ಕರ್ನಾಟಕ

ಸುಮಲತಾ ಅಂಬರೀಶ್ ರಾಜಕೀಯ ಪ್ರವೇಶಕ್ಕೆ ವೇದಿಕೆ ಸಜ್ಜು

Pinterest LinkedIn Tumblr


ಬೆಂಗಳೂರು: ರೆಬೆಲ್‌ಸ್ಟಾರ್ ಅಂಬರೀಶ್ ತಾರಾ ವರ್ಚಸ್ಸಿನಿಂದಲೇ ತವರು ಜಿಲ್ಲೆಯಲ್ಲಿ ಪ್ರಭಾವಿ ರಾಜಕಾರಣಿಯಾಗಿದ್ದರು. ಅಧಿಕಾರದ ಹಲವು ಮಜಲುಗಳನ್ನು ಅನುಭವಿಸಿ ಅಗಲಿರುವ ಅಂಬರೀಶ್ ಸ್ಥಾನ ತುಂಬಲು ಅವರ ಪತ್ನಿ ಸುಮಲತಾ ಅವರಿಗೆ ವೇದಿಕೆ ಸಜ್ಜುಗೊಳಿಸಲು ದಳಪತಿಗಳು ಸಿದ್ಧತೆ ನಡೆಸಿದ್ದಾರೆ.

ರಾಮನಗರ ಉಪ ಚುನಾವಣೆ ಸೋಲಿನ ತರುವಾಯ ಸತತ ಮೂರು ಬಾರಿ ಮಂಡ್ಯದಿಂದ ಅಂಬರೀಶ್ ಲೋಕಸಭೆಗೆ ಆಯ್ಕೆಯಾಗಿದ್ದರು. ಮಂಡ್ಯದಿಂದ ಒಮ್ಮೆ ವಿಧಾನಸಭೆಗೆ ಆಯ್ಕೆಯಾಗಿ, ವಸತಿ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. ಕಳೆದ ಚುನಾವಣೆಯಲ್ಲಿ ಅನಾರೋಗ್ಯದ ಕಾರಣ ಮುಂದೊಡ್ಡಿ ಮನೆ ಬಾಗಿಲಿಗೆ ಬಂದ ಟಿಕೆಟ್ ನಿರಾಕರಿಸಿದ್ದರು.

ಅಂಬರೀಶ್ ಅವರ ಬಗ್ಗೆ ಮಂಡ್ಯದಲ್ಲಿ ಪಕ್ಷಾತೀತವಾಗಿ ಅಭಿಮಾನವಿದೆ. ಅವರ ಅಗಲಿಕೆಯು ಮಂಡ್ಯ ಜಿಲ್ಲೆ ರಾಜಕಾರಣದಲ್ಲಿ ಖಾಲಿತನ ಸೃಷ್ಟಿಸಿದೆ. ಆ ಸ್ಥಾನ ತುಂಬಲು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಅವರಿಗೆ ಟಿಕೆಟ್ ನೀಡಲು ಜೆಡಿಎಸ್ ವರಿಷ್ಠರು ಮುಂದಾಗಿದ್ದಾರೆ. ಅದಕ್ಕೆ ಸುಮಲತಾ ಒಪ್ಪಿಗೆ ಬಗ್ಗೆೆ ಖಚಿತವಾಗಿಲ್ಲ.

ಅಂಬರೀಶ್ ನಿಧನರಾದ ನಂತರ ಅವರ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ಕೊಂಡೊಯ್ದು, ಅಲ್ಲಿ ಸಾರ್ವಜನಿಕರ ದರ್ಶನಕ್ಕಿಟ್ಟು ವಾಪಸ್ ಬೆಂಗಳೂರಿಗೆ ತರುವಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಜೆಡಿಎಸ್ ಸಚಿವರು, ಶಾಸಕರು ಮತ್ತು ಮುಖಂಡರು ಭಾರಿ ಮುತುವರ್ಜಿ ವಹಿಸಿದ್ದರು.

ಅಂಬರೀಶ್ ಸಾವಿನ ನಂತರ ಮೌನವಾಗಿದ್ದ ಮಂಡ್ಯ ರಾಜಕೀಯ ವಲಯದಲ್ಲಿ ಇದೀಗ ಸುಮಲತಾ ಜೆಡಿಎಸ್‌ನಿಂದ ಲೋಕಸಭೆಗೆ ಸ್ಪರ್ಧೆ ಮಾಡುತ್ತಾರೆನ್ನುವ ಮಾತುಗಳು ದಟ್ಟವಾಗಿ ಕೇಳಿ ಬರುತ್ತಿವೆ. ಮಂಡ್ಯದ ರಾಜಕೀಯ ಪಡಸಾಲೆಗಳಷ್ಟೇ ಅಲ್ಲದೆ, ಬೆಂಗಳೂರಿನ ಜೆಡಿಎಸ್ ಕಚೇರಿ ಜೆಪಿ ಭವನದಲ್ಲೂ ಸುಮಲತಾ ಸ್ಪರ್ಧೆ ವಿಚಾರ ಚರ್ಚೆಯಾಗಿದೆ.

ಅಂಬರೀಶ್ ಅವರ ಜನಪ್ರಿಯತೆ ಹಾಗೂ ಅವರ ನಿಧನದ ಬಳಿಕ ಮೂಡಿರುವ ಸಿಂಪಥಿ ಮಾಸದಂತೆ ನೋಡಿಕೊಂಡು, ತನ್ನ ಭದ್ರಕೋಟೆಯಲ್ಲಿ ಸುಮಲತಾ ಅವರಿಗೆ ರಾಜಕೀಯ ಸ್ಥಾನಮಾನ ಕಲ್ಪಿಸುವುದಕ್ಕೆ ಜೆಡಿಎಸ್ ವರಿಷ್ಠರು ಉತ್ಸುಕರಾಗಿದ್ದಾರೆ. ಈ ಮೂಲಕ ಅಗಲಿದ ಅಂಬರೀಶ್ ಅವರಿಗೆ ಕೃತಜ್ಞತೆ ಸಲ್ಲಿಸುವುದು ದಳಪತಿಗಳ ಉಮೇದಿಯಾಗಿದೆ.

ಮಂಡ್ಯ ಲೋಕಸಭಾ ಕ್ಷೇತ್ರದ ಎಲ್ಲ 8 ವಿಧಾನಸಭಾ ಕ್ಷೇತ್ರಗಳಲ್ಲೂ ಜೆಡಿಎಸ್ ಶಾಸಕರಿದ್ದಾರೆ. ಪಕ್ಷಕ್ಕೆ ಮಂಡ್ಯ ಭದ್ರಕೋಟೆ ಎನ್ನುವುದು ಕಳೆದ ಉಪ ಚುನಾವಣೆಯಲ್ಲಿ ಸಾಬೀತಾಗಿದೆ. ಪಕ್ಷದ ಸಾಂಪ್ರದಾಯಿಕ ಮತಗಳ ಜತೆಗೆ ಅಂಬರೀಶ್ ಅನುಕಂಪವೂ ಸೇರುವುದರಿಂದ ಸುಮಲತಾ ಅವರು ದಾಖಲೆ ಮತಗಳ ಅಂತರದಿಂದ ಗೆಲ್ಲುತ್ತಾರೆ ಎನ್ನುವುದು ಜೆಡಿಎಸ್ ಲೆಕ್ಕಾಚಾರ.

ಅಂಬರೀಶ್ ಅವರು ಯಾವುದೇ ಪಕ್ಷದಲ್ಲಿರಲಿ ಅಲ್ಲಿ ಜನ ನೋಡುತ್ತಿದ್ದುದು ವೈಯಕ್ತಿಕವಾಗಿ ಅವರನ್ನೇ ಹೊರತು ಪಕ್ಷವನ್ನಲ್ಲ. ಸುಮಲತಾ ಅವರೊಂದಿಗೆ ಜೆಡಿಎಸ್ ನಾಯಕರು ಈವರೆಗೆ ಚರ್ಚೆಯನ್ನೇನೂ ನಡೆಸಿಲ್ಲ. ಅದರ ಸುಳಿವನ್ನರಿತೇ ನೂತನ ಸಂಸದ ಎಲ್.ಆರ್.ಶಿವರಾಮೇಗೌಡ ಅವರು ಮತ್ತೊಮ್ಮೆ ಟಿಕೆಟ್‌ಗಾಗಿ ವರಿಷ್ಠರ ಬಳಿ ಬೇಡಿಕೆ ಇಡುವ ಮಾತುಗಳನ್ನಾಡಿದ್ದಾರೆ.

ಸಿಂಪಥಿ ಲಾಭ ಇದೇ ಮೊದಲಲ್ಲ
ಸಾವಿನ ಮನೆಯಲ್ಲಿ ರಾಜಕಾರಣ ಮಾಡಲಾಗುತ್ತಿದೆ ಎಂದು ‘ವಿಶ್ವವಾಣಿ’ ವರದಿ ಮಾಡಿದಾಗ ಬಹಳಷ್ಟು ಜನ ವ್ಯಂಗ್ಯವಾಡಿದ್ದರು. ಇದು ಒಪ್ಪಲಾಗದ ಮಾತು ಎಂದಿದ್ದರು. ಆದರೆ, ಮಂಡ್ಯ ಜಿಲ್ಲೆೆಯಲ್ಲೇ ಅದಕ್ಕೊಂದು ಪರಂಪರೆಯೇ ಇರುವುದನ್ನು ಮರೆಯುವಂತಿಲ್ಲ.

ಶ್ರೀರಂಗಪಟ್ಟಣ ಕ್ಷೇತ್ರದ ಬಂಡಿಸಿದ್ದೇಗೌಡರು ನಿಧನರಾದಾಗ ಎದುರಾದ ಉಪ ಚುನಾವಣೆಯಲ್ಲಿ ಅವರ ಪತ್ನಿ ವಿಜಯಲಕ್ಷ್ಮೀ ಬಂಡಿಸಿದ್ದೇಗೌಡರಿಗೇ ಜನತಾ ಪರಿವಾರದಿಂದ ಟಿಕೆಟ್ ನೀಡಲಾಗಿತ್ತು.
ಮಂಡ್ಯದಲ್ಲಿ ಎಸ್.ಡಿ.ಜಯರಾಮ್ ನಿಧನರಾದಾಗ ಅವರ ಪತ್ನಿ ಪ್ರಭಾವತಿ ಜಯರಾಮ್‌ಗೆ ಹಾಗೂ ಮದ್ದೂರಿನಲ್ಲಿ ಎಂ.ಎಸ್.ಸಿದ್ದರಾಜು ಅಗಲಿದಾಗ ಅವರ ಪತ್ನಿ ಕಲ್ಪನಾ ಸಿದ್ದರಾಜುಗೆ ಟಿಕೆಟ್ ನೀಡಿ, ಗೆಲ್ಲಿಸಿಕೊಳ್ಳಲಾಗಿತ್ತು.

ಇದೀಗ ಲೋಕಸಭೆ ಸಾರ್ವತ್ರಿಕ ಚುನಾವಣೆ ಹೊಸ್ತಿಲಲ್ಲಿ ಅಂಬರೀಶ್ ನಿಧನರಾದರು. ಅವರ ಪತ್ನಿ ಸುಮಲತಾ ಅವರನ್ನು ರಾಜಕಾರಣಕ್ಕೆ ಕರೆತರಲು ಜೆಡಿಎಸ್ ವರಿಷ್ಠರು ಆಸಕ್ತಿ ವಹಿಸಿದ್ದಾರೆ ಎನ್ನಲಾಗಿದೆ.

Comments are closed.