ಕರ್ನಾಟಕ

500 ರೂ.ಗೆ ಖಳನಾಯಕನಾಗಿ ಬಂದವನು ನಾನು: ಅಂಬರೀಷ್

Pinterest LinkedIn Tumblr


ಬೆಂಗಳೂರು: ನಾನು ಚಿತ್ರರಂಗಕ್ಕೆ 500 ರೂ.ಗಾಗಿ ಖಳನಾಯಕನಾಗಿ ಬಂದವನು. ಹಾಗಾಗಿ ಇಂದು ನಾನು ಮಗನಿಗೆ ಯಾವುದೇ ಕೆಲಸ ಮಾಡಲ್ಲ ಅಂತ ಒತ್ತಡ ಹಾಕಲ್ಲ. ಮಗನಿಗೆ ಇಂದು ಎಲ್ಲ ಅವಕಾಶಗಳು ಅವನ ಮುಂದಿವೆ. ನಾನಾಗಲಿ ಅಥವಾ ಸುಮ ಆತನ ವೃತ್ತಿ ಬಗ್ಗೆ ಯಾವುದೇ ಒತ್ತಡ ಹೇರಲ್ಲ ಎಂದು ರೆಬೆಲ್ ಸ್ಟಾರ್ ಅಂಬರೀಶ್ ಈ ಹಿಂದೆ ಪಬ್ಲಿಕ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

ಮಗ ಅಭಿಷೇಕ್ ನಿಗೆ ಒಳ್ಳೆಯ ಶಿಕ್ಷಣ ನೀಡಿದ್ದೇವೆ. ಜೀವನದಲ್ಲಿ ಹೇಗೆ ಬದುಕಬೇಕು ಎಂಬವುದನ್ನು ಕಲಿಸಿದ್ದೇವೆ. ಲಂಡನ್ ನಲ್ಲಿಯೂ ಆತ ಶಿಕ್ಷಣ ಪಡೆದಿದ್ದಾನೆ. ಶಿಕ್ಷಣ ಮುಗಿಸಿ ಮನೆಗೆ ಬಂದಾಗ ಅಪ್ಪ ನಾನು ತುಂಬಾ ಟೈಯರ್ಡ್ ಆಗಿದ್ದೇನೆ. ರೆಸ್ಟ್ ಬೇಕೆಂದು ಕೇಳಿದ. ಒಂದು ವರ್ಷ ಗೆಳೆಯರೊಂದಿಗೆ ಸಮಯ ಕಳೆದಿದ್ದಾನೆ. ಇಂದು ಇಂಡಸ್ಟ್ರಿಯ ಎಲ್ಲ ನಟರು, ಯುವ ನಾಯಕರು ಆತನಿಗೆ ಪರಿಚಯವಾಗಿದ್ದಾರೆ. ತಾನು ಸಿನಿಮಾದಲ್ಲಿ ನಟಿಸಬೇಕೆಂಬ ಆಸೆ ಬಂತು. ಹಾಗಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾನೆ.

ಈಗಿನ ಕಾಲದ ಮಕ್ಕಳಿಗೆ ಏನು ಹೇಳೊದಕ್ಕೆ ಆಗಲ್ಲ. ನೀನು ಡಾಕ್ಟರ್ ಆಗು, ಇಂಜಿನೀಯರ್, ನಟನಾಗು ಎಂದು ಹೇಳೋದು ಕಷ್ಟ. ಇನ್ನು ಮದುವೆ ವಿಚಾರವಾಗಿ ಸಲಹೆ ನೀಡುವುದು ಕಷ್ಟ ಆಗುತ್ತೆ. ತಮಗೆ ಇಷ್ಟವಾದ್ರೆ ಯಾರನ್ನು ಬೇಕಾದರು ಮದುವೆ ಆಗಬಹುದು. ನನ್ನ ಮಗ ಇಂಡಸ್ಟ್ರಿಯಲ್ಲಿ ದೊಡ್ಡ ಹೀರೋ ಆಗಬೇಕು ಅಂತಾ ಎಂದು ನಾನು ಮತ್ತು ಸುಮಲತಾ ಆಸೆ ಪಟ್ಟಿಲ್ಲ. ನನ್ನ ಜೀವನವೇ ಬೇರೆ ಸಿನಿಮಾ ಮತ್ತು ರಾಜಕೀಯದಲ್ಲಿಯೂ ನಾನಿದ್ದೇನೆ. ಹಾಗಾಗಿ ಈ ಎರಡರಲ್ಲಿ ಅವನಿಗೆ ಇದನ್ನೇ ಆಯ್ಕೆ ಮಾಡಿಕೊ ಅಂತ ಹೇಳಲು ಸಾಧ್ಯವಿಲ್ಲ. 21ನೇ ಶತಮಾನದಲ್ಲಿ ಯಾರಿಗೂ ಏನು ಹೇಳೊಂಗಿಲ್ಲ. ಅವರಿಗೆ ಇಷ್ಟ ಬಂದಿದ್ದನ್ನ ಮಾಡಲು ಬಿಡಬೇಕು. ಒಂದು ವೇಳೆ ಮಕ್ಕಳು ಇಷ್ಟಪಡುವ ವಲಯ ಅಥವಾ ಕೆಲಸದ ಬಗ್ಗೆ ನಮಗೆ ಗೊತ್ತಿದ್ದರೆ, ಅವರಿಗೆ ಸಲಹೆ ನೀಡಬಹುದು ಎಂದು ಹೇಳಿದ್ದರು.

ನಮ್ಮ ತಂದೆಗೆ ನಾನು ಡಾಕ್ಟರ್ ಆಗಬೇಕೆಂದ ಆಸೆ ಇತ್ತು. ಆದ್ರೆ ನಾನು ಆ್ಯಕ್ಟರ್ ಆದೆ. ಇಂದು ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿದ್ದರಿಂದ ನನ್ನ ಹೆಸರಿನ ಮುಂದೆ ಡಾಕ್ಟರ್ ಅಂತಾ ಬಂದಿದೆ. ಒಂದು ವೇಳೆ ನಾನು ಡಾಕ್ಟರ್ ಆಗಿದ್ದರೆ, ಹೇಗಿರ್ತಿದ್ದೆ ಎಂಬುದನ್ನು ನನ್ನ ಪತ್ನಿ ಚೆನ್ನಾಗಿ ಹೇಳುತ್ತಾಳೆ. ನಾನು ಹೇಳಬಹುದಿತ್ತು, ಆದ್ರೆ ನನಗೆ ತುಂಬಾ ನಾಚಿಕೆ ಆಗುತ್ತೆ. ನಿಮಗೆ ಯಾವತ್ತಾದರೂ ಆಕೆ ಸಿಕ್ಕರೆ ಕೇಳಿ ಉತ್ತರ ಪಡೆದುಕೊಳ್ಳಿ ಅಂತಾ ಪ್ರತಿಕ್ರಿಯಿಸಿದ್ದರು.

Comments are closed.