ಕರ್ನಾಟಕ

ದೇವೇಗೌಡರು ಅಡಿಗಲ್ಲು ಹಾಕಿದ್ದ ಸೇತುವೆ ಉದ್ಘಾಟಿಸಿ ಪೂರ್ತಿ ಹೆಸರು ಪಡೆದ ಮೋದಿ: ಆಹ್ವಾನವಿಲ್ಲದ್ದಕ್ಕೆ ಗೌಡರ ವಿಷಾದ

Pinterest LinkedIn Tumblr


ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡ ಅವರು ಅಡಿಗಲ್ಲು ಹಾಕಿದ್ದ ಬೋಗಿಬೀಲ್ ರೈಲು-ರಸ್ತೆ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆ ಮಾಡಿದ್ದಾರೆ. ಆದರೆ, ಈ ಕಾರ್ಯಕ್ರಮಕ್ಕೆ ಗೌಡರಿಗೇ ಆಹ್ವಾನ ಇರಲಿಲ್ಲವಂತೆ! ಈ ಬಗ್ಗೆ ಅವರು ಬೇಸರ ವ್ಯಕ್ತಪಡಿಸಿದ್ದು, “ನಾನು ಆರಂಭಿಸಿದ ಸೇತುವೆ ಉದ್ಘಾಟಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಹೆಸರು ಪಡೆದುಕೊಂಡರು,” ಎಂದು ಆರೋಪಿಸಿದ್ದಾರೆ.

ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಬೋಗಿಬೀಲ್ ಸಮೀಪ ನಿರ್ಮಾಣ ಮಾಡಲಾದ 4.9 ಕಿ.ಮೀ ಉದ್ದದ ರೈಲು-ರಸ್ತೆ ಸೇತುವೆ ಮಂಗಳವಾರ ಲೋಕಾರ್ಪಣೆಗೊಂಡಿತು. ಈ ಯೋಜನೆಗೆ ತಗುಲಿದ ವೆಚ್ಛ ಬರೋಬ್ಬರಿ 5,900 ಕೋಟಿ ರೂಪಾಯಿ. 1997ರಲ್ಲಿ ಪ್ರಧಾನಿಯಾಗಿದ್ದ ದೇವೆಗೌಡ ಅವರು ಈ ಯೋಜನೆಗೆ ಅಡಿಗಲ್ಲು ಹಾಕಿದ್ದರು. ಯೋಜನೆಗೆ ಚಾಲನೆ ನೀಡಿದವರನ್ನೇ ಮರೆತಿರುವುದಕ್ಕೆ ಗೌಡರು ವಿಷಾದ ವ್ಯಕ್ತಪಡಿಸಿದ್ದಾರೆ.

“ನಾನು ಪ್ರಧಾನಿಯಾಗಿದ್ದಾಗ ಕಾಶ್ಮೀರಕ್ಕೆ ರೈಲ್ವೆ ಮಾರ್ಗ, ದೆಹಲಿ ಮೆಟ್ರೋ ಹಾಗೂ ಬೋಗಿಬೀಲ್ ರೈಲು-ರಸ್ತೆ ಸೇತುವೆ ಯೋಜನೆಗೆ ಚಾಲನೆ ನೀಡಿದ್ದೆ. ಪ್ರತಿ ಯೋಜನೆಗೂ ತಲಾ 100 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದೆ. ಆದರೆ, ಇಂದು ಜನರು ನನ್ನನ್ನು ಮರೆತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.

ನಿಮಗೇನಾದರೂ ಈ ಕಾರ್ಯಕ್ರಮಕ್ಕೆ ಆಹ್ವಾನ ಬಂದಿತ್ತೇ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ದೇವೆಗೌಡ, “ಅಯ್ಯೋ ರಾಮ! ನಮ್ಮನ್ನೆಲ್ಲ ಯಾರು ನೆನಪಿಟ್ಟುಕೊಳ್ಳುತ್ತಾರೆ? ಈ ಬಗ್ಗೆ ಕೆಲವು ಮಾಧ್ಯಮಗಳು ವರದಿ ಮಾಡಿವೆ ಅಷ್ಟೇ” ಎಂದರು.

ಯೋಜನೆ ವಿಳಂಬವಾದ ಬಗ್ಗೆಯೂ ದೇವೆಗೌಡ ಬೇಸರ ವ್ಯಕ್ತಪಡಿಸಿದ್ದಾರೆ. ನಾನು ಹಾಸನ-ಮೈಸೂರು ಯೋಜನೆಯನ್ನು ಕೇವಲ 13 ತಿಂಗಳಲ್ಲಿ ಪೂರ್ಣಗೊಳಿಸಿದ್ದೆ. ಎರಡು ಸೇತುವೆಗಳನ್ನು ಒಟ್ಟಿಗೆ ಕಟ್ಟಿಸಿದ್ದೆ. ಉತ್ತರ ಕರ್ನಾಟಕದ ಭಾಗಕ್ಕೆ ಗೌಡರು ಏನು ಮಾಡಿಲ್ಲ ಎಂದು ಕೆಲವರು ಆರೋಪಿಸುತ್ತಾರೆ. ಅನಗ್ವಾಡಿ ಸಮೀಪ ಘಟಪ್ರಭಾ ನದಿಗೆ ಅಡ್ಡಲಾಗಿ ಕಟ್ಟಲಾದ ಸೇತುವೆಯನ್ನು ಒಮ್ಮೆ ಹೋಗಿ ನೋಡಿ. ನಿಮಗೆ ಅರ್ಥವಾಗುವತ್ತದೆ” ಎಂದರು. ಇನ್ನು, ಟ್ವಿಟ್ಟರ್​ನಲ್ಲಿ ಮನಮೋಹನ್​ ಸಿಂಗ್​ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೌಡರು ಧನ್ಯವಾದ ಅರ್ಪಿಸಿದ್ದಾರೆ.

Comments are closed.