ಕರ್ನಾಟಕ

ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳನ್ನು ಎಂದಿಗೂ ಉಪೇಕ್ಷೆ ಮಾಡಬಾರದು: ಮಾಜಿ ಪ್ರಧಾನಿ ದೇವೇಗೌಡ

Pinterest LinkedIn Tumblr


ನವದೆಹಲಿ: ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳನ್ನು ಎಂದಿಗೂ ಉಪೇಕ್ಷೆ ಮಾಡಬಾರದು. ರಾಷ್ಟ್ರ ಮಟ್ಟದಲ್ಲಿ ಪ್ರಾದೇಶಿಕ ಪಕ್ಷಗಳ ಹೊರತಾದ ರಾಜಕಾರಣ ಅಸಾಧ್ಯ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ಮಾತನಾಡಿರುವ ದೇವೇಗೌಡರು, ಗೆದ್ದ ರಭಸದಲ್ಲಿ‌ ಮೋದಿ ಕಾಂಗ್ರೆಸ್ ಮುಕ್ತ ಭಾರತ ಎಂದು ಹೇಳಿಕೆ ನೀಡಿದ್ದರು. ಆದರೆ, ತಮ್ಮ ಅಭಿಪ್ರಾಯ ತಪ್ಪು ಎಂಬುದು ಈಗ ಮೋದಿಗೆ ಮನವರಿಕೆಯಾಗಿದೆ. ಬಿಜೆಪಿಗೆ ಪ್ರಾದೇಶಿಕ ಪಕ್ಷಗಳನ್ನು ನಾಶ ಮಾಡಲು ಸಾಧ್ಯವಿಲ್ಲ. ಅದಕ್ಕೆ ಮಿಜೋರಾಂ, ತೆಲಂಗಾಣ ಫಲಿತಾಂಶಗಳೇ ಸಾಕ್ಷಿ ಎಂದು ಹೇಳಿದ್ದಾರೆ.

ಕೆ. ಚಂದ್ರಶೇಖರ್ ರಾವ್ ಜ್ಯೋತಿಷ್ಯವನ್ನು ನಂಬುತ್ತಾರೆ. ಇದರ ಬಗ್ಗೆ ಬಹಳಷ್ಟು ಜನ ಕುಹಕ ಮಾಡುತ್ತಾರೆ. ಆದರೆ, ಅವರು ಬದ್ಧತೆಯಿಂದ ಕೆಲಸ ಮಾಡಿದ್ದಾರೆ. ಇದನ್ನು ರಾಷ್ಟ್ರೀಯ ಪಕ್ಷಗಳು ತಿಳಿದುಕೊಳ್ಳಬೇಕು. ಪಂಚರಾಜ್ಯ ಫಲಿತಾಂಶ ಆಡಳಿತ ವಿರೋಧಿ ಅಲೆಯ ದ್ಯೋತಕವಾಗಿದೆ. ಇದು ಕೇಂದ್ರ, ರಾಜ್ಯ ಸರ್ಕಾರಗಳ ಮೇಲಿನ ಆಡಳಿತ ವಿರೋಧಿ ಅಲೆಯನ್ನು ಬಿಂಬಿಸುತ್ತಿದೆ ಎಂದು ದೆಹಲಿಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹೇಳಿದ್ದಾರೆ.

ರಾಹುಲ್ ಗಾಂಧಿ ಬಗ್ಗೆ ಲಘುವಾಗಿ ಮಾತಾಡಬಾರದು:

ನಿನ್ನೆ ನಡೆದ ಮಹಾಮೈತ್ರಿ ಸಭೆ ಸ್ವಲ್ಪಮಟ್ಟಿಗೆ ಯಶಸ್ವಿಯಾಗಿದೆ. ರಾಹುಲ್ ಗಾಂಧಿ‌‌ ಮೈತ್ರಿಯ ನಾಯಕತ್ವ ವಹಿಸಬೇಕಿದೆ. ಈಗಲೇ ಲೋಕಸಭಾ ಚುನಾವಣೆ ಬಗ್ಗೆ ಹೇಳಲು ಸಾಧ್ಯವಿಲ್ಲ. ರಾಹುಲ್ ಗಾಂಧಿ ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅವರ ಬಗ್ಗೆ ಲಘುವಾಗಿ ಮಾತನಾಡಬಾರದು. ರಾಹುಲ್ ಗಾಂಧಿ ಸಾಧನೆಯನ್ನು ಕಡೆಗಣಿಸುವಂತಿಲ್ಲ ಎಂದು ಈ ವೇಳೆ ದೇವೇಗೌಡರು ಹೇಳಿದ್ದಾರೆ.

Comments are closed.