
ಹುಬ್ಬಳ್ಳಿ: ವೈದ್ಯೋ ನಾರಾಯಣೋ ಹರಿ ಎನ್ನುವುದು ಜನರ ನಂಬಿಕೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಏನೇ ಸಮಸ್ಯೆಯಾದರೂ ನೆನಪಾಗೋದು ವೈದ್ಯರು. ಆದರೆ ಹುಬ್ಬಳ್ಳಿಯ ವೈದ್ಯರೊಬ್ಬರು ಮಾಡಿದ ಯಡವಟ್ಟಿನಿಂದಾಗಿ ಯುವತಿಯೊಬ್ಬಳು ಜೀವನ್ಮರಣದ ನಡುವೆ ಹೋರಾಟ ಮಾಡುತ್ತಿದ್ದಾಳೆ. ಕೈಕಾಲು ಕಳೆದುಕೊಂಡು ನರಕಯಾತನೆ ಅನುಭವಿಸುತ್ತಿದ್ದಾಳೆ.
ಈ ಯುವತಿಯ ಹೆಸರು ರೇಣುಕಾ ಹೊಸಮನಿ. ಹುಬ್ಬಳ್ಳಿಯ ಕೃಷ್ಣಾಪುರ ಬಡಾವಣೆಯ ನಿವಾಸಿ. ಕಳೆದ ಒಂದು ವರ್ಷದ ಹಿಂದೆ ಕಾಲುಗಳಲ್ಲಿ ಸೆಳೆತ ಕಂಡುಬಂದ ಕಾರಣ ಶಕುಂತಲಾ ಮೆಮೋರಿಯಲ್ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗಿದ್ದಳು. ಆಸ್ಪತ್ರೆಯ ವೈದ್ಯ ಡಾ. ವಿಜಯ್ ಗಡಗಿ ಚುಚ್ಚುಮದ್ದು ಕೊಟ್ಟಿದ್ದರು. ಇಂಜಕ್ಷನ್ ಕೊಟ್ಟ ತಕ್ಷಣ ಯುವತಿಯ ಬಲಗಾಲು ಮತ್ತು ಬಲಗೈ ಸ್ವಾಧೀನ ಕಳೆದುಕೊಂಡು ದೇಹದಲ್ಲಿ ಅಲರ್ಜಿಯಾಗಿತ್ತು ಎನ್ನಲಾಗಿದೆ.
ಮೂರ್ನಾಲ್ಕು ತಿಂಗಳ ಕಾಲ ರೇಣುಕಾಗಳಿಗೆ ಚಿಕಿತ್ಸೆ ನೀಡಿದ್ದ ವೈದ್ಯರು ನಂತರ ಚಿಕಿತ್ಸೆ ನಿಲ್ಲಿಸಿದ್ದರು. ರೇಣುಕಾ ಬಳಿಯಿದ್ದ ಇನ್ಸೂರೆನ್ಸ್ ಪಾಲಿಸಿ ಆಸ್ಪತ್ರೆಯಲ್ಲಿ ನಡೆಯಲ್ಲ ಎನ್ನುವ ಕಾರಣಕ್ಕೆ ಆಸ್ಪತ್ರೆಯಿಂದ ಹೊರ ಕಳಿಸಿದ್ದರು. ವೈದ್ಯರ ಯಡವಟ್ಟಿನಿಂದ ತನ್ನ ಅಂಗಾಗಗಳು ಊನ ಆಗಿವೆ ಎಂದು ರೇಣುಕಾ ಆರೋಪಿಸುತ್ತಿದ್ದಾರೆ.
ನಂತರ ವಿವೇಕಾನಂದ ಆಸ್ಪತ್ರೆಯಲ್ಲಿ ರೇಣುಕಾ ದಾಖಲಾಗಿದ್ದಳು. ಡಾಕ್ಟರ್ ಮಹಾಂತೇಶ್ ಹಳೇಮನಿಯವರ ಬಳಿ ಚಿಕಿತ್ಸೆ ಪಡೆಯುತ್ತಿದ್ದಳು. ಕಾಲು ಉರಿಗಾಗಿ ವೈದ್ಯರು ನೀಡಿರುವ ಹೈಡೋಜ್ ಇಂಜೆಕ್ಷನ್ನಿಂದಾಗಿ ಯುವತಿಯ ಕೈಕಾಲುಗಳು ಅಂಗಾಲು ಮತ್ತು ಅಂಗೈ ಸಂಪೂರ್ಣ ಕಪ್ಪಾಗಿವೆ. ಗ್ಯಾಂಗ್ರೀನ್ ಆಗಿದ್ದು ಕಾಲು ಕತ್ತರಿಸಬೇಕು ಎಂದು ವೈದ್ಯರು ತಿಳಿಸಿದ್ದಾರೆ.
ಹೆದರಿದ ರೇಣುಕಾ ಕುಂಟುಂಬಸ್ಥರು ಡಾಕ್ಟರ್ ಚೇತನ್ ಹೊಸಕಟ್ಟಿ ಹಾಗೂ ವಿಕ್ರಮ್ ಹರಿದಾಸ್ ಎಂಬುವವರು ಬಳಿ ಯುವತಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಯಾರೂ ಸರಿಯಾಗಿ ಸ್ಪಂಧಿಸಿಲ್ಲ. ಹೀಗಾಗಿ ಯುವತಿಯ ಸ್ಥಿತಿ ಚಿಂತಾಜನಕವಾಗಿದೆ. ವೈದ್ಯ ಡಾಕ್ಟರ್ ವಿಜಯ್ ಗಡಗಿಯವರ ನಿರ್ಲಕ್ಷದಿಂದ ಆರೋಗ್ಯ ಹದಗೆಟ್ಟಿದೆ ಎಂದು ರೇಣುಕಾ ಹೊಸಮನಿ ವಿದ್ಯಾನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಳು. ವೈದ್ಯರ ವಿರುದ್ಧ ದೂರು ನೀಡಿದ ಕಾರಣಕ್ಕೆ ಹುಬ್ಬಳ್ಳಿಯ ವೈದ್ಯರು ರೇಣುಕಾಗೆ ಚಿಕಿತ್ಸೆ ನೀಡಲು ಒಪ್ಪುತ್ತಿಲ್ಲ.
ಸೂಕ್ತ ಚಿಕಿತ್ಸೆ ಸಿಗದೆ ಯುವತಿ ನರಕಯಾತನೆ ಅನುಭವಿಸುತ್ತಿದ್ದು, ನಡೆದಾಡಲು ಆಗದೆ, ಹಾಸಿಗೆಯ ಮೇಲೆಯೇ ಮಲಗಿರುವ ಸ್ಥಿತಿ ಎದುರಾಗಿದೆ. ತನ್ನ ನೋವಿಗೆ ಕಾರಣರಾದ ವೈದ್ಯರ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತಿದ್ದಾಳೆ. ಸೂಕ್ತ ಚಿಕಿತ್ಸೆ ಕೊಡಿ ಇಲ್ಲವೆ ದಯಾಮರಣ ಕೊಡಿ ಎಂದು ಎದೆಯ ಮೇಲೆ ಭಿತ್ತಪತ್ರ ಅಂಟಿಸಿಕೊಂಡಿದ್ದಾಳೆ.
ಯುವತಿಯ ಗೋಳಾಟದ ಕುರಿತು ನ್ಯೂಸ್18 ಕನ್ನಡ ಸುದ್ದಿ ಪ್ರಸಾರ ಮಾಡುತ್ತಿದ್ದಂತೆ ಜಿಲ್ಲಾ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದೆ. ಜಿಲ್ಲಾ ಆರೋಗ್ಯಾಧಿಕಾರಿ ಡಾ. ಆರ್.ಎನ್. ದೊಡ್ಡಮನಿ, ‘ಯುವತಿಯ ಕುಟಂಬಕ್ಕೆ ಕೂಡಲೆ ಚಿಕಿತ್ಸೆಗೆ ಬೇಕಾದ ಎಲ್ಲ ನೆರವು ನೀಡಲಾಗುವುದು ಎಂದಿದ್ದಾರೆ. ತಪ್ಪಿತಸ್ಥ ವೈದ್ಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.
ವೈದ್ಯರ ಎಡವಟ್ಟಿನಿಂದಾಗಿ ರೇಣುಕಾ ಹೊಸಮನಿಯ ಬಡ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಮನೆಗೆ ಆಸರೆಯಾಗಿದ್ದ ರೇಣುಕಾ ಹಾಸಿಗೆ ಹಿಡಿದಿದ್ದಾಳೆ. ಕೂಲಿ ಮಾಡುತ್ತಿದ್ದ ತಾಯಿ ಹಾಗೂ ಮಾವ ಕೆಲಸಬಿಟ್ಟು ರೇಣುಕಾಳ ಸೇವೆಯಲ್ಲಿ ತೊಡಗಿದ್ದಾರೆ. ದೈನಂದಿನ ಡ್ರೆಸ್ಸಿಂಗ್ ಮತ್ತು ಔಷಧೋಪಚಾರಕ್ಕೆ ಬಡ ಕುಟುಂಬದ ಬಳಿ ಹಣವಿಲ್ಲ. ಆರೋಗ್ಯ ಇಲಾಖೆ ಈ ಕುರಿತು ಗಮನಹರಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕಾಗಿದೆ.
Comments are closed.