ಕರ್ನಾಟಕ

ನಿವೃತ್ತ ಇತಿಹಾಸ ಪ್ರಾಧ್ಯಾಪಕರ ಮನೆಯಿಂದ ಸಾವಿರಾರು ಪುಸ್ತಕಗಳ ಕಳವು

Pinterest LinkedIn Tumblr


ಬೆಂಗಳೂರು: ನಗರದಲ್ಲಿ ಅಪರೂಪದ ಕಳ್ಳತನ ಪ್ರಕರಣವೊಂದು ದಾಖಲಾಗಿದೆ. ಚಿನ್ನಾಭರಣ, ಮೊಬೈಲ್‌, ಪರ್ಸ್‌, ಎಟಿಎಂ ಕಾರ್ಡ್‌ಗಳು, ಲ್ಯಾಪ್‌ಟಾಪ್‌ ಕಳ್ಳತನಗಳಿಗೆ ಸುದ್ದಿಯಾಗುತ್ತಿದ್ದ ಬೆಂಗಳೂರಿನಲ್ಲಿ ಅಪರೂಪಕ್ಕೆ ಇತಿಹಾಸ ಪುಸ್ತಕಗಳ ಭಂಡಾರವೇ ಕಳ್ಳತನ ಆಗಿರುವ ಬಗ್ಗೆ ನಿವೃತ್ತ ಇತಿಹಾಸ ಪ್ರಾಧ್ಯಾಪಕರೊಬ್ಬರು ಇಂದಿರಾನಗರ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಎಫ್‌ಐಆರ್‌ ಕೂಡ ದಾಖಲಾಗಿದೆ.

ಇಂದಿರಾನಗರದ ಎಸ್‌ಎಎಲ್‌ ಎರಡನೇ ಹಂತದ ನಿವಾಸಿ ಶ್ರೀನಿವಾಸ್‌ ದೂರು ನೀಡಿದವರು. ಇತಿಹಾಸ ಪ್ರಾಧ್ಯಾಪಕರಾಗಿದ್ದ ಇವರಿಗೆ ಸದ್ಯ 82 ವರ್ಷ ವಯಸ್ಸು. ನಿವೃತ್ತಿ ಹೊಂದಿ 24 ವರ್ಷಗಳು ಕಳೆದಿವೆ. ಇವರಿಗೆ ಓದುವ ಹವ್ಯಾಸ ಇದ್ದುದರಿಂದ ರಾಶಿ ರಾಶಿ ಪುಸ್ತಕಗಳನ್ನು ಸಂಗ್ರಹಿಸಿ ತಮ್ಮ ಖಾಸಗಿ ಗ್ರಂಥಾಲಯ ಮಾಡಿಕೊಂಡಿದ್ದರು. ಆಯುಧ ಪೂಜೆ ನಿಮಿತ್ತ ಮನೆಯನ್ನು ಶುಚಿಗೊಳಿಸಲು ತಮ್ಮಲ್ಲಿದ್ದ ಪುಸ್ತಕಗಳನ್ನೆಲ್ಲಾ ಬಂಡಲ್‌ ಕಟ್ಟಿ ಇಟ್ಟಿದ್ದರು. ಕೆಲಸದ ನಿಮಿತ್ತ ಮನೆಯಿಂದ ಹೊರಗೆ ಹೋಗಿ ವಾಪಸ್ಸಾಗುವುದರೊಳಗೆ ಬಾಲ್ಕನಿಯಲ್ಲಿದ್ದ ಪುಸ್ತಕದ ಬಂಡಲ್‌ಗಳೇ ನಾಪತ್ತೆ ಆಗಿವೆ ಎಂದು ಪೊಲೀಸರ ಎದುರು ತಮ್ಮ ಸಂಕಟ ತೋಡಿಕೊಂಡಿದ್ದಾರೆ.

”ಅ.17ರಂದು ಘಟನೆ ನಡೆದಿದೆ. ಆ ದಿನ ಮಧ್ಯಾಹ್ನ ಮೂರರಿಂದ ನಾಲ್ಕು ಗಂಟೆಯವರೆಗೆ ಮನೆಯಲ್ಲಿ ನಾವು ಯಾರೂ ಇರಲಿಲ್ಲ. ಇದೇ ವೇಳೆ 2500 ಪುಸ್ತಕಗಳ ಕಳ್ಳತನ ನಡೆದಿದೆ” ಎಂದು ದೂರಿನಲ್ಲಿ ತಿಳಿಸಿದ್ದಾರೆ.

ದೂರುದಾರರಿಗೆ ಗೊತ್ತಿದ್ದವರೇ ಕೃತ್ಯ ಎಸಗಿರುವ ಸಾಧ್ಯತೆಗಳಿವೆ. ಮನೆಯಲ್ಲಿ ಸಿಸಿಟಿವಿ ಕೂಡ ಇರಲಿಲ್ಲ. ಆಟೊದಲ್ಲಿ ಬಂದಿರುವ ಕಳ್ಳರೇ ಪುಸ್ತಕಗಳನ್ನು ಕದ್ದುಕೊಂಡು ಹೋಗಿರುವ ಸಾಧ್ಯತೆಗಳಿವೆ ಎಂದು ತಿಳಿಸಿರುವ ಪೊಲೀಸರು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ತನಿಖೆ ಮುಂದುವರಿದಿದೆ.

Comments are closed.