ಬೆಂಗಳೂರು: ನಾನು ಪ್ರಚಾರಕ್ಕಾಗಿ ಮೀಟೂ ವೇದಿಕೆಯನ್ನು ಬಳಸಿಕೊಂಡಿಲ್ಲ ಎಂದು ನಟಿ ಸಂಗೀತಾ ಭಟ್ ಹೇಳಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನನ್ನ ವಿಡಿಯೋದಲ್ಲಿ ನನ್ನ ಅನುಭವವನ್ನು ಮಾತ್ರ ನಾನು ಹಂಚಿಕೊಂಡಿದ್ದೇನೆ. ಯಾರ ವಿರುದ್ಧವೂ ನೇರವಾಗಿ ಹೇಳಿಕೆ ನೀಡಿಲ್ಲ. ಚಿತ್ರರಂಗದಲ್ಲಿ ಆದಂತಹ ಕೆಲವು ಸನ್ನಿವೇಷಗಳನ್ನು ಹಂಚಿಕೊಂಡಿದ್ದೆನೆಯೇ ಹೊರತು, ಯಾವುದೇ ಪ್ರಚಾರಕ್ಕಾಗಿ ನಾನು ಮೀಟೂ ವೇದಿಕೆಯನ್ನು ಬಳಸಿಕೊಂಡಿಲ್ಲ. ಮೀಟೂ ಅಭಿಯಾನ ಮಹಿಳೆಯರಿಗೆ ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.
ನಿರ್ದೇಶಕ ಗುರುಪ್ರಸಾದ್ ಅವರ ಹೇಳಿಕೆ ಬಗ್ಗೆ ತುಂಬಾ ಬೇಸರ ಆಯಿತು. ಆದರೂ ಸಹ ನನಗೆ ಅವರ ಮೇಲೆ ತುಂಬಾ ಗೌರವವಿದೆ. ಈ ವಿಚಾರವನ್ನು ಇಲ್ಲಿಗೆ ಕೈಬಿಡುತ್ತೇನೆ. ಇದನ್ನು ಮತ್ತೆ ಮುಂದುವರಿಸುವುದಿಲ್ಲ. ಅವರ ತಂದೆ-ತಾಯಿಯನ್ನು ನಾನು ಅಜ್ಜಿ, ತಾತ ಎಂದು ಕರೆಯುತ್ತಿದ್ದೆ. ಅವರನ್ನು ನಾನು ತಂದೆಯ ಸ್ಥಾನದಲ್ಲಿ ನೋಡಿದ್ದೇನೆ. ಯಾವುದೇ ಗಳಿಗೆಯಲ್ಲಿ ಅವರು ಆ ರೀತಿ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಗುರುಪ್ರಸಾದ್ ವಿರುದ್ಧ ಯಾವುದೇ ದೂರನ್ನು ನೀಡಿಲ್ಲ ಎಂದು ಸ್ಪಷ್ಟನೆ ನೀಡಿದರು.
ಇದೇ ವೇಳೆ ಮೀಟೂ ಆರೋಪ ಮಾಡಿರುವ ಶೃತಿ ಹರಿಹರನ್ ಹಾಗೂ ಸಂಜನಾ ಗರ್ಲಾನಿ ಬಗ್ಗೆ ಮಾತನಾಡಿದ ಅವರು, ಅವರ ಮೇಲೆ ಲೈಂಗಿಕ ದೌರ್ಜನ್ಯ ಆಗಿರುವ ವಿಚಾರ ಕೇಳಿ ನನಗೆ ಬೇಜಾರಾಗಿದೆ. ಒಂದು ಹೆಣ್ಣಾಗಿ ನನಗೆ ತುಂಬಾ ನೋವಾಯ್ತು. ಈಗಾಗಲೇ ಕೆಲವರು ಹೋರಾಟ ಮಾಡುತ್ತಿದ್ದಾರೆ. ಆದರೆ ಆ ವಿಚಾರದಲ್ಲಿ ಅವರು ಜಯಗಳಿಸುತ್ತಾರೆಯೇ ಎನ್ನುವ ಬಗ್ಗೆ ನನಗೆ ತಿಳಿದಿಲ್ಲ ಅಂತಾ ಹೇಳಿದ್ರು.
ನನ್ನ ಮನಶಾಸ್ತ್ರಜ್ಞ ವಿದ್ಯಾಭ್ಯಾಸ ಮುಂದುವರಿಸಿದ್ದರಿಂದ ಚಿತ್ರರಂಗದಿಂದ ದೂರ ಸರಿದಿದ್ದೇನೆ. ಈ ಬಗ್ಗೆ ತಿಳಿಸಲು ನಾನು ಫೀಲಂ ಚೇಂಬರ್‍ಗೆ ಬಂದಿದ್ದೆ. ಅಧ್ಯಕ್ಷರಾದ ಚಿನ್ನೇಗೌಡರು ನನ್ನನ್ನು ಕನ್ನಡ ಸಿನೆಮಾದಲ್ಲಿ ಮತ್ತೆ ಅಭಿನಯಿಸುವಂತೆ ಕೇಳಿಕೊಂಡಿದ್ದಾರೆ. ನಾನು ಅವರ ಮಗ ವಿಜಯ್ ಜೊತೆ ಕಿಸ್ಮತ್ ಸಿನಿಮಾದಲ್ಲಿ ನಟಿಸಿದ್ದೆ. ಅವರ ಮಾತಿಗೆ ಬೆಲೆ ಕೊಟ್ಟು, ಮುಂದಿನ ದಿನಗಳಲ್ಲಿ ಯಾವುದಾದರೂ ಆಫರ್ ಬಂದರೆ ಖಂಡಿತವಾಗಿಯೂ ಕನ್ನಡ ಸಿನಿಮಾಗಳಲ್ಲಿ ನಟಿಸುತ್ತೇನೆ ಎಂದು ಹೇಳಿದರು.
Comments are closed.