ಕರ್ನಾಟಕ

ಅರಬ್ಬಿ ಸಮುದ್ರಕ್ಕೆ ಬಂದ ಗಜ: ರಾಜ್ಯದ ಹಲವು ಕಡೆ ಅಲ್ಲಲ್ಲಿ ಮಳೆ

Pinterest LinkedIn Tumblr
This satellite

ಬೆಂಗಳೂರು : ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿದ್ದ ‘ಗಜ’ ಚಂಡಮಾರುತ ಅರಬ್ಬಿ ಸಮುದ್ರದ ಆಗ್ನೇಯ ಭಾಗಕ್ಕೆ ಹೋಗಿದ್ದು, ಅಲ್ಲಿ ಒತ್ತಡದ ವಾತಾವರಣ ನಿರ್ಮಾಣವಾಗಿದೆ.

ಇದರಿಂದಾಗಿ ರಾಜ್ಯದ ಉತ್ತರ ಒಳನಾಡು ಸೇರಿದಂತೆ ಪಶ್ಚಿಮ ಭಾಗದಲ್ಲಿ ಗಾಳಿಮಳೆಯಾಗಲಿದೆ. ಚಂಡಮಾರುತದಿಂದಾಗಿ ಇನ್ನೂ ಎರಡು ದಿನ ಮಳೆಯಾಗಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಸೂಚನೆ ನೀಡಿದೆ.

ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ದಾವಣಗೆರೆ, ಚಿತ್ರದುರ್ಗ, ಮಂಡ್ಯ, ರಾಮನಗರ, ಚಾಮರಾಜನಗರ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ರಾಯಚೂರು, ಯಾದಗಿರಿ, ಬೆಳಗಾವಿ, ಬಾಗಲಕೋಟ, ವಿಜಯಪುರ, ಧಾರವಾಡ, ಹಾವೇರಿ ಮತ್ತು ಉತ್ತರ ಕನ್ನಡದ ಜನ ಎಚ್ಚರ ವಹಿಸಬೇಕೆಂದು ಸೂಚಿಸಲಾಗಿದೆ.

ವಾಯುಭಾರ ಕುಸಿತ
ಈ ನಡುವೆ ಬಂಗಾಳಕೊಲ್ಲಿ ಹಾಗೂ ಹಿಂದೂ ಮಹಾಸಾಗರ ಒಂದಾಗುವ ಜಾಗದಲ್ಲಿ ವಾಯುಭಾರ ಕುಸಿತ ಕಂಡುಬಂದಿದೆ. ಇದರಿಂದಾಗಿ ನ.20ರಿಂದ 22ರವರೆಗೆ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ ಜಿಲ್ಲೆಗಳಲ್ಲಿ ಮೂರು ದಿನ ಚದುರಿದಂತೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮಳೆ ಪ್ರಮಾಣ

ತುಮಕೂರಿನ ನೇರಳೆಗುಡ್ಡದಲ್ಲಿ 32 ಮಿ.ಮೀ., ಕಲಬುರಗಿಯ ಗಡಿಲಿಂಗನಹಳ್ಳಿಯಲ್ಲಿ 26 ಮಿ.ಮೀ., ಚಿತ್ರದುರ್ಗದಲ್ಲಿ 21 ಮಿ.ಮೀ. ಮಳೆಯಾಗಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ, ಕೋಲಾರ, ಬಾಗಲಕೋಟ, ಉಡುಪಿಯಲ್ಲಿ ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ.

ಹುಬ್ಬಳ್ಳಿಯಲ್ಲಿ ಮಳೆ

ಹುಬ್ಬಳ್ಳಿಯಲ್ಲಿ ಭಾನುವಾರ ಸಂಜೆ ಗುಡುಗು, ಸಿಡಿಲು ಸಮೇತ ಸುಮಾರು ಅರ್ಧ ಗಂಟೆ ಬಿರುಸಿನ ಮಳೆ ಸುರಿದಿದೆ. ತಗ್ಗು ಪ್ರದೇಶದಲ್ಲಿನ ರಸ್ತೆಗಳು ಜಲಾವೃತಗೊಂಡು ವಾಹನ ಸಂಚಾರಕ್ಕೆ ಅಡ್ಡಿಯುಂಟಾಯಿತು. ಧಾರವಾಡದಲ್ಲಿ ತುಂತುರು ಮಳೆಯಾಗಿದೆ.

ದಾವಣಗೆರೆ, ಕುಂದಾಪುರ, ಶಿವಮೊಗ್ಗ , ಚಿಕ್ಕಮಗಳೂರು ಮತ್ತಿತರ ಕಡೆಗಳಲ್ಲೂ ಮಳೆ ಬಿದ್ದಿದೆ. ಬೆಳೆ ಕಟಾವು ಹಂತದಲ್ಲಿದ್ದ ಜಮೀನಿಗೆ ನೀರು ನುಗ್ಗಿದ್ದರಿಂದ ರೈತರು ಆತಂಕಗೊಂಡಿದ್ದಾರೆ.

Comments are closed.