೆಂದರೆ, ಕಾಂಗ್ರೆಸ್​ನೊಳಗೆ ಹೊಸ ತಲೆಮಾರಿಗೆ ಅಧಿಕಾರ ಹಸ್ತಾಂತರವಾಗುವ ಪರ್ವ ನಡೆಯುತ್ತಿದ್ದು, ಇದು ಪಕ್ಷದೊಳಗೆ ಅತೃಪ್ತಿ, ಭಿನ್ನಮತ ಹೆಚ್ಚಿಸುವ ಸಾಧ್ಯತೆ ಇದೆ. ಈ ಎರಡನೇ ವಿಚಾರದಲ್ಲಿ ಕಾಂಗ್ರೆಸ್ ನಾಯಕತ್ವವು ಹಿರಿಯ ತಲೆಮಾರನ್ನು ಇನ್ನೂ ಕಡೆಗಣಿಸುವ ಗೋಜಿಗೆ ಹೋಗಿಲ್ಲ.

ಆದರೆ, ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್​ನಲ್ಲಿನ ಸಮಸ್ಯೆಗಳು ದೊಡ್ಡದೆಂದು ಅನಿಸುವುದಿಲ್ಲ. ಆಡಳಿತ ವಿರೋಧಿ ಅಲೆ, ಅದರಲ್ಲೂ ಜನಸಾಮಾನ್ಯರ ವರಮಾನದಲ್ಲಿ ಏರಿಕೆಯಾಗದೇ ಇರುವುದು ಹಾಗೂ ನಿರುದ್ಯೋಗ ಸಮಸ್ಯೆಗೆ ಪರಿಹಾರ ಸಿಕ್ಕದೇ ಇರುವುದು ಬಿಜೆಪಿಗೆ ಬಹಳ ದುಬಾರಿಯಾಗಿ ಪರಿಣಮಿಸುವ ಸಾಧ್ಯತೆ ಇದೆ. ಗಾಯದ ಮೇಲೆ ಬರೆ ಎಳೆದಂತೆ ದಲಿತರನ್ನು ಓಲೈಸುವ ಪ್ರಯತ್ನದಲ್ಲಿ ಬಿಜೆಪಿಯು ತನ್ನ ಮೇಲ್ವರ್ಗದ ವೋಟ್ ಬ್ಯಾಂಕ್ ಕಳೆದುಕೊಳ್ಳುವ ಸ್ಥಿತಿಯಲ್ಲಿದೆ. ಹಾಗೆಯೇ, ಜಿಎಸ್​ಟಿ ಮೂಲಕ ಅದು ತರಲು ಯತ್ನಿಸಿರುವ ತೆರಿಗೆ ಸುಧಾರಣೆಯು ಅದರ ನಿಷ್ಠಾವಂತ ಬೆಂಬಲಿಗರಿಂದಲೇ ವಿರೋಧ ಕಟ್ಟಿಕೊಳ್ಳುವಂತೆ ಮಾಡಿದೆ.

ಬಿಜೆಪಿಯ ನಾಯಕತ್ವಕ್ಕೆ ಇದಕ್ಕಿಂತಲೂ ದೊಡ್ಡ ಚಿಂತೆ ಕಾಡುತ್ತಿದೆ. ಇತ್ತೀಚಿನದ ಚುನಾವಣೆಗಳ ಸೋಲು ನಾಯಕತ್ವದ ವಿರುದ್ಧ ಸಿಡಿದೇಳಲು ಅನುವು ಮಾಡಿಕೊಟ್ಟಿದೆ. ಕಡೆಗಣಿತ ಮುಖಂಡರು ನಾಯಕತ್ವದ ವಿರುದ್ಧ ಸಾರ್ವಜನಿಕವಾಗಿ ಟೀಕೆ ಟಿಪ್ಪಣಿ ಮಾಡಿ ತಮ್ಮ ಸ್ಥಾನಮಾನ ಹೆಚ್ಚಿಸುವ ಪ್ರಯತ್ನ ಆದರೆ ಬಿಜೆಪಿಯಲ್ಲಿ ಅಲ್ಲೋಲಕಲ್ಲೋಲ ಆಗುವುದರಲ್ಲಿ ಅನುಮಾನವಿಲ್ಲ.

ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಕಾರ್ಯವೈಖರಿ ಬಗ್ಗೆ ಸಾಕಷ್ಟು ಟೀಕೆಗಳಿವೆ. ಕರ್ನಾಟಕ ಸರಕಾರ ರಚನೆಯ ವಿಚಾರದಲ್ಲಿ ಅವರು ನಿರ್ವಹಿಸಿದ ರೀತಿ; ಡಿಜಿಟಲ್ ಮಾರ್ಕೆಟಿಂಗನ್ನೇ ಹೆಚ್ಚಾಗಿ ನೆಚ್ಚಿಕೊಂಡಿದ್ದು; ಎನ್​ಡಿಎ ಮಿತ್ರರನ್ನು ಒಟ್ಟುಗೂಡಿಸಿ ಇರಿಸಿಕೊಳ್ಳಲು ವಿಫಲವಾಗಿದ್ದು ಇವೆಲ್ಲವೂ ಕಟು ವಿಮರ್ಶೆಗೆ ಒಳಗಾಗುತ್ತಿವೆ. ಈಗ ಅಮಿತ್ ಶಾ ಅವರು ರಣರಂಗದಲ್ಲಿ ಮೈದಾನಕ್ಕಿಳಿದೇ ಹೋರಾಡುವುದು ಅನಿವಾರ್ಯ.

ಇಂಥ ಪರಿಸ್ಥಿತಿಯಲ್ಲಿ ಆರೆಸ್ಸೆಸ್ ಮತ್ತೆ ಮುನ್ನೆಲೆ ಬರುತ್ತದೆ. ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಸಂಘಟನೆಯು ಕಟು ಹಿಂದುತ್ವದ ಬದಲು ಮೃದು ಧೋರಣೆಯನ್ನು ಅಳವಡಿಸಿಕೊಳ್ಳಲು ಯತ್ನಿಸಿದ್ದನ್ನು ನೀವು ಗಮನಿಸಿರಬಹುದು. ಆದರೆ, ಈಗ ಅದು ಮತ್ತೆ ಬದಲಾವಣೆ ಮಾಡಿಕೊಂಡಿದ್ದು, ರಾಮ ಜನ್ಮಭೂಮಿ ವಿವಾದವನ್ನ ಚುನಾವಣೆಯ ವಿಷಯವನ್ನಾಗಿ ಮಾಡಿಕೊಳ್ಳ ಹೊರಟಿದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕಾದರೆ ರಾಮ ಜನ್ಮಭೂಮಿ ವಿಚಾರವೊಂದೇ ಮಾರ್ಗ ಎಂಬುದು ಆ ಪಕ್ಷದವರ ನಂಬಿಕೆಯಾಗಿದೆ. ರಾಮಜನ್ಮಭೂಮಿ ವಿಚಾರವು ಮುನ್ನೆಲೆಗೆ ಬಂದರೆ ಮೋದಿ ಅಭಿವೃದ್ಧಿ ರಣತಂತ್ರಗಳಿಗೆ ಧಕ್ಕೆಯಾಗಬಹುದು.

2018ರ ವರ್ಷಾಂತ್ಯದಲ್ಲಿ ಬಿಜೆಪಿಯು ತುಸು ದುರ್ಬಲವಾಗಿಯೂ, ಕಾಂಗ್ರೆಸ್ ಪಕ್ಷವು ತುಸು ಪ್ರಬಲವಾಗಿಯೂ ಕಾಣಿಸುತ್ತಿವೆ. ಆದರೆ, ಅಧಿಕಾರದ ಜುಟ್ಟು ಪ್ರಾದೇಶಿಕ ಶಕ್ತಿಗಳಲ್ಲೇ ಇದೆ ಎಂದು ಸ್ಪಷ್ಟವಾಗಿ ತೋರುತ್ತಿದೆ. ಎಡರಂಗವು ಅವನತಿಯಲ್ಲಿದೆ. ಟಿಡಿಪಿ ಮತ್ತು ಶಿರೋಮಣಿ ಅಕಾಲಿ ದಳವು ಇತ್ತೀಚಿನ ಚುನಾವಣೆಗಳಲ್ಲಿ ಮುಖಭಂಗ ಅನುಭವಿಸಿವೆ.

ಟಿಡಿಪಿ-ಕಾಂಗ್ರೆಸ್ ಪಕ್ಷಗಳ ವಿರುದ್ಧ ಟಿಆರ್​ಎಸ್ ಜಯಭೇರಿ ಭಾರಿಸಿದ್ದು ಹೆಚ್ಚು ಗಮನಾರ್ಹ. ಟಿಆರ್​ಎಸ್, ಟಿಎಂಸಿ, ಬಿಜೆಡಿ, ವೈಎಸ್ಸಾರ್ ಕಾಂಗ್ರೆಸ್, ಬಿಎಸ್​ಪಿ-ಎಸ್​ಪಿ ಪಕ್ಷಗಳು ಒಟ್ಟುಗೂಡಿದರೆ ಹಲವು ರಾಜ್ಯಗಳಲ್ಲಿ ಅನೇಕ ಲೋಕಸಭಾ ಸ್ಥಾನಗಳನ್ನ ಗೆಲ್ಲಬಲ್ಲವು. ಒಂದು ಅಂದಾಜಿನಲ್ಲಿ ಈ ಪ್ರಾದೇಶಿಕ ಪಕ್ಷಗಳು ಪ್ರಬಲವಾಗಿರುವ ರಾಜ್ಯಗಳಲ್ಲಿ ಬರೋಬ್ಬರಿ 185 ಲೋಕಸಭಾ ಕ್ಷೇತ್ರಗಳಿವೆ. ಇದರಲ್ಲಿ ಬಹುತೇಕ ಸೀಟುಗಳನ್ನ ಪ್ರಾದೇಶಿಕ ಪಕ್ಷಗಳು ರಾಷ್ಟ್ರೀಯ ಪಕ್ಷಗಳ ನೆರವಿಲ್ಲದೆಯೇ ಗೆಲ್ಲಬಲ್ಲವು. ಟಿಆರ್​ಎಸ್ ಮುಖ್ಯಸ್ಥ ಕೆ. ಚಂದ್ರಶೇಖರ್ ರಾವ್ ಅವರ ತೃತೀಯ ರಂಗದ ಕನಸು ನನಸಾಗಲು ಸಾಧ್ಯವಿಲ್ಲ ಎನ್ನುಲು ಆಗವುದಿಲ್ಲ.

ಸದ್ಯದ ಸ್ಥಿತಿಯಲ್ಲಿ ಬಿಜೆಪಿಗಿಂತ ಹೆಚ್ಚಾಗಿ ಕಾಂಗ್ರೆಸ್​ಗೆ ಹೆಚ್ಚು ಮಿತ್ರಪಕ್ಷಗಳಿದ್ದರೂ ಅದೇನೂ ಸಕರಾತ್ಮಕ ಬೆಳವಣಿಗೆ ಎನ್ನಲಾಗುವುದಿಲ್ಲ. ತೆಲಂಗಾಣದ ಚುನಾವಣೆಯೇ ಇದಕ್ಕೆ ಒಂದು ಉದಾಹರಣೆಯಾಗಿದೆ. ಕಾಂಗ್ರೆಸ್ ಮತ್ತು ಟಿಡಿಪಿ ಪಕ್ಷಗಳು ಕಳೆದ ಬಾರಿಯ ಚುನಾವಣೆಯಲ್ಲಿ ಗಣಿಸಿದ ಮತ ಪ್ರಮಾಣ ಸೇರಿಸಿದರೆ ಬರೋಬ್ಬರಿ ಶೇ. 49ರಷ್ಟಿದೆ. ಆದರೆ, ತಿಂಗಳ ಹಿಂದೆ ನಡೆದ ಚುನಾವಣೆಯಲ್ಲಿ ಈ ಮಿತ್ರರ ಮತಪ್ರಮಾಣ ಶೇ. 17ರಷ್ಟು ಕುಸಿದುಹೋಗಿತ್ತು. ಅಲ್ಲದೇ, ಕಾಂಗ್ರೆಸ್ ಪಕ್ಷವು ತನ್ನ ಮಿತ್ರರಿಗೆ ಬಿಟ್ಟುಕೊಡುವ ಒಂದೊಂದು ಸ್ಥಾನವೂ ಅದರ ಮೊತ್ತವನ್ನು ಕಿರಿದುಗೊಳಿಸುತ್ತಾ ಹೋಗುತ್ತದೆ.

ಕೊನೆಯದಾಗಿ, 2019ರಲ್ಲಿ ಪ್ರಮುಖ ಪಕ್ಷಗಳು ಅದೇ ಅಣಿಮುತ್ತುಗಳನ್ನು ಉದುರಿಸುತ್ತವಾದರೂ, ಅವುಗಳ ಹಣೆಬರಹ ಮಾತ್ರ ಅಸ್ಪಷ್ಟವಾಗಿಯೇ ಇದೆ. ಮತದಾರನ ಮೊಗದಲ್ಲಿ 2014ರಲ್ಲಿದ್ದಂತೆ ಈ ಬಾರಿ ಯಾವುದೇ ಉತ್ಸಾಹ ಕಾಣಿಸುತ್ತಿಲ್ಲ.

Comments are closed.