ಕರ್ನಾಟಕ

ನಿರಾಣಿ ಶುಗರ್ಸ್ ಕಾರ್ಖಾನೆ ಬಾಯ್ಲರ್ ಸ್ಫೋಟ: 4 ಕಾರ್ಮಿಕರ ಸಾವು

Pinterest LinkedIn Tumblr


ಬಾಗಲಕೋಟೆ: ರಾಜ್ಯದಲ್ಲಿ ಸಾಲು ಸಾಲು ದುರಂತಗಳು ಕಣ್ಮುಂದೆ ನಡೆಯುತ್ತಿರುವ ಬೆನ್ನಲ್ಲೇ ಮುಧೋಳದಲ್ಲಿ ಡಿಸ್ಟಿಲರಿಯ ಬಾಯ್ಲರ್​ವೊಂದು ಸ್ಫೋಟಗೊಂಡು ನಾಲ್ವರು ಕಾರ್ಮಿಕರು ದುರ್ಮರಣ ಹೊಂದಿರೋ ದುರಂತ ಸಂಭವಿಸಿದೆ. ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಮುರುಗೇಶ್ ನಿರಾಣಿ ಒಡೆತನದ ನಿರಾಣಿ ಶುಗರ್ಸ್ ಕಾರ್ಖಾನೆಯಲ್ಲಿ ಇಂದು ಮಧ್ಯಾಹ್ನ 12:15ಕ್ಕೆ ಸಂಭವಿಸಿದ ಈ ದುರ್ಘಟನೆಯಲ್ಲಿ 8 ಜನ್ರು ಗಾಯಗೊಂಡು ಆಸ್ಪತ್ರೆ ಸೇರಿದ್ಧಾರೆ. ಮದುವೆ ಮುಗಿಸಿ ಡಿಸ್ಟಿಲರಿ ರಿಪೇರಿಗೆಂದು ಮಗನ ಜೊತೆ ಬಂದಿದ್ದ ಕಾರ್ಮಿಕ ಸಾವನ್ನಪ್ಪಿದ್ರೆ, ಮಗ ಅದೃಷ್ಟವಶಾತ್ ಪಾರಾಗಿದ್ದಾನೆ. ಈ ಮಧ್ಯೆ, ಕಾರ್ಖಾನೆ ಮಾಲೀಕರು ಮೃತರ ಕುಟುಂಬಗಳಿಗೆ 5 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ.

ನಿರಾಣಿ ಶುಗರ್ಸ್ ಏಕಾಏಕಿ ತಾಂತ್ರಿಕ ದೋಷ ಕಾಣಿಸಿಕೊಂಡು ಬಾಯ್ಲರ್‌ವೊಂದು ಬ್ಲಾಸ್ಟ್ ಆದ ರಭಸಕ್ಕೆ ಪಕ್ಕದ ಕಟ್ಟಡದ ಮೇಲ್ಚಾವಣಿ ಕುಸಿದು ಬಿದ್ದು ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತಪಟ್ಟವರನ್ನು ಕುಳಲಿ ಗ್ರಾಮದ ನಾಗಪ್ಪ ಧರ್ಮಟ್ಟಿ(40), ಆಫ್ಜಲಪುರದ ಶರಣಪ್ಪ ತೋಟದ್(35), ನಾವಲಗಿ ಗ್ರಾಮದ ಜಗದೀಶ್ ಪಟ್ಟಣಶೆಟ್ಟಿ(33), ಸಪ್ಪಡ್ಲ ಗ್ರಾಮದ ಶಿವಾನಂದ ಹೊಸಮಠ(42) ಎಂದು ಗುರುತಿಸಲಾಗಿದೆ. ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದ 8 ಜನರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಬಾಯ್ಲರ್ ಬ್ಲಾಸ್ಟ್ ಆದ ರಭಸಕ್ಕೆ ಅಕ್ಕಪಕ್ಕದ ಕಟ್ಟಡಗಳು ಅಲುಗಾಡಿರೋ ಅನುಭವವಾಗಿದ್ದು, ಮನೆಗಳು ಬಿರುಕು ಬಿಟ್ಟಿವೆ.

ದೊಡ್ಡದಾದ ಶಬ್ದವೊಂದು ಕೇಳಿ ಬಂದದ್ದೇ ತಡ ಕಲ್ಲುಗಳೆಲ್ಲಾ ಬಡಿದು ಗಾಯಗೊಂಡು ಆಸ್ಪತ್ರೆ ಸೇರಿದ್ದೇವೆ ಎಂದು ಗಾಯಗೊಂಡ ಕಾರ್ಮಿಕರು ನ್ಯೂಸ್18 ಕನ್ನಡಕ್ಕೆ ತಿಳಿಸಿದ್ದಾರೆ.

ಅಪ್ಪ ಸಾವು, ಮಗ ಬಚಾವು:

ಮೃತ ಪಟ್ಟ ನಾಲ್ವರಲ್ಲಿ ಶಿವಾನಂದ ಹೊಸಮಠ ಅವರೂ ಇದ್ಧಾರೆ. ಆದರೆ, ಸ್ಫೋಟ ನಡೆದಾಗ ಜೊತೆ ಇದ್ದ ಅವರ 9 ವರ್ಷದ ಮಗ ಅದೃಷ್ಟರೀತಿಯಲ್ಲಿ ಬಚಾವ್ ಆದ ಘಟನೆ ಬೆಳಕಿಗೆ ಬಂದಿದೆ. ಸಪ್ಪಡ್ಲ ಗ್ರಾಮದ 42 ವರ್ಷದ ಶಿವಾನಂದ ಹೊಸಮಠ ಅವರು ಮುಧೋಳಕ್ಕೆ ಮದುವೆಗೆಂದು ತಮ್ಮ 9 ವರ್ಷದ ಮಗ ಮನೋಜ್ ಜೊತೆ ಹೋಗಿದ್ದರು. ಡಿಸ್ಟಿಲರಿಯಲ್ಲಿ ಕೆಲಸವಿದೆ ಎಂದು ಕಾರ್ಖಾನೆಯ ಸಹೋದ್ಯೋಗಿಯೊಬ್ಬರು ಮಾಡಿದ ಫೋನ್ ಕರೆಯಿಂದಾಗಿ ಮದುವೆಯ ಕಾರ್ಯಕ್ರಮ ಬಿಟ್ಟು ಶಿವಾನಂದ ಅವರು ತಮ್ಮ ಮಗನ ಜೊತೆ ಡಿಸ್ಟಿಲರಿ ಘಟಕಕ್ಕೆ ಹೋಗಿದ್ದರು. ಈ ವೇಳೆ ಸ್ಫೋಟ ಸಂಭವಿಸಿದ ಮೇಲ್ಛಾವಣಿ ಕುಸಿಯುತ್ತದೆ. ಇತರ ಕಾರ್ಮಿಕರ ಜೊತೆ ಅಪ್ಪ ಮಗ ಇಬ್ಬರೂ ಸಿಲುಕುತ್ತಾರೆ. ಆದರೆ, ಈ ಘಟನೆಯಲ್ಲಿ 9 ವರ್ಷದ ಮನೋಜ್ ಪವಾಡ ರೀತಿಯಲ್ಲಿ ಬದುಕುಳಿಯುತ್ತಾರೆ. ಬಾಲಕನನ್ನು ಮುದೋಳ ತಾಲೂಕಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆ ನಡೆಯುತ್ತಲೇ ಅತ್ತ ಸ್ಥಳಕ್ಕೆ ಎಂಟು ಜೆಸಿಬಿಗಳನ್ನ ಕರೆತರುವ ಮೂಲಕ ತೆರವು ಕಾರ್ಯಾಚರಣೆ ನಡೆಸಲಾಯಿತು. ಇದಕ್ಕೆ ಅಗ್ನಿಶಾಮಕದ ದಳ ಸಿಬ್ಬಂದಿ ಕೂಡ ಸಹಾಯಕ್ಕೆ ನಿಂತಿತು. ಈ ಮಧ್ಯೆ ಅಂಬುಲೆನ್ಸ್‌ಗಳು ಗಾಯಾಳುಗಳನ್ನ ಮುಧೋಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದವು. ಘಟನಾ ಸ್ಥಳಕ್ಕೆ ಮಾಲೀಕ ಮುರುಗೇಶ್ ನಿರಾಣಿ, ಸಂಗಮೇಶ್ ನಿರಾಣಿ, ಹನುಮಂತ ನಿರಾಣಿ, ಎಸ್.ಆರ್. ಪಾಟೀಲ್ ಹಾಗೂ ಬೆಳಗಾವಿ ಪ್ರಾದೇಶಿಕ ಆಯುಕ್ತ ಪಿಎ ಮೇಘನ್ನವರ, ಐಜಿಪಿ ಎಚ್.ಎನ್. ರೇವಣ್ಣ, ಜಿಲ್ಲಾಧಿಕಾರಿ ಕೆ.ಜಿ. ಶಾಂತಾರಾಂ, ಎಸ್‌ಪಿ ಸಿ.ಬಿ. ರಿಷ್ಯಂತ್ ಸೇರಿದಂತೆ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದರು.

ಬಾಯ್ಲರ್ ಬ್ಲಾಸ್ಟ್ ಆದ ರಭಸಕ್ಕೆ ಅಕ್ಕಪಕ್ಕದ ಹೊಲಗದ್ದೆಗಳಲ್ಲಿ ಮನೆಕಂಪಿಸಿದ ಅನುಭವವೂ ಸಹ ಆಗಿದೆ ಎನ್ನಲಾಗುತ್ತಿದೆ. ಒಟ್ಟಾರೆ ನಿತ್ಯ ಕುಟುಂಬ ಸಾಗಿಸುವ ಸಲುವಾಗಿ ದುಡಿಯಲೆಂದು ಬಂದಿದ್ದ ನಾಲ್ವರು ಕಾರ್ಮಿಕರು ದುರಂತ ಸಾವು ಕಂಡಿದ್ದು ನೆರೆದಿದ್ದ ಜನರ ಮನಕಲುಕಿತು.

ಘಟನೆಯಲ್ಲಿ ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಹಣ ನೀಡುವುದಾಗಿ ಕಾರ್ಖಾನೆ ಮಾಲೀಕ ಮಾಜಿ ಸಚಿವ ಮುರುಗೇಶ ನಿರಾಣಿ ತಿಳಿಸಿದ್ದಾರೆ. ಆದ್ರೆ ಸರ್ಕಾರವೂ ಪರಿಹಾರ ನೀಡಬೇಕೆಂದು ಮೃತರ ಸಂಬಂಧಿಗಳು ಮಾಜಿ ಸಚಿವ ಎಸ್.ಆರ್. ಪಾಟೀಲ್ ಅವರಿಗೆ ಮುತ್ತಿಗೆ ಹಾಕಿದರು. ಸರಕಾರ ಪರಿಹಾರ ಘೋಷಿಸುವರೆಗೂ ಶವ ತಗೆದುಕೊಳ್ಳುವುದಿಲ್ಲವೆಂದು ಪಟ್ಟು ಹಿಡಿದ್ರು. ಇದೇ ವೇಳೆ, ವಿಜಯಪುರ-ಬಾಗಲಕೋಟೆ ಜಿಲ್ಲಾಧಿಕಾರಿ ಶಾಂತಾರಾಮ್ ಅವರು, ಮೃತ ಕುಟುಂಬಗಳಿಗೆ ಪರಿಹಾರ ನೀಡುವ ಕುರಿತು ಸರಕಾರಕ್ಕೆ ಮಾಹಿತಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು. ಸಕ್ಕರೆ ಕಾರ್ಖಾನೆ ಮಾಲೀಕರು ಈಗಾಗಲೇ 5 ಲಕ್ಷ ರೂ ಪರಿಹಾರ ಘೋಷಣೆ ಮಾಡಿದ್ದಾರೆ. ಈಗ ಸರಕಾರದಿಂದಲೂ ಹೆಚ್ಚುವರಿ ಪರಿಹಾರ ಸಿಗುವ ನಿರೀಕ್ಷೆ ಇಟ್ಟುಕೊಳ್ಳಬಹುದಾಗಿದೆ.

ಇದೇ ವೇಳೆ, ಸ್ಥಳದಲ್ಲಿ ತೆರವು ಕಾರ್ಯಾಚರಣೆ ಮುಕ್ತಾಯಗೊಳಿಸಲು ಇನ್ನು 24 ಗಂಟೆ ಬೇಕಾಗಬಹುದು ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ತಿಳಿಸಿದ್ರು.

ಸಿಎಂ ಸೂಚನೆ:

ಈ ದುರ್ಘಟನೆಯ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಬಾಗಲಕೋಟೆ ಮತ್ತು ಬಿಜಾಪುರ ಎಸ್.ಪಿ‌ ಹಾಗೂ ಡಿ.ಸಿ‌ಗಳಿಗೆ‌ ಕರೆ ಮಾಡಿ ದುರಂತ ಸ್ಥಳಕ್ಕೆ ತರಳುವಂತೆ ಸೂಚಿಸಿದ್ದಾರೆ. ಬೆಳಗಾವಿ, ವಿಜಯಪುರ, ಬಾಗಲಕೋಟೆ ಆಸ್ಪತ್ರೆಗಳಿಗೆ ಗಾಯಾಳುಗಳ ರವಾನೆಗೆ ಆಂಬುಲೆನ್ಸ್ ವ್ಯವಸ್ಥೆ ಮಾಡುವಂತೆ ನಿರ್ದೇಶಿಸಿದ ಸಿಎಂ, ಸ್ಥಳಕ್ಕೆ ತೆರಳಿ ದುರಂತಕ್ಕೀಡಾದವರ ತುರ್ತು ಚಿಕಿತ್ಸೆಗೆ ಬೇಕಾದ ಅಗತ್ಯ ಕ್ರಮ‌ಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಅವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ತಕ್ಷಣವೇ ದುರಂತ ನಡೆದ ಸ್ಥಳಕ್ಕೆ ತೆರಳುವಂತೆ ತಿಳಿಸಿದ್ದು, ಅಲ್ಲೇ ಇದ್ದು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಮಾಜಿ ಸಿಎಂ ಯಡಿಯೂರಪ್ಪ ಸಂತಾಪ

ಮುಧೋಳ ತಾಲೂಕಿನ ಕುಳಲಿ ಗ್ರಾಮದಲ್ಲಿ ಡಿಸ್ಟಿಲರಿ ಘಟಕದಲ್ಲಿ ಸಂಭವಿಸಿದ ಬಾಯ್ಲರ್ ಸ್ಫೋಟದಲ್ಲಿ ಜನರು ಮೃತಪಟ್ಟಿರುವುದು ಅತ್ಯಂತ ದುಃಖದ ಸಂಗತಿ.
ಮೃತರ ಆತ್ಮಕ್ಕೆ ಶಾಂತಿ ಕೋರುವೆ.ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತಾಗಬೇಕು. ಈ ಸಂಬಂಧ ನಾನು ಈಗಾಗಲೇ ಶಾಸಕರಾದ ಶ್ರೀ ಮುರುಗೇಶ್ ನಿರಾಣಿ ಅವರ ಜೊತೆ ಮಾತನಾಡಿದ್ದೇನೆ. ದುರ್ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಕೂಡ ಸೂಚಿಸಿರುವೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಸಕ್ಕರೆ ಕಾರ್ಖಾನೆ ಮಾಲೀಕ ಮುರುಗೇಶ್ ನಿರಾಣಿ ಸ್ಪಷ್ಟನೆ

ಈ ದುರಂತದ ಬಗ್ಗೆ ಮಾತನಾಡಿರುವ ಕಾರ್ಖಾನೆ ಮಾಲೀಕ, ಇದು ಸಕ್ಕರೆ ಕಾರ್ಖಾನೆಯ ಕಲುಷಿತ ನೀರಿನ ಪ್ಲಾಂಟ್​ನ ಡೈಜೆಸ್ಟ್ ಎಂಬ ಘಟಕದಲ್ಲಿ ಸಂಭವಿಸಿದ್ದು, ಇಲ್ಲಿ ಮಿಥೇಲ್ ಉತ್ಪತ್ತಿಯಾಗುತ್ತದೆ. ಇಲ್ಲಿ ಮಿಥೇಲ್ ಹೊರ ಹೋಗದೇ ಒತ್ತಡ ಉಂಟಾಗಿ ಬ್ಲಾಯ್ಲರ್ ಸ್ಪೋಟಗೊಂಡಿದೆ. ಇಲ್ಲಿ ಕೇವಲ ಏಳು ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅವರಲ್ಲಿ ನಾಲ್ವರು ಅಸುನೀಗಿದ್ದು, ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಘಟನೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಒಟ್ಟಿನಲ್ಲಿ ದೈನಂದಿನ ಬದುಕು ಸಾಗಿಸೋಕೆ ಕಾರ್ಖಾನೆಗೆ ದುಡಿಯಲೆಂದು ಬಂದ್ರೆ ನಾಲ್ವರು ಕಾರ್ಮಿಕರು ದುರಂತ ಸಾವು ಕಾಣುವ ಮೂಲಕ ಇಹಲೋಕ ತ್ಯಜಿಸಿದ್ದು ಮಾತ್ರ ವಿಪರ್ಯಾಸ.. ಆ ಕುಟುಂಬಗಳ ಸಂಬಂಧಿಗಳಿಗೆ ನೋವು ಮರೆಸುವ ಶಕ್ತಿ ನೀಡಲಿ ಅನ್ನೋದು ನೆರೆದವರ ಮಾತಾಗಿತ್ತು.

Comments are closed.