ಕರ್ನಾಟಕ

ಜನಾರ್ದನ ರೆಡ್ಡಿy ಆಂಬಿಡೆಂಟ್​ ಪ್ರಕರಣ ಮುಚ್ಚಿಹಾಕಲು ಬಂದ ಸುಂದರ ಯುವತಿ

Pinterest LinkedIn Tumblr


ಬೆಂಗಳೂರು: ಜನಾರ್ದನ ರೆಡ್ಡಿ ಬಂಧನದಿಂದ ಮುಚ್ಚಿಹೋದ ಹಳೆಯ ಪ್ರಕರಣವೊಂದು ಮತ್ತೆ ಭಾರೀ ಸದ್ದು ಮಾಡತೊಡಗಿದೆ. ಒಂದೆಡೆ ಜನಾರ್ದನ ರೆಡ್ಡಿಯನ್ನು ಬಂಧಿಸುವ ಮೂಲಕ, ಪೊಲೀಸ್​ ಇಲಾಖೆ ರೆಡ್ಡಿ ಪಾಳಯಕ್ಕೆ ಗಟ್ಟಿ ಸಂದೇಶ ರವಾನೆ ಮಾಡಲು ಮುಂದಾಗಿದ್ದರು.

ಆದರೆ ಪ್ರಕರಣದಲ್ಲಿ ರೆಡ್ಡಿ ಪಾತ್ರವೇನು ಎಂಬುದನ್ನು ಕೋರ್ಟ್​ಗೆ ಮನವರಿಕೆ ಮಾಡಿಕೊಡಲಾಗದೇ ಕೈಸುಟ್ಟುಕೊಂಡಿದೆ. ಇನ್ನೊಂದೆಡೆ ಒಂದೂವರೆ ವರ್ಷದ ಹಿಂದೆ ಪ್ರಕರಣ ಮುಚ್ಚಿಹಾಕಲು ನಡೆಸಿದ್ದ ಭ್ರಷ್ಟಾಚಾರದ ಜಾಲ ಎಳೆಎಳೆಯಾಗಿ ಬಿಚ್ಚಿಕೊಳ್ಳುತ್ತಿದೆ. ಇವೆಲ್ಲದರ ನಡುವೆ ಐಪಿಎಸ್​ ಅಧಿಕಾರಿ ಮತ್ತು ಹುಡುಗಿಯೊಬ್ಬಳ ಹೆಸರು ಕೂಡ ಕೇಳಿ ಬಂದಿದೆ. ನಿಜಕ್ಕೂ ಆಂಬಿಡೆಂಟ್​ ಪ್ರಕರಣದಲ್ಲಿ ಆಗಿದ್ದೇನು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ಬೆಂಗಳೂರು ಕಂಡ ಅದೆಷ್ಟೋ ಬಹುಕೋಟಿ ವಂಚನೆಗಳಲ್ಲಿ ಈ ಆಂಬಿಡೆಂಟ್​ ಚಿಟ್​ಫಂಡ್​ ಪ್ರಕರಣ ಕೂಡ ಒಂದು. ಎಲ್ಲಾ ವಂಚನೆ ಪ್ರಕರಣಗಳಲ್ಲಿ ನಡೆಯುವಂಥದ್ದೇ ಮಾಡಸ್​ ಆಪರೆಂಡಿ ಈ ಪ್ರಕರಣದಲ್ಲೂ ನಡೆದಿತ್ತು. ಈ ಹಿಂದೆಯೇ ಬೆಳಕಿಗೆ ಬರಬೇಕಿದ್ದ ಪ್ರಕರಣ ಬೂದಿ ಮುಚ್ಚಿದ ಕೆಂಡದಂತೆ ಸಮಯಕ್ಕಾಗಿ ಕಾದು ಕುಳಿತಿತ್ತು.

ಆಂಬಿಡೆಂಟ್​ ಸಂಸ್ಥೆಯ ಮಾಲೀಕರಾದ ಸೈಯದ್​ ಅಹ್ಮದ್​ ಫರೀದ್​ ಮತ್ತು ಸೈಯದ್​ ಅಫಾಕ್​ ಅಪ್ಪ-ಮಗನ ಜೋಡಿ ನಡೆಸುತ್ತಿರುವ ವ್ಯವಹಾರದ ಮೇಲೆ ಜಾರಿ ನಿರ್ದೇಶನಾಲಯದ ಕಣ್ಣು ಬಿದ್ದಿತ್ತು. ಅಂತಾರಾಷ್ಟ್ರೀಯ ವ್ಯವಹಾರಗಳಿಗೆ ಆರ್ಥಿಕ ನೀತಿಯ ಅನ್ವಯ ಇರುವ ನಡಾವಳಿಗಳನ್ನು ಗಾಳಿಗೆ ತೂರಿ ಅಪ್ಪ – ಮಗನ ಜೋಡಿ ವ್ಯವಹಾರ ಮಾಡಿದೆ ಎಂದು ಹಣಕಾಸು ಗುಪ್ತಚರ ಘಟಕ (ಎಫ್​ಐಯು) ನೀಡಿದ ಮಾಹಿತಿ ಬೆನ್ನತ್ತಿದ ಜಾರಿ ನಿರ್ದೇಶನಾಲಯ ದಾಳಿ ನಡೆಸಿತ್ತು.

ದಾಳಿಯಾದ ನಂತರ ಅಪ್ಪ – ಮಗ ತಮ್ಮ ತಪ್ಪನ್ನು ಒಪ್ಪಿಕೊಂಡು 2 ಕೋಟಿ ರೂ. ದಂಡವನ್ನು ಪಾವತಿಸಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದರು. ಅತ್ತ ಜಾರಿ ನಿರ್ದೇಶನಾಲಯದ ಮುಂದೆ ಮಂಡಿಯೂರಿ ಬಚಾವಾದರೂ ಇತ್ತ ಹಣ ತೊಡಗಿಸಿದವರಿಗೆ ವಂಚಿಸಿ ಬೆಂಗಳೂರು ನಗರದ ಕೆ.ಜಿ. ಹಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾದವು. ಪ್ರಕರಣವೇನೋ ದಾಖಲಾಯಿತು ಆದರೆ ತನಿಖೆ ಮಾತ್ರ ಮುಂದುವರೆಯಲಿಲ್ಲ.

ಪ್ರಕರಣ ಮುಚ್ಚಲು ಬಂದ ಯುವತಿ?:

ಆಂಬಿಡೆಂಟ್​ ಸಂಸ್ಥೆಯ ಮೇಲಿದ್ದ ಪ್ರಕರಣಗಳನ್ನು ಮುಚ್ಚಿಹಾಕಲು ಆರೋಪಿಗಳಾದ ಅಫಾಕ್​ ಮತ್ತು ಫರೀದ್​ ಒಬ್ಬ ಪ್ರಭಾವಿ ಯುವತಿಯ ಸಹಾಯ ಪಡೆದರು ಎನ್ನಲಾಗಿದೆ. ಮೂಲಗಳ ಪ್ರಕಾರ ಆ ಯುವತಿಗೆ ರಾಜ್ಯದ ಹಿರಿಯ ಐಪಿಎಸ್​ ಅಧಿಕಾರಿಗಳು, ಮಾಧ್ಯಮ ಸಂಸ್ಥೆ ಮಾಲೀಕರು, ಮುಖ್ಯಸ್ಥರು ಮತ್ತಿತರ ಪ್ರತಿಷ್ಠಿತರ ಜತೆ ಸಂಪರ್ಕವಿತ್ತು. ತಮಗಿರುವ ಪ್ರಭಾವವನ್ನು ಬಳಸಿದ ಯುವತಿ ಮಾಧ್ಯಮ ಸಂಸ್ಥೆಯ ಮುಖ್ಯಸ್ಥರೊಬ್ಬರಿಗೆ ಮತ್ತು ಐಪಿಎಸ್​ ಅಧಿಕಾರಿಯೊಬ್ಬರಿಗೆ ಹಣ ಸಂದಾಯ ಮಾಡಿ ಪ್ರಕರಣ ದೊಡ್ಡದಾಗದಂತೆ ನೋಡಿಕೊಂಡಿದ್ದಾರೆ ಎನ್ನಲಾಗಿದೆ.

ಈ ಸಂದರ್ಭದಲ್ಲಿ ಬೆಂಗಳೂರಿನಲ್ಲಿದ್ದ ಕೆಲ ಐಪಿಎಸ್​ ಅಧಿಕಾರಿಗಳ ಮೇಲೀಗ ಸಂಶಯ ಮನೆ ಮಾಡಿದೆ. ಮೂಲಗಳ ಪ್ರಕಾರ ಸಿಸಿಬಿ ಈ ವಿಚಾರವನ್ನು ಈಗಾಗಲೇ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿಯವರ ಗಮನಕ್ಕೆ ತಂದಿದ್ದು, ಐಪಿಎಸ್​ ಅಧಿಕಾರಿಯ ತಲೆದಂಡ ಸನ್ನಿಹಿತವಾಗಿದೆ ಎಂದೂ ಮೂಲಗಳು ತಿಳಿಸಿವೆ.

ದೇವೇಗೌಡರಿಂದ ಪ್ರಕರಣಕ್ಕೆ ಚುರುಕು:

ಪ್ರಕರಣಕ್ಕೆ ಚುರುಕು ಮುಟ್ಟಿಸಿದ್ದು ಬೇರಾರೂ ಅಲ್ಲ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡರು ಎನ್ನಲಾಗುತ್ತಿದೆ. ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿ ವಂಚನೆಗೊಳಗಾಗಿದ್ದ ಸಂತ್ರಸ್ತರು ಪೊಲೀಸ್​ ಠಾಣೆಗೆ ಅಲೆದು ಸುಸ್ತಾಗಿದ್ದರು. ನಂತರ ಜೆಡಿಎಸ್​ ಕಚೇರಿಗೆ ಭೇಟಿ ನೀಡಿ ತಮ್ಮ ಕಷ್ಟಗಳನ್ನು ಹೇಳಿಕೊಂಡಿದ್ದರು. ಈ ವಿಚಾರದ ಬಗ್ಗೆ ದೇವೇಗೌಡರಿಗೆ ಅರಿವಾಗುತ್ತಲೇ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸುವಂತೆ ಸಿಎಂಗೆ ಹೇಳಿದರು. ಅದಾದ ನಂತರ ಪ್ರಕರಣದ ಒಂದೊಂದೇ ಪದರಗಳು ಅನಾವರಣವಾಗುತ್ತಿದೆ ಎನ್ನಲಾಗಿದೆ.

ಸಿಸಿಬಿ ಪ್ರಕರಣದ ತನಿಖೆಗಿಳಿದ ನಂತರ ಇಡೀ ಪ್ರಕರಣದ ಅಂಕು ಡೊಂಕುಗಳೆಲ್ಲ ಆಚೆ ಬಂದಿದೆ. ಮತ್ತು ಪ್ರಕರಣ ತನಿಖೆಯಾಗದಂತೆ ನೋಡಿಕೊಳ್ಳಲು ಸುಮಾರು 40 ಕೋಟಿ ರೂ. ಗಳಷ್ಟು ಹಣವನ್ನು ಫರೀದ್​, ಅಫಾಕ್​ ಯುವತಿಯ ಮೂಲಕ ಮಾಧ್ಯಮ ಸಂಸ್ಥೆ ಮುಖ್ಯಸ್ಥ ಮತ್ತು ಐಪಿಎಸ್​ ಅಧಿಕಾರಿಯೊಬ್ಬರಿಗೆ ನೀಡಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಪೊಲೀಸರಿಗೇ ಉಲ್ಟಾ ಆಯ್ತಾ ರೆಡ್ಡಿ ಬಂಧನ:

ಆಂಬಿಡೆಂಟ್​ ಸಂಸ್ಥೆ ವಂಚನೆ ಪ್ರಕರಣದ ಬೆನ್ನುಬಿದ್ದ ಪೊಲೀಸರಿಗೆ ಜನಾರ್ದನ ರೆಡ್ಡಿ ಹೆಸರು ಆರೋಪಿಗಳ ಜತೆ ಥಳುಕುಹಾಕಿಕೊಂಡಿದ್ದು ಕಂಡಿತ್ತು. ವಿಚಾರಣೆ ನಡೆಸಿದಾಗ ಜಾರಿ ನಿರ್ದೇಶನಾಲಯದ ಪ್ರಕರಣವನ್ನು ಮುಚ್ಚಿಹಾಕಲು ಜನಾರ್ದನ ರೆಡ್ಡಿಗೆ ಹಣ ನೀಡಿದ್ದೆ ಎಂದು ಆರೋಪಿ ಹೇಳಿದ್ದ. ಈ ಜಾಡನ್ನು ಬೆನ್ನತ್ತಿದ ಸಿಸಿಬಿ, ಜನಾರ್ದನ ರೆಡ್ಡಿಗೆ ನೊಟೀಸ್​ ಜಾರಿ ಮಾಡಿತ್ತು.

ನಂತರ ಸುದೀರ್ಘ ವಿಚಾರಣೆಯ ನಂತರ ಜನಾರ್ದನ ರೆಡ್ಡಿಯನ್ನು ಬಂಧಿಸಿ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಆದರೆ ಜೈಲು ಸೇರಿ ನಾಲ್ಕೇ ದಿನಗಳಲ್ಲಿ ಜನಾರ್ದನ ರೆಡ್ಡಿ ಜಾಮೀನು ಪಡೆದು ಆಚೆ ಬಂದಿದ್ದಾರೆ. ಇಷ್ಟು ದಿನ ಬಿಜೆಪಿಯಿಂದ ಅನಿವಾರ್ಯವಾಗಿ ಅಂತರ ಕಾದುಕೊಂಡಿದ್ದ ರೆಡ್ಡಿ ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಜನಾರ್ದನ ರೆಡ್ಡಿಯವರ ಮೇಲೆ ಸಿಸಿಬಿ ಹೊರಿಸಿದ್ದ ಆರೋಪವನ್ನು ಕೋರ್ಟ್​ನಲ್ಲಿ ಸಮರ್ಥಿಸಿಕೊಳ್ಳಲು ಸಾಧ್ಯವಾಗಿಲ್ಲ.

ಅಷ್ಟಕ್ಕೂ ಜನಾರ್ದನ ರೆಡ್ಡಿಯವರಿಗೂ ಫರೀದ್​ ಮತ್ತು ಅಫಾಕ್​ ಜನರಿಗೆ ವಂಚನೆ ಮಾಡಿದ್ದಕ್ಕೂ ಸಂಬಂಧವೇನು ಎಂಬುದನ್ನು ಸಾಭೀತು ಮಾಡುವುದು ಅಸಾಧ್ಯ ಎಂದೂ ಹೇಳಲಾಗುತ್ತಿದೆ. ಯಾಕೆಂದರೆ ಜನಾರ್ದನ ರೆಡ್ಡಿ ತಮಗೆ ವಂಚನೆ ಮಾಡಿದ್ದಾರೆ ಎಂಬುದಾಗಿ ಫರೀದ್​ ಅಥವಾ ಅಫಾಕ್​ ಎಲ್ಲೂ ದೂರು ನೀಡಿಲ್ಲ. ಹೀಗಿರುವಾಗ ರೆಡ್ಡಿಯನ್ನು ಈ ಪ್ರಕರಣದಲ್ಲಿ ಬಂಧಿಸಿದ್ದು ರಾಜಕೀಯ ಪ್ರೇರಿತ ಎಂದು ಆರೋಪಿಸಲಾಗುತ್ತಿದೆ.

ಪ್ರಕರಣದಲ್ಲಿ ಹೆಸರು ಕೇಳಿ ಬಂದಾಗ ಜನಾರ್ದನ ರೆಡ್ಡಿ ಕೊಂಚ ವಿಚಲಿತರಾದಂತೆ ಕಾಣುತ್ತಿದ್ದರು. ಆದರೆ ಬುಧವಾರ ಬಿಡುಗಡೆಯಾಗುತ್ತಿದ್ದಂತೆ ಮುಂಚೆಗಿಂತಲೂ ಹೆಚ್ಚು ತಮ್ಮ ಮೇಲೆ ವಿಶ್ವಾಸ ಹೊಂದಿದಂತೆ ಕಾಣುತ್ತಿದ್ದರು. ಆಚೆ ಬರುತ್ತಿದ್ದಂತೆಯೇ ಮಾಧ್ಯಮದ ಜತೆ ಮಾತನಾಡಿದ ರೆಡ್ಡಿ, ಮುಖ್ಯಮಂತ್ರಿ ಕುಮಾರಸ್ವಾಮಿ ಮೇಲೆ ಆರೋಪಗಳನ್ನು ಮಾಡಿದರು.

ತಮ್ಮನ್ನು ಬಂಧಿಸಲು ಕುಮಾರಸ್ವಾಮಿಯವರೇ ಪಿತೂರಿ ಮಾಡಿ ಸಿಸಿಬಿ ಮೂಲಕ ಬಂಧಿಸಿದ್ದಾರೆ ಎಂದು ದೂರಿದ ಜನಾರ್ದನ ರೆಡ್ಡಿ, ನಂತರ ಇಡೀ ಷಡ್ಯಂತ್ರದ ಬಗ್ಗೆ ತಮಗೆ ಅರಿವಿದೆ ಎಂದು ಗುಡುಗಿದರು. ಸಕ್ರಿಯ ರಾಜಕಾರಣದಿಂದ ದೂರ ಉಳಿದು, ಹವ್ಯಾಸಿ ರಾಜಕಾರಣಿಯಂತೆ ಅಲ್ಲೊಂದು ಇಲ್ಲೊಂದು ಹೇಳಿಕೆ ನೀಡುತ್ತಾ ಸುಮ್ಮನಿದ್ದ ರೆಡ್ಡಿಯನ್ನು ಪೊಲೀಸರೇ ಕೆಣಕಿದಂತಾಗಿದೆ. ಅದಕ್ಕಿಂತ ಮಿಗಿಲಾಗಿ ಪೊಲೀಸರು ಮಾಡಿರುವ ಆರೋಪವನ್ನು ಸಾಭೀತುಪಡಿಸಲು ಸಾಧ್ಯವಾಗುತ್ತಿಲ್ಲ.

ಬಿಡುಗಡೆಯಾದ ನಂತರ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಂದೆ ಮಾಧ್ಯಮದ ಜತೆ ಮಾತನಾಡಿದ “ಈ ರಾಜ್ಯದ ಕೆಲ ಕ್ರೂರ ವ್ಯಾಘ್ರಗಳು ಪುಣ್ಯಕೋಟಿಯಂತಹ ನನ್ನ ಮಾಂಸ, ಖಂಡ, ರಕ್ತವನ್ನು ಹೀರಲು ಮುಂದಾಗಿವೆ. ಈ ರಾಕ್ಷಸ ರಾಜ್ಯದಲ್ಲಿ ನಾನು ಪುಣ್ಯಕೋಟಿಯಂತೆ ಹುಲಿಯ ಮುಂದೆ ಹೋಗಿ ನಿಲ್ಲಲು ರೆಡಿಯಿದ್ದೇನೆ. ಜನರ ಆಶೀರ್ವಾದವಿದ್ದರೆ ಯಾರೂ ನನ್ನನ್ನು ಮುಟ್ಟಲು ಸಾಧ್ಯವಿಲ್ಲ,” ಎಂದರು.

ಒಂದರ್ಥದಲ್ಲಿ ಮತ್ತೆ ರಾಜಕೀಯಕ್ಕೆ ವಾಪಸ್ಸಾಗಲು ಜನಾರ್ದನ ರೆಡ್ಡಿಗೆ ಸಿಸಿಬಿಯೇ ದಾರಿ ಮಾಡಿ ಕೊಟ್ಟಂತಿದೆ. ಮತ್ತೆ ಬಿಜೆಪಿ ಪಾಳಯದಲ್ಲಿ ಅಧಿಕೃತವಾಗಿ ಕಾಲೂರಲು ಈ ಘಟನೆ ಜನಾರ್ದನ ರೆಡ್ಡಿಗೆ ಸಹಕಾರಿಯಾಗಲಿದೆಯಾ ಎಂಬುದೂ ಪ್ರಶ್ನೆಯಾಗಿದೆ.

ಒಟ್ಟಿನಲ್ಲಿ ವಂಚನೆ, ಭ್ರಷ್ಟಾಚಾರ, ರಾಜಕೀಯ, ಅಧಿಕಾರ ದುರುಪಯೋಗಗಳಾಚೆಗೆ ಪ್ರಕರಣ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಪ್ರಕರಣದ ತನಿಖೆ ಮುಂದೆ ಹೋದಂತೆಲ್ಲಾ ಒಂದೊಂದೇ ಮಜಲುಗಳು ಕರಾಳ ಸತ್ಯಗಳ ಕಥೆ ಹೇಳತೊಡಗಿವೆ. ಪ್ರಕರಣದ ಅಂತ್ಯದಲ್ಲಿ ಐಪಿಎಸ್​ ಅಧಿಕಾರಿ, ಮಾಧ್ಯಮ ಮುಖ್ಯಸ್ಥ, ಸುಂದರ ಯುವತಿ ಮತ್ತು ವಂಚನೆಯ ಆರೋಪಿಗಳ ತಲೆದಂಡವಾಗಲಿದೆಯಾ ಎಂಬ ಪ್ರಶ್ನೆಗೆ ತನಿಖೆಯೇ ಉತ್ತರ ಹೇಳಬೇಕಿದೆ.

Comments are closed.