
ಬೆಂಗಳೂರು: ಉತ್ತರ ಭಾರತದಲ್ಲಿ ವಿಜಯ ಪತಾಕೆ ಹಾರಿಸಿಕೊಂಡು ಬರುತ್ತಿರುವ ಬಿಜೆಪಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ಭಾರತವನ್ನು ಟಾರ್ಗೆಟ್ ಮಾಡಿಕೊಂಡಿದ್ದು, ಅದರಲ್ಲೂ ಕರ್ನಾಟಕದ ಮೇಲೆ ಹೆಚ್ಚಿನ ಕಣ್ಣಿಟ್ಟಿದೆ.
ಕರ್ನಾಟಕ ಮೇಲೆ ಕಣ್ಣಿಟ್ಟಿರುವ ಅಮಿತ್ ಶಾ, 2019 ರ ಚುನಾವಣೆಗೆ ಈಗಾಗಲೇ ತಯಾರಿ ಆರಂಭಿಸಿದ್ದಾರೆ. ರಾಜ್ಯದಲ್ಲಿ ಟಾರ್ಗೆಟ್ 20 + ಗೆ ಈಗಿನಿಂದಲೇ ಪ್ಲಾನ್ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಟಿಪ್ಪು ಜಯಂತಿ ಅಸ್ತ್ರ, ಲಿಂಗಾಯತ ಧರ್ಮ ಒಡೆದ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ.
ದೇಶಾದ್ಯಂತ 2019 ಎಲೆಕ್ಷನ್ಗೆ ಅಲರ್ಟ್ ಆಗಿರುವ ಬಿಜೆಪಿ, ಮತದಾರರ ನಾಡಿಮಿಡಿತ ಅರ್ಥೈಸಿಕೊಳ್ಳಲು ಮುಂದಾಗಿದೆ. ಇದಕ್ಕಾಗಿಯೇ ಒಂದು ತಂಡವನ್ನು ರಚಿಸಲಾಗಿದ್ದು, ಈ ತಂಡ ರಾಜ್ಯದ ಜನರ ನಾಡಿ, ಮಿಡಿತ ಅರಿತು, ಅದಕ್ಕೆ ತಕ್ಕಂತೆ ಯೋಜನೆಗಳನ್ನು ರೂಪಿಸಲು ನೆರವಾಗಲಿದೆ. ಇನ್ನೊಂದು ವಿಷಯ ಎಂದೆರೆ, ಈ ತಂಡದೊಂದಿಗೆ ರಾಜ್ಯದ ನಾಯಕರ ಸಂಪರ್ಕವೇ ಇರುವುದಿಲ್ಲ ಎಂಬ ಮಾಹಿತಿ ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿದೆ.
ಟೀಂನ ಕೆಲಸವೇನು?
ಹೈಕಮಾಂಡ್ ಸೃಜಿಸುವ ಈ ಟೀಂನಲ್ಲಿ ಪ್ರತಿ ಜಿಲ್ಲೆಗೂ ಲೋಕಸಭಾ ಉಸ್ತುವಾರಿ ನೇಮಕ ಮಾಡಲಾಗುತ್ತದೆ. ಪಕ್ಷ ಸಂಘಟನೆ, ಚುನಾವಣೆ ತಯಾರಿ ಕೆಲಸ ಉಸ್ತುವಾರಿಗಳ ಜವಾಬ್ದಾರಿಯಾಗಿರುತ್ತದೆ. ಜಿಲ್ಲಾ ಉಸ್ತುವಾರಿಗಳು ಸುಮ್ಮನೆ ಕೂರುವಂತಿರುವುದಿಲ್ಲ. ಬಿಜೆಪಿ ನಾಯಕರು, ಕಟ್ಟಾ ಬೆಂಬಲಿಗರನ್ನು ಸಂಪರ್ಕಿಸಬೇಕು. ಬಿಜೆಪಿ ಸಂಘಟನೆ, ಮತದಾರರ ಮನ ಸೆಳೆಯುವ ಪ್ಲಾನ್ಗಳನ್ನು ಮಾಡಬೇಕು.
ಹಾಗಾದರೆ ಜಿಲ್ಲಾ ಉಸ್ತುವಾರಿಗಳು ಯಾರಿಗೆ ರಿಪೋರ್ಟ್ ಮಾಡಬೇಕು ಅಂತೀರಾ? ನೇರವಾಗಿ ಬಿಜೆಪಿ ಹೈಕಮಾಂಡ್ ಕಾಂಟ್ಯಾಕ್ಟ್ ಮಾಡುತ್ತೆ. ದೆಹಲಿಯಲ್ಲಿರುವ ಟೀಮ್ ಹೊತ್ತಿಲ್ಲದ ಹೊತ್ತಿನಲ್ಲಿ ಸಂಪರ್ಕಿಸುತ್ತದೆ. ಬಿಜೆಪಿ ಪರ ಮತ್ತು ವಿರುದ್ಧವಾಗಿರುವ ಅಂಶಗಳ ಬಗ್ಗೆ ಮಾಹಿತಿ ನೀಡಬೇಕು. ಉಸ್ತುವಾರಿಗಳ ರಿಪೋರ್ಟ್ ಆಧಾರದ ಮೇಲೆ ಪ್ಲಾನ್ ಮಾಡಲಿದೆ ಹೈಕಮಾಂಡ್. ಆಗ ಗೆಲುವಿಗೆ ಬೇಕಾದ ಫಾರ್ಮುಲಾ ರೆಡಿಯಾಗುತ್ತೆ. ಹೈಕಮಾಂಡ್ ಕೊಡುವ ಫಾರ್ಮುಲಾವನ್ನು ರಾಜ್ಯ ನಾಯಕರು ಜಾರಿಗೆ ತರಬೇಕು. ಜಿಲ್ಲಾ ಉಸ್ತುವಾರಿಗಳು ಏನಿದ್ದರು ದೆಹಲಿ ನಾಯಕರೊಂದಿಗೆ ಮಾತ್ರ ಸಂಪರ್ಕ ಹೊಂದಿರುತ್ತಾರೆ.
Comments are closed.