ಕರ್ನಾಟಕ

ಅಪಘಾತದಲ್ಲಿ ಪಾರಾದ ಚಾಲಕ: ಮಾಲೀಕನ ಥಳಿತಕ್ಕೆ ಪ್ರಾಣ ತೆತ್ತ

Pinterest LinkedIn Tumblr


ಶಿರಾ: ವಾಹನ ಅಪಘಾತ ನಡೆದ್ದಕ್ಕೆ ಕಂಟೈನರ್ ಲಾರಿ ಮಾಲೀಕ ಮತ್ತು ಸಹಚರರು ಸಂಬಂಧಪಟ್ಟ ಚಾಲಕನನ್ನು ಹಿಗ್ಗಾ ಮುಗ್ಗ ಥಳಿಸಿದ್ದು, ಚಿಕಿತ್ಸೆ ಫಲಚಾಲಕ ಮೃತಪಟ್ಟ ಘಟನೆ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಜರುಗಿದೆ.

ಮೃತನನ್ನು ಬೆಳಗಾವಿ ಜಿಲ್ಲೆ, ಬೈಲಹೊಂಗಲ ತಾಲ್ಲೂಕು, ಕಡತನಾಳ್ ಗ್ರಾಮದ ಬಸಪ್ಪ ಬೇವಿನ್ (38) ಎಂದು ಗುರುತಿಸಿದ್ದು, ದುರ್ದೈವಿ ಪೂನಾದಿಂದ ಚನ್ನೈಗೆ ಮೋಟಾರ್ ಸೈಕಲ್ ರಿಮ್ ಸಾಗಿಸುತ್ತಿದ್ದ ಕಂಟೈನರ್ ಲಾರಿಯನ್ನು ಚಾಲನೆ ಮಾಡುತ್ತಿದ್ದ ವೇಳೆ ಮಂಗಳವಾರ ರಾತ್ರಿ ಶಿರಾ ಬೈಪಾಸ್‌ನಲ್ಲಿ ನಿಂತಿದ್ದ ಮತ್ತೊಂದು ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ.

ಘಟನೆಯಲ್ಲಿ ಕಂಟೈನರ್ ಲಾರಿಯಲ್ಲಿದ್ದ ಮತ್ತೊಬ್ಬ ಚಾಲಕ ಇದೇ ಗ್ರಾಮದ ಸೋಮಪ್ಪ ಎಸ್.ನೇಸರಗಿ ಸೇರಿದಂತೆ ಇಬ್ಬರು ಚಾಲಕರೂ ಯಾವುದೇ ಅಪಾಯಕ್ಕೆ ಸಿಲುಕದೇ ಪಾರಾಗಿದ್ದು, ಅಪಘಾತದ ವಿಷಯವನ್ನು ಲಾರಿ ಮಾಲೀಕ ಬಾಳಪ್ಪ ಮಲ್ಲಪ್ಪ ಕೋನ್‌ಕೇರಿ ಎನ್ನುವವರಿಗೆ ತಿಳಿಸಿದ್ದಾರೆ.

ಬುಧವಾರ ಬೆಳಗ್ಗೆಯೇ ತನ್ನ ಸಹಚರರೊಡನೆ ಸ್ಥಳಕ್ಕೆ ಆಗಮಿಸಿದ ಲಾರಿ ಮಾಲೀಕ, ಅಪಘಾತ ನಡೆಸಿದ್ದಕ್ಕೆ ಚಾಲಕರಿಬ್ಬರಿಗೂ ಥಳಿಸಿದ್ದು, ನಂತರ ನಗರ ಠಾಣೆಗೆ ಡ್ರೈವರ್ ಮೂಲಕವೇ ದೂರು ಸಲ್ಲಿಸಿದ್ದಾನೆ. ನಂತರ ಚಾಲಕರನ್ನು ತನ್ನ ಸುಪರ್ದಿಯಲ್ಲಿಟ್ಟುಕೊಂಡು, ಕಂಟೈನರ್‌ನಲ್ಲಿಯೇ ಕೂಡಿ ಹಾಕಿ, ಊಟ, ನೀರು ಕೊಡದೇ ಸತಾಯಿಸಿದ್ದು, ಅವಾಚ್ಯಶಬ್ಧಗಳಿಂದ ನಿಂದಿಸಿ ಆಗಾಗ್ಗೆೆ ಥಳಿಸಿದ್ದಾನೆ.

ಗುರುವಾರ ಮದ್ಯಾಹ್ನದ ವೇಳೆಗೆ ತೀವ್ರ ಬಳಲಿದ್ದ ದುರ್ದೈವಿ ಚಾಲಕನನ್ನು ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತರಲಾದರೂ, ಚಿಕಿತ್ಸೆ ಫಲಕಾರಿಯಾಗದೇ ಬಸಪ್ಪ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಮೃತನು ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾನೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮತ್ತೊಬ್ಬ ಚಾಲಕ ಸೋಮಪ್ಪ ಘಟನೆ ಕುರಿತಂತೆ ಪೊಲೀಸರಿಗೆ ವಿವರಿಸಿ, ದೂರು ಸಲ್ಲಿಸಿದ್ದು ಪ್ರಕರಣ ದಾಖಲಿಸಿಕೊಂಡಿರುವ ನಗರ ಪೊಲೀಸರು ಆರೋಪಿಗಳಾದ ಬಾಳಪ್ಪ ಮಲ್ಲಪ್ಪ ಕೋನ್‌ಕೇರಿ, ಸಂತೋಶ್ ಶಿವಪ್ಪ ನವಕೋಡಿ, ಪರಶುರಾಮ ಗೌಡಪ್ಪ, ಪರಶುರಾಮ ಲಗುಮಪ್ಪ ಗೊರಲಿ ಮತ್ತು ಅಡವಪ್ಪ ಬಸಪ್ಪ ಗುಜನಾಳ ಎನ್ನುವವರನ್ನು ಬಂಧಿಸಿದ್ದಾರೆ.

ಗಾಯಾಳು ಜೊತೆಯಲ್ಲಿದ್ದ ಮೃತನ ಭಾವ ಮಡಿವಾಳಪ್ಪ ಮಾತನಾಡಿ, ಲಾರಿ ಮಾಲೀಕ ತನಗೆ ನಷ್ಟವುಂಟಾಗಿದೆ ಎಂದು ಫೋನ್ ಮೂಲಕ ಮೃತನ ಸಹೋದರನನ್ನು ಸಂಪರ್ಕಿಸಿ, ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಈ ವಿಷಯ ತನ್ನ ತಂಗಿಯಿಂದ ನನಗೆ ತಿಳಿದು ಬಂದು, ಅಂತಿಮವಾಗಿ 25 ಸಾವಿರ ನಷ್ಟ ಕಟ್ಟಿಕೊಡುವುದಾಗಿ ಮಾತಾಗಿತ್ತು. ಮೊದಲು ಶಿರಾಕ್ಕೆ ಹಣ ತಂದು ಕೊಡಿ ಎಂದಿದ್ದ ಮಾಲೀಕ, ನಂತರ ಊರಿಗೆ ಬರುವುದಾಗಿಯೂ ಅಲ್ಲಿಯೇ ಹಣ ಪಡೆದು, ಚಾಲಕರಿಬ್ಬರನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದ.

ಆದರೆ ಸ್ವಲ್ಪ ಹೊತ್ತಿನಲ್ಲೇ ನನ್ನ ಭಾವನ ಸಾವಿನ ಸುದ್ದಿ ತಿಳಿಸಿ, ಬಂದು ಎತ್ತಿಕೊಂಡು ಹೋಗಿ ಎಂದಿದ್ದ. ಹಣಕ್ಕಾಗಿ ಅಮಾಯಕರನ್ನು ಚಿತ್ರಹಿಂಸೆ ಮಾಡಿ ಪ್ರಾಣ ತೆಗೆದ ಮಾಲೀಕ ಮತ್ತವನ ಸಹಚರರಿಗೆ ಕಠಿಣವಾದ ಶಿಕ್ಷೆ ಸಿಗಬೇಕು ಎಂದು ಆಗ್ರಸಿದ್ದಾರೆ.

Comments are closed.