ಕರ್ನಾಟಕ

ರಸ್ತೆಯ ಗುಂಡಿಗಳನ್ನು ಮುಚ್ಚದಿದ್ದರೆ ಬೆಂಗಳೂರು ಮಹಾನಗರ ಪಾಲಿಕೆಯನ್ನೇ ಮುಚ್ಚಿಸುತ್ತೇವೆ’; ಹೈಕೋರ್ಟ್​

Pinterest LinkedIn Tumblr


ಬೆಂಗಳೂರು: ‘ಬಿಬಿಎಂಪಿ ಕೆಲಸ ನಡೆಸದಿದ್ದರೆ ಬೆಂಗಳೂರೇನೂ ಸ್ಥಗಿತವಾಗುವುದಿಲ್ಲ. ನೀವು ಮಾಡುತ್ತಿರುವ ಅಭಿವೃದ್ಧಿ ಕೆಲಸಗಳೂ ಅಷ್ಟರಲ್ಲೇ ಇದೆ. ರಸ್ತೆ ಗುಂಡಿಗಳನ್ನು ಮುಚ್ಚಲು ಹೆಚ್ಚು ಜವಾಬ್ದಾರಿ ತೆಗೆದುಕೊಳ್ಳದಿದ್ದರೆ ಬಿಬಿಎಂಪಿಯನ್ನೇ ಮುಚ್ಚಿಸಲಾಗುವುದು’

ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ವಿಚಾರವಾಗಿ ಇಂದು ಮತ್ತೆ ಹೈಕೋರ್ಟ್ ನ್ಯಾಯಮೂರ್ತಿಗಳು​ ಪಾಲಿಕೆ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ಬಗೆಯಿದು.

ಈ ಮೊದಲೂ ಅನೇಕ ಬಾರಿ ಇದೇ ವಿಷಯಕ್ಕೆ ಹೈಕೋರ್ಟ್​ ವಿಭಾಗೀಯ ಪೀಠದ ನ್ಯಾಯಮೂರ್ತಿಗಳ ಮುಂದೆ ಕೈ ಕಟ್ಟಿ, ತಲೆತಗ್ಗಿಸಿ ನಿಂತಿದ್ದ ಬಿಬಿಎಂಪಿ ಅಧಿಕಾರಿಗಳು ಇಂದು ಮತ್ತೆ ಉತ್ತರ ನೀಡಲಾಗದೆ, ತಮ್ಮನ್ನು ಸಮರ್ಥಿಸಿಕೊಳ್ಳಲಾಗದೆ ತಡಬಡಾಯಿಸಿದ ಘಟನೆ ಮರುಕಳಿಸಿತು.

ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ನಿರ್ದೇಶನ ಕೋರಿ ಸಲ್ಲಿಸಿದ್ದ ಪಿಐಎಲ್ ವಿಚಾರಣೆಯನ್ನು ಇಂದು ಹೈಕೋರ್ಟ್ ವಿಭಾಗೀಯ ಪೀಠ ಕೈಗೆತ್ತಿಕೊಂಡಿತು. ರಸ್ತೆ ಗುಂಡಿಗಳನ್ನು ಮುಚ್ಚಲು ಪಾಲಿಕೆಗೆ ಗಡುವು ವಿಸ್ತರಿಸುತ್ತಲೇ ಇರುವ ಹೈಕೋರ್ಟ್​ ಇಂದು ಖಡಕ್​ ಎಚ್ಚರಿಕೆ ನೀಡಿದೆ.

ನಂಬಿಕೆ ಉಳಿಸಿಕೊಳ್ಳಲಿಲ್ಲ ಎಂದ ಹೈಕೋರ್ಟ್​:

ಕಳೆದ 15 ದಿನಗಳಿಂದ ರಸ್ತೆಗುಂಡಿ ಮುಚ್ಚಿಲ್ಲ. ಫೋಟೋ ಸಹಿತ 43 ರಸ್ತೆಗುಂಡಿ ವಿವರಗಳನ್ನು ನೀಡಿದ್ದರೂ ಮುಚ್ಚಿಲ್ಲ ಎಂದು ಹೈಕೋರ್ಟ್​ ಅರ್ಜಿದಾರರ ಪರ ವಕೀಲೆ ಎಸ್​.ಆರ್​. ಅನುರಾಧ ಹೇಳಿದ್ದಾರೆ. ಆದರೆ, ಅರ್ಜಿದಾರರ ಆರೋಪವನ್ನು ನಿರಾಕರಿಸಿದ ಬಿಬಿಎಂಪಿ ವಕೀಲರು ಕಾಮಗಾರಿ ನಡೆಯುತ್ತಿದೆ. ವಿವರಗಳನ್ನು ನೀಡಿದ್ದರೂ ಗುಂಡಿಗಳನ್ನು ಮುಚ್ಚಿಲ್ಲ ಎಂಬ ವಿಷಯ ಸತ್ಯಕ್ಕೆ ದೂರವಾದುದು ಎಂದು ಹೇಳಿದ್ದಾರೆ.

ಈ ವೇಳೆ ಬಿಬಿಎಂಪಿ ಪರ ವಕೀಲರ ಹೇಳಿಕೆಗೆ ಗರಂ ಆದ ಹೈಕೋರ್ಟ್​ ನ್ಯಾಯಮೂರ್ತಿಗಳು, ಇದಕ್ಕೂ ಮೊದಲು ಹಲವು ಬಾರಿ ಗಡುವು ನೀಡಲಾಗಿದೆ. ಪ್ರತಿ ಸಲವೂ ಒಂದೊಂದು ನೆಪ ಹೇಳುತ್ತಲೇ ಇದ್ದೀರಿ. ಮನಸು ಮಾಡಿದರೆ ಒಂದೇ ದಿನದಲ್ಲಿ ಕೆಲಸ ಮುಗಿಸಬಹುದು. ನಿಮಗೆ ಇಚ್ಛಾಶಕ್ತಿಯಿಲ್ಲ. ಈ ಬಾರಿಯಾದರೂ ರಸ್ತೆ ಗುಂಡಿಗಳನ್ನು ಮುಚ್ಚಿರುತ್ತೀರಿ ಎಂಬ ನಂಬಿಕೆಯಿತ್ತು. ಆ ನಂಬಿಕೆಯನ್ನು ಪಾಲಿಕೆ ಉಳಿಸಿಕೊಳ್ಳಲಿಲ್ಲ ಎಂದು ಬಿಬಿಎಂಪಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಬಿಬಿಎಂಪಿ ನೀಡಿದ ಸ್ಪಷ್ಟನೆಯೇನು?:

ನ್ಯಾಯಮೂರ್ತಿಗಳ ಅಸಮಾಧಾನಕ್ಕೆ ಪ್ರತಿಕ್ರಿಯಿಸಿದ ಬಿಬಿಎಂಪಿ ಪರ ವಕೀಲರು ಬಿಡಬ್ಲುಎಸ್​ಎಸ್​ಬಿ ಎಲ್ಲೆಡೆ ರಸ್ತೆಗಳನ್ನು ಅಗೆದು ಕಾಮಗಾರಿ ನಡೆಸುತ್ತಿದೆ. ಇದರಿಂದಾಗಿ ಕೆಲವು ರಸ್ತೆಗಳ ಗುಂಡಿಗಳನ್ನು ಮುಚ್ಚಲಾಗಿಲ್ಲ. 43 ಪ್ರದೇಶಗಳ ಪೈಕಿ 16 ಕಡೆ ಗುಂಡಿಗಳನ್ನು ಮುಚ್ಚಲಾಗಿದೆ ಎಂದು ಹೇಳಿದರು. ರಸ್ತೆ ಗುಂಡಿಗಳಿಗೆ ನಾವು ಹೊಣೆಯಲ್ಲ ಎಂದು ನ್ಯಾಯಾಲಯದಲ್ಲಿ ಬಿಡಬ್ಲುಎಸ್​ಎಸ್​ಬಿ ಪರ ವಕೀಲರು ವಾದ ಮಂಡಿಸಿದರು.

ನಿಮ್ಮ ಸಾಮರ್ಥ್ಯವನ್ನು ನೀವೇ ಸಾಬೀತುಪಡಿಸಿ:

ಬಿಬಿಎಂಪಿಗೆ ಗುಂಡಿ ಮುಚ್ಚಿಸಲು ಸಾಧ್ಯವಾಗದಿದ್ದರೆ ಅದು ಅಧಿಕಾರಿಗಳ ವೈಫಲ್ಯ ಎಂದು ಪರಿಗಣಿಸಲಾಗುವುದು. ಇದೇ ಬೇಜವಾಬ್ದಾರಿತನ ಮುಂದುವರಿದರೆ ರಸ್ತೆ ಗುಂಡಿಗಳನ್ನು ಮುಚ್ಚಿಸಲು ಕೆಲಸವನ್ನು ಬೇರೊಂದು ಏಜೆನ್ಸಿಗೆ ವಹಿಸಲಾಗುವುದು. ಬಿಬಿಎಂಪಿ ನಿಷ್ಪ್ರಯೋಜಕವಾಗಿದೆ ಎಂದು ನೀವೇ ಸಾಬೀತುಪಡಿಸಿಕೊಳ್ಳುತ್ತಿದ್ದೀರಿ. ನಿಮ್ಮ ಅಧಿಕಾರಿಗಳಿಗೇ ನಿಮ್ಮ ಕೆಲಸದ ಬಗ್ಗೆ ಮಾಹಿತಿಯಿಲ್ಲ ಎಂದರೆ ನಿಮ್ಮ ಕಾರ್ಯವೈಖರಿಯ ಬಗ್ಗೆ ತಿಳಿಯುತ್ತದೆ. ಬೇರೆ ಯಾವ ನೆಪವನ್ನೂ ಹೇಳದೆ 43 ಪ್ರದೇಶಗಳ ರಸ್ತೆಗುಂಡಿಗಳನ್ನು ಇಂದೇ ಮುಚ್ಚಬೇಕು ಎಂದು ಹೈಕೋರ್ಟ್ ತಾಕೀತು ಮಾಡಿದೆ.

Comments are closed.