ಕರ್ನಾಟಕ

ಖಾಸಗಿ ವೈದ್ಯರಿಂದ 700ಕ್ಕೂ ಹೆಚ್ಚು ಮಂದಿಗೆ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ

Pinterest LinkedIn Tumblr


ಕೆ.ಆರ್‌.ಪೇಟೆ: ತಾಲೂಕಿನ ಅಪ್ರಾಪ್ತನನ್ನು ಪುಸಲಾಯಿಸಿ ತೃತೀಯ ಲಿಂಗಿಯಾಗಿ ಪರಿವರ್ತಿಸಿದ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಕೆ.ಆರ್‌.ಪೇಟೆ ಪೊಲೀಸರು, ಈ ಸಂಬಂಧ ಐವರನ್ನು ಬಂಧಿಸಿದ್ದಾರೆ. ಇದರೊಂದಿಗೆ ಖಾಸಗಿ ವೈದ್ಯರೊಬ್ಬರು 700ಕ್ಕೂ ಹೆಚ್ಚು ಮಂದಿಗೆ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ನಡೆಸಿರುವ ಬಗ್ಗೆಯೂ ಸುಳಿವು ಸಿಕ್ಕಿದೆ.

ಅಪ್ರಾಪ್ತನನ್ನು ತೃತೀಯ ಲಿಂಗಿಯಾಗಿ ಪರಿವರ್ತಿಸಿದ ಆರೋಪದ ಮೇಲೆ ಮಂಗಳಮುಖಿಯರಾದ ಜಯಶ್ರೀ, ಮಂದಾರ, ಮಹೇಶ್ವರಿ ಮತ್ತು ಆತನ ಜತೆ ನಿರಂತರ ಲೈಂಗಿಕ ಸಂಪರ್ಕ ಬೆಳೆಸಿದ ಆರೋಪದ ಮೇಲೆ ಅರವಿಂದ, ಅಜಯ್‌ ಎಂಬುವವರನ್ನು ಬಂಧಿಸಲಾಗಿದೆ.

ಪ್ರಕರಣ: ತಾಲೂಕಿನ ಗ್ರಾಮವೊಂದರಿಂದ ಫೆ.4ರಂದು ಅಪ್ರಾಪ್ತ ನಾಪತ್ತೆಯಾಗಿದ್ದ. ಈತನನ್ನು ಎಷ್ಟೇ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಆದರೆ, ಅಕ್ಟೋಬರ್‌ನಲ್ಲಿ ಇದ್ದಕ್ಕಿದ್ದಂತೆ ಗ್ರಾಮಕ್ಕೆ ಬಂದ ಆತ ತೃತೀಯ ಲಿಂಗಿಯಾಗಿ ಪರಿವರ್ತನೆಯಾಗಿದ್ದ. ಇದನ್ನು ಕಂಡು ಕುಟುಂಬದವರು ಗಾಬರಿಗೊಂಡಿದ್ದರು. ಬಳಿಕ ಅಪ್ರಾಪ್ತನ ಅಜ್ಜಿ ಕೆ.ಆರ್‌.ಪೇಟೆ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು, ಮೊಮ್ಮಗನ ಸ್ಥಿತಿಗೆ ಕಾರಣರಾದರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿಕೊಂಡಿದ್ದರು. ಬಳಿಕ ತನಿಖೆ ಪ್ರಾರಂಭಿಸಿದ ಪೊಲೀಸರಿಗೆ ಪ್ರಕರಣದಲ್ಲಿ ಹಲವು ಜನರ ಕೃತ್ಯ ಇರುವುದು ಬೆಳಕಿಗೆ ಬಂದಿದೆ.

ಎಸ್ಸೆಸ್ಸೆಲ್ಸಿಗೆ ವಿದ್ಯಾಭ್ಯಾಸ ನಿಲ್ಲಿಸಿದ್ದ ಅಪ್ರಾಪ್ತ ಬೆಂಗಳೂರಿನ ಹೋಟೆಲ್‌ವೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದನು. ಆಗಾಗ ಅಜ್ಜಿ ಹಾಗೂ ಅಪ್ಪನ ಜತೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದನೆಂದು ತಿಳಿದು ಬಂದಿದೆ. ಈ ವೇಳೆ ರೈಲಿನಲ್ಲಿ ಈತನಿಗೆ ಮಂಗಳಮುಖಿಯರ ಪರಿಚಯವಾಗಿದೆ. ಈತನ ಕಷ್ಟವನ್ನು ಕೇಳಿ ತಿಳಿದುಕೊಂಡ ತೃತೀಯ ಲಿಂಗಿಗಳು ಅವನನ್ನು ಹಣದ ಆಸೆಗೆ ಬೀಳಿಸಿ ತಮ್ಮ ಜತೆಯಲ್ಲಿ ಕರೆದುಕೊಂಡು ಹೋಗಿದ್ದಾರೆನ್ನಲಾಗಿದೆ.

ಕೆಲ ದಿನದ ನಂತರ ತಮ್ಮ ಜತೆಯಲ್ಲೇ ಈ ಹುಡುಗನನ್ನು ಇಟ್ಟುಕೊಂಡ ತೃತೀಯ ಲಿಂಗಿಗಳು ಸ್ವಲ್ಪ ದಿನಗಳ ನಂತರ ಆತನಿಗೆ ಸೀರೆ ಉಡಿಸಿ ಭಿಕ್ಷಾಟನೆ ಮಾಡಿಸಿದ್ದಾರೆ. ದಿನ ಕಳೆದಂತೆ ಆತನು ಅವರಂತೆಯೇ ಆಡಲು ಪ್ರಾರಂಭಿಸಿದ್ದಾನೆ. ಇದನ್ನೇ ದುರುಪಯೋಗಪಡಿಸಿಕೊಂಡ ಮಂಗಳಮುಖಿಯರು ಜೂ.29ರಂದು ಬೆಂಗಳೂರಿನ ನಾಗರಬಾವಿ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಈ ಹುಡುಗನಿಗೆ ಲಿಂಗ ಪರಿವರ್ತನೆಯ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ.

ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯನ ವಿಚಾರಣೆ
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಶಸ್ತ್ರಚಿಕಿತ್ಸೆ ಮಾಡಿದ ಖಾಸಗಿ ಆಸ್ಪತ್ರೆಗೂ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ. ಜತೆಗೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರನ್ನು ಪತ್ತೆ ಮಾಡಿದ್ದಾರೆ. 2012ರ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ ಪ್ರಕಾರ ಅಪ್ರಾಪ್ತರನ್ನು ಬಲವಂತವಾಗಿ ಲೈಂಗಿಕ ಚಟುವಟಿಕೆಗಳಿಗೆ ಬಳಸಿಕೊಳ್ಳುವುದು ಅಪರಾಧ. ಆದರೆ ಕಾನೂನು ಬಾಹಿರವಾಗಿ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ವೈದ್ಯರೊಬ್ಬರನ್ನು ಕರೆ ತಂದು ವಿಚಾರಣೆ ನಡೆಸಿದ್ದಾರೆ.

ವಿಚಾರಣೆಯ ವೇಳೆಯಲ್ಲಿ ಸದರಿ ಆಸ್ಪತ್ರೆ ವೈದ್ಯರು 700ಕ್ಕೂ ಹೆಚ್ಚು ಶಸ್ತ್ರ ಚಿಕಿತ್ಸೆ ಮಾಡಿದ್ದಾರೆನ್ನುವ ಮಾಹಿತಿ ಲಭ್ಯವಾಗಿದೆ. ವಿಚಾರಣೆ ವೇಳೆ ಪ್ರಜ್ಞಾಹೀನರಾದ ವೈದ್ಯರನ್ನು ಕೆ.ಆರ್‌.ಪೇಟೆ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕೊನೆಗೆ ಆರೋಗ್ಯ ಚೇತರಿಸಿಕೊಂಡ ಕೂಡಲೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್‌ ನೀಡಿದ್ದಾರೆಂದು ತಿಳಿದುಬಂದಿದೆ.

ಈತ ಅಪ್ರಾಪ್ತನಾದರೂ 19 ವರ್ಷ ವಯಸ್ಸಾಗಿದ್ದು, ಶಸ್ತ್ರಚಿಕಿತ್ಸೆ ಮಾಡಬಹುದು ಎಂದು ವಕೀಲರೊಬ್ಬರಿಂದ ನೋಟರಿ ಕೂಡಾ ಪಡೆದಿದ್ದಾರೆ. ಆದರೆ ಶಾಲೆಯಲ್ಲಿ ತನಿಖೆ ನಡೆಸಿದ ವೇಳೆ ಆತನಿಗೆ ಇನ್ನೂ 16 ವರ್ಷ ವಯಸ್ಸಾಗಿದೆ ಎಂದು ತಿಳಿದುಬಂದಿದೆ. ಇನ್ನೂ ವಿಚಾರಣೆಯನ್ನು ತೀವ್ರಗೊಳಿಸಿರುವ ಪೊಲೀಸರು ಈ ತೃತೀಯ ಲಿಂಗಿಗಳ ರಹಸ್ಯವನ್ನು ಬೇಧಿಸುತ್ತಿದ್ದಾರೆ.

Comments are closed.