ಕರ್ನಾಟಕ

ದೇಶದ ರಾಜಕೀಯದ ಮೇಲೆ ರಾಜ್ಯ ಉಪಚುನಾವಣೆ ಫಲಿತಾಂಶದ ಪರಿಣಾಮವೇನು?

Pinterest LinkedIn Tumblr


ಬೆಂಗಳೂರು: ಮೂರು ಲೋಕಸಭೆ ಒಳಗೊಂಡಂತೆ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಕಳೆದ ಶನಿವಾರ (ನ.3) ನಡೆದ ಉಪಚುನಾವಣೆಯ ಫಲಿತಾಂಶ ಇಂದು ಬಹಿರಂಗವಾಗಲಿದೆ. ಇನ್ನು ಕೆಲವೇ ತಿಂಗಳುಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಈ ವೇಳೆ ಉಪಚುನಾವಣೆಯ ಅಗತ್ಯವಾದರೂ ಏನಿತ್ತು ಎಂಬ ಪ್ರಶ್ನೆಯ ನಡುವೆಯೂ ಇಂದು ಹೊರಹೊಮ್ಮುವ ಫಲಿತಾಂಶ ರಾಷ್ಟ್ರ ರಾಜಕೀಯದ ಮೇಲೆ ಗಂಭೀರ ಪರಿಣಾಮ ಎಂಬುದನ್ನು ಯಾರೂ ತಳ್ಳಿ ಹಾಕುವಂತಿಲ್ಲ.

ಕಳೆದ ಮೇ​ನಲ್ಲಿ ನಡೆದಿದ್ದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮತದಾರ ಪ್ರಭು ಯಾವ ಪಕ್ಷಕ್ಕೂ ಬಹುಮತ ಕರುಣಿಸಲಿಲ್ಲ. ಬಿಜೆಪಿ ಹೆಚ್ಚು ಸ್ಥಾನಗಳನ್ನು ಪಡೆದಿದ್ದರೂ ಬಹುಮತಕ್ಕೆ ಅಗತ್ಯವಾದ ಮ್ಯಾಜಿಕ್​ ಸಂಖ್ಯೆ ಸಿಗದೆ, ಸ್ವಲ್ಪದರಲ್ಲಿಯೇ ಸರ್ಕಾರ ರಚಿಸುವ ಅವಕಾಶದಿಂದ ವಂಚಿತವಾಗಿತ್ತು. ಚುನಾವಣಾಪೂರ್ವ ಆಡಳಿತಾರೂಢ ಪಕ್ಷ ಕಾಂಗ್ರೆಸ್​, ಎರಡನೇ ಸ್ಥಾನಕ್ಕೆ ಕುಸಿದು, ಮೂರನೇ ಸ್ಥಾನದಲ್ಲಿದ್ದ ಜೆಡಿಎಸ್​ಗೆ ಬೆಂಬಲ ಘೋಷಿಸಿ, ಮೈತ್ರಿ ಸರ್ಕಾರ ರಚನೆಗೆ ಅನುವು ಮಾಡಿಕೊಡುವ ಮೂಲಕ ‘ಕಾಂಗ್ರೆಸ್​ಮುಕ್ತ ಭಾರತ’ ಕನಸು ಕಾಣುತ್ತಿರುವ ಬಿಜೆಪಿಗೆ ಕಡಿವಾಣ ಹಾಕಿತ್ತು.

ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿ ಜೆಡಿಎಸ್​ನ ಎಚ್​.ಡಿ.ಕುಮಾರಸ್ವಾಮಿ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ದೇಶದ ಎಲ್ಲ ಪ್ರಮುಖ ಪ್ರಾದೇಶಿಕ ಪಕ್ಷಗಳ ಮುಖಂಡರು ಭಾಗಿಯಾಗುವ ಮೂಲಕ ಮೋದಿ, ಅಮಿತ್​ ಶಾ ಹಾಗೂ ಬಿಜೆಪಿಗೆ ಸ್ಪಷ್ಟ ಸಂದೇಶ ತಲುಪಿಸಿದ್ದರು. ‘ಮಹಾಘಟ್​ಬಂಧನ್’ ಸಹಾಯದಿಂದ ಬಿಜೆಪಿ ವಿಜಯದುಂದುಬಿ ಯಾತ್ರೆಗೆ ಬ್ರೇಕ್​ ಹಾಕಲು ಕರ್ನಾಟಕದಲ್ಲಿ ವೇದಿಕೆ ನಿರ್ಮಾಣವಾಗಿತ್ತು. ಆದರೆ, ಆನಂತರ ಮಹಾಘಟ್​ಬಂಧನ್​ ಬಂಧಕ್ಕೆ ಹಲವು ಅಡೆತಡೆಗಳು ಎದುರಾದವು.

ಕಾಂಗ್ರೆಸ್​ ನೇತೃತ್ವದ ಮಹಾಮೈತ್ರಿಯಲ್ಲಿ ಒಂದಾಗಿದ್ದ ಬಿಎಸ್​ಪಿ 2019ರ ಲೋಕಸಭೆ ಚುನಾವಣೆಗೂ ಮುನ್ನವೇ ಕಾಂಗ್ರೆಸ್​ಗೆ ಬಲವಾದ ಪೆಟ್ಟು ನೀಡಿತ್ತು. ಮಧ್ಯಪ್ರದೇಶ ಮತ್ತು ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್​ಪಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಪಕ್ಷದ ಮುಖ್ಯಸ್ಥೆ ಮಾಯಾವತಿ ಘೋಷಣೆ ಮಾಡಿದ್ದರು. ಅವರು ಹೀಗೆ ಘೋಷಣೆ ಮಾಡಿದ ದಿನದ ಅಂತರದಲ್ಲಿಯೇ ರಾಜ್ಯದಲ್ಲಿ ಬಿಎಸ್​ಪಿಯಿಂದ ಗೆದ್ದು, ಮೈತ್ರಿ ಸರ್ಕಾರಕ್ಕೆ ಬೆಂಬಲ ಘೋಷಿಸಿದ್ದ ಏಕೈಕ ಅಭ್ಯರ್ಥಿ ಎನ್​.ಮಹೇಶ್​ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಮಹಾಮೈತ್ರಿಯಿಂದ ಬಿಎಸ್​ಪಿ ಹೊರಹೋಗುವ ಘೋಷಣೆ ಹೊರಬೀಳುತ್ತಿದ್ದಂತೆ ಉತ್ತರಪ್ರದೇಶದ ಸಮಾಜವಾದಿ ಪಕ್ಷ ಕೂಡ ಕಾಂಗ್ರೆಸ್​ ಮೈತ್ರಿಗೆ ವಿದಾಯ ಹೇಳಿತ್ತು. “ಮಧ್ಯಪ್ರದೇಶ ಮತ್ತು ಛತ್ತೀಸ್​ಘಡ ವಿಧಾನಸಭಾ ಚುನಾವಣೆಯಲ್ಲಿ ಜಿಜಿಪಿ ಮತ್ತು ಬಿಎಸ್​ಪಿ ಪಕ್ಷದ ಮೈತ್ರಿಯೊಂದಿಗೆ ಸ್ಪರ್ಧಿಸಲಿದ್ದೇವೆ. ಕಾಂಗ್ರೆಸ್ ನಮ್ಮನ್ನು ದೀರ್ಘ ಕಾಲ ಕಾಯುವಂತೆ ಮಾಡಿದೆ. ಯಾರಿಗಾಗಿಯೂ ಕಾಯಲು ನಾವು ಸಿದ್ಧರಿಲ್ಲ. ಈಗಾಗಲೇ ಛತ್ತೀಸ್​ಘಡದ ಜಿಜಿಪಿ ಪಕ್ಷದೊಂದಿಗೆ ಮಾತುಕತೆ ನಡೆದಿದೆ. ಮುಂದಿನ ಲೋಕಸಭೆ ಚುನಾವಣೆಗೂ ಇದು ಮುಂದುವರೆಯಲಿದೆ,” ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್​ ಯಾದವ್​ ಹೇಳಿಕೆ ನೀಡಿದ್ದರು.

ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸಿ, ಬಿಜೆಪಿಗೆ ಕಡಿವಾಣ ಹಾಕುವ ಕನಸು ಕಂಡಿದ್ದ ಕಾಂಗ್ರೆಸ್​ ಆಸೆ ಹಂತ ಹಂತವಾಗಿ ಛಿದ್ರವಾಗುತ್ತ ಬರಲಾರಂಭಿಸಿತು. ಆದರೆ, ಕರ್ನಾಟಕದಲ್ಲಿನ ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಈ ಆಸೆಯನ್ನು ಇನ್ನು ಜೀವಂತವಾಗಿರಿಸಿದೆ. ಈ ಉಪಚುನಾವಣೆಯಲ್ಲೂ ಕಾಂಗ್ರೆಸ್​ ಮತ್ತು ಜೆಡಿಎಸ್​ ಒಗ್ಗಟ್ಟಾಗಿ ಒಮ್ಮತದ ಅಭ್ಯರ್ಥಿಯನ್ನು ಬಿಜೆಪಿ ವಿರುದ್ಧ ನಿಲ್ಲಿಸಿದೆ. ಒಂದು ವೇಳೆ ಐದು ಕ್ಷೇತ್ರಗಳಲ್ಲೂ ಮೈತ್ರಿ ಅಭ್ಯರ್ಥಿ ಗೆದ್ದರೆ, ಮತ್ತೆ ಮಹಾಘಟ್​ಬಂಧನ್​ಗೆ ಜೀವ ಬರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ನಿರೀಕ್ಷೆಯಂತೆ ರಾಮನಗರ, ಮಂಡ್ಯ ಹಾಗೂ ಜಮಖಂಡಿಯಲ್ಲಿ ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಅಭ್ಯರ್ಥಿ ಗೆಲುವು ನಿರಾಯಾಸ. ಆದರೆ, ಬಿಜೆಪಿ ಪ್ರಾಬಲ್ಯವಿರುವ ಶಿವಮೊಗ್ಗ ಮತ್ತು ಬಳ್ಳಾರಿಯಲ್ಲಿ ಮೈತ್ರಿ ಅಭ್ಯರ್ಥಿ ಗೆಲುವು ಸಾಧಿಸಿದ್ದೇ ಆದರೆ, ಬಿಜೆಪಿ ಮಣಿಸುವ ಮಂತ್ರ ದಂಡ ಮೈತ್ರಿಯೇ ಎಂಬುದು ಸಾಬೀತಾಗಲಿದೆ. ಇದೇ ಕಾರಣದಿಂದ ಇಂದು ಪ್ರಕಟಗೊಳ್ಳುವ ಫಲಿತಾಂಶ 2019ರ ಲೋಕಸಭೆ ಚುನಾವಣೆಯ ದಿಕ್ಸೂಚಿ ಎಂದು ಬಣ್ಣಿಸಲಾಗುತ್ತಿದೆ. ಇಂದಿನ ಈ ಫಲಿತಾಂಶವನ್ನು ಇಡೀ ದೇಶವೇ ಕುತೂಹಲದಿಂದ ಎದುರು ನೋಡುತ್ತಿದೆ.

Comments are closed.