ಕರ್ನಾಟಕ

ರಾಮಮಂದಿರ ನಿರ್ಮಾಣಕ್ಕಾಗಿ ಒತ್ತಾಯಿಸಿ ಬೆಂಗಳೂರು, ಉಡುಪಿ, ಬಾಗಲಕೋಟ, ವಿಜಯಪುರದಲ್ಲಿ ಬೃಹತ್ ಜನಾಗ್ರಹ ಸಭೆ

Pinterest LinkedIn Tumblr


ಬೆಂಗಳೂರು: ರಾಜ್ಯ ರಾಜಧಾನಿ ಭಾನುವಾರ ಕೇಸರಿಮಯವಾಗಿತ್ತು. ನಗರದ ಹಲವು ಕಡೆಗಳಿಂದ ಹೊರಟ ಸಂಘ ಪರಿವಾರದ ರಾರ‍ಯಲಿಗಳು ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಸಂಗಮಿಸಿದವು. ಅಯೋಧ್ಯೆಯಲ್ಲೇ ರಾಮ ಮಂದಿರ ನಿರ್ಮಿಸಬೇಕೆಂಬ ಜಯಘೋಷ ಅಲ್ಲಿ ಕೇಳಿಬಂತು.

ಬೃಹತ್‌ ಜನಾಗ್ರಹ ಸಭೆಯಲ್ಲಿ ಸೇರಿದ್ದ ಜನ ಸಮೂಹದ ಆಶಯಕ್ಕೆ ಅಸಂಖ್ಯ ಸಾಧು-ಸಂತರು ಬೆಂಬಲ ಸೂಚಿಸಿದರು. ಹೋರಾಟದ ಮೂಲಕ ಅಯೋಧ್ಯೆಯಲ್ಲಿ ಮಂದಿರ ಕಟ್ಟುವ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಮಂದಿರ ಕಟ್ಟುವುದಿದ್ದಲ್ಲಿ ಅದು ಅಯೋಧ್ಯೆಯ ರಾಮ ಜನ್ಮಸ್ಥಳದಲ್ಲಿ ಆಗಿಯೇ ತೀರಬೇಕು. ಸುಪ್ರೀಂಕೋರ್ಟ್‌ ಕೂಡ ಜನರ ಆಶಯಕ್ಕೆ ಸ್ಪಂದಿಸಿ ಬೇಗನೆ ತೀರ್ಪು ಪ್ರಕಟಿಸಬೇಕು. ವಿನಾಕಾರಣ ವಿಳಂಬ ನೀತಿ ಅನುಸರಿಸಿದರೆ ಯಾವುದೇ ಹೋರಾಟಕ್ಕೂ ಸಿದ್ಧ ಎಂದು ಸಭೆಯು ಸ್ಪಷ್ಟ ಸಂದೇಶ ಸಾರಿತು. ಉಡುಪಿ, ಬಾಗಲಕೋಟ, ವಿಜಯಪುರದಲ್ಲೂ ಬೃಹತ್‌ ಜನಾಗ್ರಹ ಸಭೆ ನಡೆಯಿತು.

ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಿಸಲು ಕೇಂದ್ರ ಸರಕಾರದಿಂದ ಸುಗ್ರೀವಾಜ್ಞೆ ಹೊರಡಿಸುವಂತೆ ಒತ್ತಾಯಿಸಲು ಪ್ರಧಾನಿ ನರೇಂದ್ರ ಮೋದಿ ಬಳಿಗೆ ನಿಯೋಗ ಕೊಂಡೊಯ್ಯಲಾಗುವುದು ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಘೋಷಿಸಿದರು.
‘‘ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ರಾಷ್ಟ್ರ ಹಾಗೂ ಜನರ ಸ್ವಾಭಿಮಾನದ ಪ್ರಶ್ನೆಯಾಗಿದೆ. ಇದಕ್ಕೆ ಸ್ಪಂದಿಸಿ ಸರಕಾರ ಸುಗ್ರೀವಾಜ್ಞೆ ಹೊರಡಿಸಲು ಸಂಸತ್ತಿನ ಉಭಯ ಸದನಗಳಲ್ಲಿ ಮಂದಿರ ನಿರ್ಮಿಸುವ ಪರವಾದ ನಿರ್ಣಯ ಕೈಗೊಳ್ಳಬೇಕು. ಈ ಮಹತ್ಕಾರ್ಯವನ್ನು ತ್ವರಿವಾಗಿ ಅನುಷ್ಠಾನಕ್ಕೆ ತರಲು ಸಂತರ ನಿಯೋಗವು ಪ್ರಧಾನಿ ಬಳಿಗೆ ತೆರಳಿ ಒತ್ತಾಯಿಸಬೇಕಿದೆ,’’ ಎಂದು ಶ್ರೀಗಳು ಹೇಳಿದರು.

‘‘ದಿಲ್ಲಿಯಲ್ಲಿ ಡಿ.9ಕ್ಕೆ ಧರ್ಮ ಸಂಸತ್‌ ನಡೆಯಲಿದ್ದು, ಅಲ್ಲಿ ಮಂದಿರ ನಿರ್ಮಾಣದ ರೂಪುರೇಷೆಗಳ ಚೌಕಟ್ಟು ನೀಡಲಾಗುವುದು. ಇದೇ ಸಂದರ್ಭದಲ್ಲಿ ಸರಕಾರದಿಂದ ಸುಗ್ರೀವಾಜ್ಞೆ ಹೊರಬೀಳಲು ಒತ್ತಡ ಹೇರಬೇಕಿದೆ. ಇದಕ್ಕೂ ಜಗ್ಗದಿದ್ದಲ್ಲಿ ಸಂತರು ಉಪವಾಸ ಕೂರಲು ಕೂಡ ಹಿಂದೇಟು ಹಾಕುವುದಿಲ್ಲ. ಜನ ಕೂಡ ತ್ಯಾಗ-ಬಲಿದಾನಕ್ಕೆ ಸಿದ್ಧರಾಗಬೇಕು. ಮಂದಿರ ನಿರ್ಮಾಣಕ್ಕೆ ಮುಸ್ಲಿಂ ಹಾಗೂ ಕೈಸ್ತರೂ ಬೆಂಬಲಿಸಲಿಸಬೇಕು,’’ ಎಂದು ಕರೆ ನೀಡಿದರು.

ಹೋರಾಟಕ್ಕೆ ಪಕ್ಷಾತೀತ ಬೆಂಬಲ ಬೇಕು

“ಚಪ್ಪಲಿಯನ್ನು ಸ್ಯಾಂಡಲ್‌ ಎಂದು ಕರೆಯುವ ಕುರಿತು ಸುಪ್ರೀಂಕೋರ್ಟ್‌ ವಿಚಾರಣೆ ನಡೆಸುತ್ತದೆ. ಯಾಕೂಬ್‌ ಮೆನನ್‌ನಂತಹ ಉಗ್ರನಿಗಾಗಿ ಮಧ್ಯರಾತ್ರಿ ಬಾಗಿಲು ತೆರೆಯುತ್ತದೆ. ಆದರೆ, ಕೋಟ್ಯಂತರ ಹಿಂದೂಗಳ ಭಾವನೆಗೆ ಸ್ಪಂದಿಸಲು ಅದಕ್ಕೆ ಸಮಯ ಇರುವುದಿಲ್ಲ. ರಾಮಜನ್ಮಭೂಮಿಯ ಹಕ್ಕುಪತ್ರವನ್ನು ಶ್ರೀರಾಮನಿಗೆ ನೀಡುವುದು ಕೋರ್ಟ್‌ಗೆ ಮಹತ್ವದ ಸಂಗತಿಯೇ ಆಗಿಲ್ಲ!”
–ಸಿ.ಆರ್‌.ಮುಕುಂದ್‌, ಆರ್‌ಎಸ್‌ಎಸ್‌ ಸಹ ಸರಕಾರ್ಯವಾಹ

“ರಾಮ ಮಂದಿರದ ಪರ ದನಿ ಎತ್ತಿರುವ ಹಿಂದೂಗಳನ್ನು ಕೋಮುವಾದಿಗಳೆಂದು ಹೀಗಳೆಯುವುದು ಸರಿಯಲ್ಲ. ಹಿಂದೂಗಳು ಎಂದೂ ಆ ರೀತಿ ವರ್ತಿಸದೆ ‘ಪ್ರೇಮವಾದಿ’ಗಳಾಗಿ ಇರುತ್ತಾರೆ. ಇವರು ‘ರಾಮವಾದಿ’ಗಳೂ ಆಗಿರುತ್ತಾರೆ. ಹನುಮ ಜನಿಸಿದ ಕರುನಾಡಿನ ಕನ್ನಡಿಗರು ರಾಮಬಂಟರಾಗಿ ಮಂದಿರ ನಿರ್ಮಾಣದಲ್ಲಿ ಮುಂಚೂಣಿಯಲ್ಲಿರಬೇಕು.”
–ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠಾಧೀಶರು

************************

ಇನ್ನೊಂದು ವರ್ಷದಲ್ಲಿ ಮಂದಿರ ನಿರ್ಮಾಣ: ಕಲ್ಲಡ್ಕ ಭಟ್‌
ಬಾಗಲಕೋಟ/ ಉಡುಪಿ: ಇನ್ನೊಂದೇ ವರ್ಷದಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಲಿದೆ ಎಂದು ಆರೆಸ್ಸೆಸ್‌ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಕಲ್ಲಡ್ಕ ಪ್ರಭಾಕರ ಭಟ್‌ ಘೋಷಿಸಿದರು.

ಅವರು ರಾಮ ಮಂದಿರ ನಿರ್ಮಾಣಕ್ಕಾಗಿ ವಿಶ್ವ ಹಿಂದು ಪರಿಷತ್‌ ಭಾನುವಾರ ಆಯೋಜಿಸಿದ್ದ ಜನಾಗ್ರಹ ಸಭೆಯಲ್ಲಿ ಮಾತನಾಡಿ, ‘‘ಮುಂದಿನ ವರ್ಷ ಇದೇ ದಿನ ಎಲ್ಲರೂ ಪಟಾಕಿ ಸಿಡಿಸೋಣ. ಮಂದಿರ ವಿರೋಧಿಸುವವರು ತಾಕತ್ತಿದ್ದರೆ ಪ್ರಾರ್ಥನಾ ಮಂದಿರ ನಿರ್ಮಿಸಲಿ. ಸಮಾಧಿ ಮಾಡುವವರನ್ನು ನಾವು ಸಮಾಧಿ ಮಾಡುತ್ತೇವೆ’ ಎಂದು ಗುಡುಗಿದರು.

‘‘ದೇಶವನ್ನು ಕೇಸರೀಕರಣ ಮಾಡಲಾಗುತ್ತಿದೆ ಎಂದು ನಮ್ಮ ಮೇಲೆ ಆರೋಪಿಸಲಾಗುತ್ತದೆ, ಆದರೆ ಇಡೀ ದೇಶವೇ ಕೇಸರಿಮಯವಾಗಿದೆ. ರಾಮ ಹಾಗೂ ಕೃಷ್ಣನ ರಥದಲ್ಲಿ ಕೇಸರಿ ಬಣ್ಣವಿದೆ, ದೇಶಕ್ಕೆ ಸ್ವಾತಂತ್ರ್ಯ ದೊರೆತಾಗ ಧ್ವಜ ಸಮಿತಿ ಸಂಪೂರ್ಣ ಕೇಸರಿ ಧ್ವಜ ರೂಪಿಸಬೇಕು ಎಂದು ಹೇಳಿತ್ತು. ದುರ್ಬಲ ನಾಯಕರಿಂದ ಅದು ಕಾರ್ಯಾನುಷ್ಠಾನವಾಗಲಿಲ್ಲ,’’ ಎಂದರು.

ಮಂದಿರ ಖಚಿತ, ಕೋರ್ಟ್‌ ಮಾತು ನಗಣ್ಯ
ವಿಶ್ವ ಹಿಂದೂ ಪರಿಷತ್‌ ಭಾನುವಾರ ಉಡುಪಿಯಲ್ಲಿ ಆಯೋಜಿಸಿದ್ದ ಜನಾಗ್ರಹ ಸಭೆಯಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್‌ ದಕ್ಷಿಣ ಪ್ರಾಂತ ವಿಶೇಷ ಸಂಪರ್ಕ್‌ ಪ್ರಮುಖ್‌ ಮಂಜುನಾಥ್‌ ಸ್ವಾಮಿ, ‘‘ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಏನಾದರೂ ಬಾಬರಿ ಮಸೀದಿ ಪರ ತೀರ್ಪು ಕೊಟ್ಟರೆ ನಾವು ಒಪ್ಪುವುದಿಲ್ಲ. ಈ ವಿಚಾರದಲ್ಲಿ ಸುಪ್ರಿಂ ಕೋರ್ಟ್‌ ಏನೇ ಹೇಳಿದರೂ ಮಾನ್ಯ ಮಾಡುವುದಿಲ್ಲ. ಅಲ್ಲಿ ರಾಮ ಮಂದಿರ ಕಟ್ಟಿಯೇ ಸಿದ್ಧ,’’ ಎಂದು ಹೇಳಿದರು.

‘‘ರಾಮ ಮಂದಿರ ವಿಚಾರವಾಗಿ 450ಕ್ಕೂ ಅಧಿಕ ವರ್ಷಗಳಿಂದ ವಿವಾದಗಳು ನಡೆಯುತ್ತಿದ್ದರೂ, ಕೋರ್ಟ್‌ ರಾಮನ ಹುಟ್ಟು, ಪುರಾವೆಗಳನ್ನು ಕೇಳುತ್ತಿದೆ. ಇದು ಸರಿಯಲ್ಲ,’’ ಎಂದು ವಾಕ್‌ಪ್ರಹಾರ ನಡೆಸಿದರು.

ರಾಜಧಾನಿಯಲ್ಲಿ ಮಂದಿರಕ್ಕಾಗಿ ಪಂಚಯಾತ್ರೆ
ಬೆಂಗಳೂರು: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು ಬೆಂಬಲ ವ್ಯಕ್ತಪಡಿಸಿ ವಿಶ್ವ ಹಿಂದೂ ಪರಿಷತ್‌ ಆಯೋಜಿಸಿದ್ದ ಜನಾಗ್ರಹ ಸಭೆಗೂ ಮುನ್ನ ಮಹಾನಗರದ ಐದು ಕಡೆಗಳಿಂದ ಕೈಗೊಂಡ ಅಭೂತಪೂರ್ವ ಮೆರವಣಿಗೆ ಆಕರ್ಷಕವಾಗಿತ್ತು.

‘ಜೈ ಶ್ರೀರಾಮ್‌’, ‘ಜೈ ಹನುಮಾನ್‌’, ‘ಜೈ ರಾಮಜನ್ಮಭೂಮಿ ಅಯೋಧ್ಯಾ’ ಎಂಬ ಘೋಷಣೆಗಳು ಮೆರವಣಿಗೆಗೆ ಕಳೆ ಕಟ್ಟಿದವು. ಮೆರವಣಿಗೆಯಲ್ಲಿ ಶ್ರೀರಾಮ, ಆಂಜನೇಯ ಸಹಿತ ಹಲವು ದೇವತೆಯರ ವೇಷಭೂಷಣ ಧರಿಸಿದ್ದವರು ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು. ಮೈಸೂರು ಬ್ಯಾಂಕ್‌ ವೃತ್ತ, ಜೆ.ಸಿ.ನಗರ, ದೊಡ್ಡಗಣಪತಿ ದೇವಸ್ಥಾನ, ಶಿರಸಿ ವೃತ್ತ ಹಾಗೂ ವಿ.ವಿ.ಪುರದಿಂದ ಆರಂಭಗೊಂಡ ಮೆರವಣಿಗೆಯಲ್ಲಿ ಸಾವಿರಾರು ಮಂದಿ ರಾಮಭಕ್ತರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

ಐದೂ ಕಡೆಗಳಿಂದ ಬಂದ ಮೆರವಣಿಗೆಗಳು ಜನಾಗ್ರಹ ಸಭೆ ನಡೆದ ಬಸವನಗುಡಿಯ ನ್ಯಾಷನಲ್‌ ಕಾಲೇಜು ಮೈದಾನಕ್ಕೆ ಬಂದಾಗ ಅಕ್ಷರಶಃ ಪಂಚ ನದಿಗಳ ಸಂಗಮದ ರೀತಿ ಜನಸ್ತೋಮ ಹರಿದುಬಂದ ದೃಶ್ಯ ಜನರನ್ನು ರೋಮಾಂಚನಗೊಳಿಸಿತು.

17 ಅಡಿ ಎತ್ತರದ ಶ್ರೀರಾಮ
ಜೆ.ಸಿ.ನಗರದ ದೂರದರ್ಶನ ಕೇಂದ್ರದ ಬಳಿ ಆರಂಭವಾದ ಮೆರವಣಿಗೆಯಲ್ಲಿ ಸಾವಿರಾರು ಜನರು ಭಾಗಿಯಾಗಿದ್ದರು. ಈ ಮೆರವಣಿಗೆಯಲ್ಲಿ 17 ಅಡಿ ಎತ್ತರದ ರಾಮನ ಮೂರ್ತಿಯ ಪ್ರದರ್ಶನ ಆಕರ್ಷಕವಾಗಿ ಕಂಡುಬಂತು. ಮೇಖ್ರಿ ವೃತ್ತ, ಗುಟ್ಟಹಳ್ಳಿ, ಬಸವೇಶ್ವರ ವೃತ್ತ, ಕಾರ್ಪೊರೇಷನ್‌, ಲಾಲ್‌ಬಾಗ್‌ ಮೂಲಕ ಈ ಮೆರವಣಿಗೆಯು ನ್ಯಾಷನಲ್‌ ಕಾಲೇಜು ಮೈದಾನಕ್ಕೆ ಬಂತು. ಮೈಸೂರು ಬ್ಯಾಂಕ್‌ ವೃತ್ತದಿಂದ 12 ಅಡಿ ಎತ್ತರದ ಆಂಜನೇಯ ಮೂರ್ತಿಯನ್ನೊಳಗೊಂಡ ಮೆರವಣಿಗೆ ಆರಂಭವಾಗಿ ನ್ಯಾಷನಲ್‌ ಕಾಲೇಜು ಮೈದಾನ ತಲುಪಿತು.

Comments are closed.