ಕರ್ನಾಟಕ

ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ; ಜೆಡಿಎಸ್​ ರಾಜ್ಯಾಧ್ಯಕ್ಷ ವಿಶ್ವನಾಥ್​

Pinterest LinkedIn Tumblr


ಬೆಂಗಳೂರು: ಜೆಡಿಎಸ್​ ರಾಜ್ಯಾಧ್ಯಕ್ಷ ಎಚ್​. ವಿಶ್ವನಾಥ್​ ಅವರ ಮಾತಿಗೆ ಇತ್ತೀಚೆಗೆ ಪಕ್ಷದಲ್ಲಿ ಕಿಮ್ಮತ್ತಿನ ಬೆಲೆಯೂ ಇಲ್ಲ ಎಂಬ ಮಾತುಗಳು ಪಕ್ಷದೊಳಗೆ ಕೇಳಿಬರುತ್ತಿವೆ. ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ವಿಶ್ವನಾಥ್​ ಅವರಿಗೆ ರಾಜ್ಯಾಧ್ಯಕ್ಷ ಹುದ್ದೆ ನೀಡಿ ಮೂಗಿಗೆ ತುಪ್ಪ ಸವರಿದ್ದಾರೆ ಎಂಬ ಕಾರಣಕ್ಕೆ ಅವರು ವರಿಷ್ಟರ ನಡೆಗೆ ತೀವ್ರ ಅಸಮಾಧಾನಗೊಂಡಿದ್ದಾರೆ ಎಂಬ ಮಾತುಗಳು ಹೆಚ್ಚಾಗಿವೆ.

ರಾಜ್ಯಾಧ್ಯಕ್ಷ ಹುದ್ದೆಯಲ್ಲಿದ್ದರೂ ಪಕ್ಷದಲ್ಲಿನ ಯಾವ ನಿರ್ಣಯಕ್ಕೂ ವಿಶ್ವನಾಥ್ ಅವರನ್ನು ಕೇಳುತ್ತಿಲ್ಲ. ದೇವೇಗೌಡರೇ ಎಲ್ಲ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ವಿಧಾನ ಪರಿಷತ್ ಅಭ್ಯರ್ಥಿಯ ಆಯ್ಕೆ ವೇಳೆಯೂ ವಿಶ್ವನಾಥ್ ಮಾತಿಗೆ ಮನ್ನಣೆ ನೀಡಿಲ್ಲ. ನಿಗಮ ಮಂಡಳಿಗೆ ಅಧ್ಯಕ್ಷರ ನೇಮಕಾತಿ ಪಟ್ಟಿಯನ್ನೂ ವಿಶ್ವನಾಥ್ ಗಮನಕ್ಕೆ ಬರದೆ ಸಿದ್ದಪಡಿಸಲಾಗುತ್ತದೆ.

ಅಷ್ಟೇ ಅಲ್ಲದೆ, ವಿಶ್ವನಾಥ್ ಅವರ ರಾಜಕೀಯ ವಿರೋಧಿಯಾಗಿರುವ ಸಿದ್ದರಾಮಯ್ಯನವರ ಜೊತೆಗೆ ದೇವೇಗೌಡರು ವೇದಿಕೆ ಹಂಚಿಕೊಂಡಿರುವುದು ರಾಜ್ಯಾಧ್ಯಕ್ಷರ ಕೋಪ ಹೆಚ್ಚಲು ಕಾರಣವಾಗಿದೆ. ಇದೇ ಕಾರಣದಿಂದ ಪಕ್ಷದ ಚಟುವಟಿಕೆಯಿಂದ ಅಂತರ ಕಾಯ್ದುಕೊಂಡಿರುವ ವಿಶ್ವನಾಥ್​ ವರಿಷ್ಟರ ನಡೆ ಬಗ್ಗೆ ಆಪ್ತರಲ್ಲಿ ನೋವನ್ನು ತೋಡಿಕೊಂಡಿದ್ದಾರೆ ಎನ್ನಲಾಗಿದೆ.

ವಿಶ್ವನಾಥ್​ ಸ್ಪಷ್ಟನೆಯೇನು?

ತಮ್ಮ ಬಗ್ಗೆ ಹರಡಿರುವ ವದಂತಿಗಳಿಗೆ ಮೈಸೂರಿನಲ್ಲಿ ಇಂದು ಪ್ರತಿಕ್ರಿಯಿಸಿರುವ ಜೆಡಿಎಸ್​ ರಾಜ್ಯಾಧ್ಯಕ್ಷ ಎಚ್​. ವಿಶ್ವನಾಥ್​, ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ವೈಯುಕ್ತಿಕ ವಿಚಾರಕ್ಕೆ ಯಾರಾದರೂ ರಾಜೀನಾಮೆ ಕೊಡ್ತಾರಾ? ನಾನು ಪಕ್ಷದಲ್ಲಿ ಆರಾಮಾಗಿದ್ದೇನೆ ಎಂದು ಹೇಳಿದ್ದಾರೆ.

ನಾನು ಆಸ್ಪತ್ರೆಯಲ್ಲಿದ್ದಾಗ ಯಾರೂ ಬಂದು ವಿಚಾರಿಸಲಿಲ್ಲ ಎಂದು ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಸಾಧ್ಯವೇ? ಇಷ್ಟಕ್ಕೂ ನಾನು ಆಸ್ಪತ್ರೆಯಲ್ಲಿದ್ದಾಗ ದೇವೇಗೌಡರು, ಕುಮಾರಸ್ವಾಮಿಯವರು ಬಂದು ಮಾತಾಡಿದ್ದಾರೆ. ವೈದ್ಯರೊಂದಿಗೂ ಸಿಎಂ ಕುಮಾರಸ್ವಾಮಿ ಚರ್ಚಿಸಿದ್ದಾರೆ. ಹೀಗಿದ್ದೂ ಯಾರೋ ಇಲ್ಲಸಲ್ಲದ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ನಾನು ನಿನ್ನೆಯಷ್ಟೇ ಜೆಡಿಎಸ್ ಪ್ರಧಾನ ಕಚೇರಿಯಲ್ಲಿ ಕುಳಿತು ಕೆಲಸ ಮಾಡಿದ್ದೇನೆ. ಪಕ್ಷದ ಕಾರಿನಲ್ಲಿಯೇ ಮೈಸೂರಿಗೆ ಬಂದಿದ್ದೇನೆ. ಅ.28ರಿಂದ ಶಿವಮೊಗ್ಗದಲ್ಲಿ ಪ್ರಚಾರ ಆರಂಭಿಸುತ್ತೇನೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

Comments are closed.