ಕರ್ನಾಟಕ

ದಸರಾ ಪ್ರಯುಕ್ತ ಓಪನ್ ಸ್ಟ್ರೀಟ್‌: ಲೈಂಗಿಕ ಕಿರುಕುಳ ನಗರ ಪೊಲೀಸ್ ಆಯುಕ್ತ ಡಾ.ಸುಬ್ರಹ್ಮಣ್ಯೇಶ್ವರರಾವ್ ಸ್ಪಷ್ಟನೆ

Pinterest LinkedIn Tumblr


ಮೈಸೂರು: ದಸರಾ ಪ್ರಯುಕ್ತ ಅ.13ರಂದು ಆಯೋಜಿಸಿದ್ದ ಓಪನ್ ಸ್ಟ್ರೀಟ್ ಫೆಸ್ಟಿವಲ್‌ನಲ್ಲಿ ಕೆಲವು ಪುಂಡರ ಗುಂಪು ನೂಕಾಟ-ತಳ್ಳಾಟದ ಮೂಲಕ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬುದಾಗಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದು, ಈ ಹಿನ್ನೆಲೆ ಸಿಸಿಟಿವಿಗಳಲ್ಲಿ ಸೆರೆಹಿಡಿದಿರುವ ವಿಡಿಯೋ ಪರಿಶೀಲಿಸಿದ್ದು ಅದರಲ್ಲಿ ಈ ತರಹದ ಘಟನೆಗಳು ನಡೆದಿರುವ ಬಗ್ಗೆ ಮೇಲ್ನೋಟಕ್ಕೆ ಕಂಡು ಬಂದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಡಾ.ಸುಬ್ರಹ್ಮಣ್ಯೇಶ್ವರರಾವ್ ಪ್ರಕಟಣೆಯಲ್ಲಿ ಸ್ಪಷ್ಟೀಕರಿಸಿದ್ದಾರೆ.
ಅಂದು ಕೃಷ್ಣರಾಜಬುಲೆವಾರ್ಡ್ ರಸ್ತೆಯಲ್ಲಿ ನಡೆದ ಓಪನ್ ಸ್ಟ್ರೀಟ್ ಫೆಸ್ಟಿವಲ್‌ಗೆ ಪೂರಕವಾಗಿ ಪೊಲೀಸ್ ಬಂದೋಬಸ್ತ್ ಮಾಡಿಕೊಂಡಿದ್ದೆವು. ಆದರೆ, ಫೆಸ್ಟಿವಲ್‌ಗೆ ನಿರೀಕ್ಷೆಗೂ ಮೀರಿ ಜನರು ಭಾಗವಹಿಸಿ ಸಾಕಷ್ಟು ದಟ್ಟಣೆ ಉಂಟಾಗಿತ್ತು. ಈ ವೇಳೆ ಕೆಲವು ಪುಂಡರ ಗುಂಪು ನೂಕಾಟ-ತಳ್ಳಾಟದ ಮೂಲಕ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬುದಾಗಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದೆ.
ಆ ದಿನ ನಾವು ಅತ್ಯಾಧುನಿಕ ತಂತ್ರಜ್ಞಾನಗಳುಳ್ಳ (ಸಿಸಿಟಿವಿ, ಲಾಂಗ್ ಡಿಸೆಂಟ್ ವಿಡಿಯೋಗ್ರಫಿ, ವಿವಿಧ ಕ್ಯಾಮೆರಾ ಇತ್ಯಾದಿಯನ್ನು ಒಳಗೊಡಿರುವ )ಮೊಬೈಲ್ ಕಮಾಂಡ್ ಸೆಂಟರ್ ವಾಹನ, ಡ್ರೋಣ್‌ಗಳು ಮತ್ತು ಹ್ಯಾಂಡಿಕ್ಯಾಮ್‌ಗಳನ್ನು ಬಳಸಿ ಫೆಸ್ಟಿವಲ್‌ಅನ್ನು ಸಂಪೂರ್ಣವಾಗಿ ವಿಡಿಯೋ ಮಾಡಲಾಗಿದೆ. ಅಲ್ಲದೇ, ಪ್ರವಾಸೋದ್ಯಮ ಇಲಾಖೆ ವತಿಯಿಂದ ಈ ರಸ್ತೆಯುದ್ದಕ್ಕೂ 62 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು.
ಎಸಿಪಿ, ಪಿಐ, ಪಿಎಸ್‌ಐ ಸೇರಿದಂತೆ 204 ಸಿಬ್ಬಂದಿ, 1 ಸಿಎಆರ್ ಪಡೆ, ಸಿಸಿಬಿ ಎಸಿಪಿ ನೇತೃತ್ವದಲ್ಲಿ 40 ಸಿಬ್ಬಂದಿಗಳನ್ನು ಮಫ್ತಿಯಲ್ಲಿ ಕರ್ತ್ಯವ್ಯಕ್ಕೆ ನೇಮಕ ಮಾಡಲಾಗಿತ್ತು. ಅಲ್ಲದೇ ಕಾರ್ಯಕ್ರಮದ ಸಂಘಟನಾಕಾರರು 40 ಖಾಸಗಿ ಭದ್ರತಾ ಸಿಬ್ಬಂದಿಯನ್ನು ಸಾಕಷ್ಟು ಸಂಖ್ಯೆಯಲ್ಲಿ ನೇಮಿಸಿದ್ದರು. ಹೀಗಿರುವಾಗ, ಯಾವುದೇ ಗುಂಪು ಯಾರೊಂದಿಗೆ ಅನುಚಿತ ವರ್ತನೆ ನಡೆಸಿದಾಗ ತಕ್ಷಣ ಕರ್ತವ್ಯದಲ್ಲಿದ್ದ ಪೊಲೀಸರಿಗೆ ಮತ್ತು ಹತ್ತಿರದ ಪೊಲೀಸ್ ಹೆಲ್ಪ್ ಡೆಸ್ಕ್ ಅಥವಾ ಠಾಣೆಗೆ ದೂರು ನೀಡಬಹುದಿತ್ತು, ಆದರೆ ದೂರು ನೀಡಿರುವುದಿಲ್ಲ. ಈ ಹಿನ್ನೆಲೆ ಸಿಸಿ ಟಿವಿಗಳಲ್ಲಿ ಸೆರೆಹಿಡಿದಿರುವ ವಿಡಿಯೋ ಪರಿಶೀಲಿಸಿದ್ದು, ಅದರಲ್ಲಿ ಈ ತರಹದ ಘಟನೆಗಳು ನಡೆದಿರುವ ಬಗ್ಗೆ ಮೇಲ್ನೋಟಕ್ಕೆ ಕಂಡು ಬಂದಿಲ್ಲ.
ಆದರೂ, ಈ ವಿಚಾರವನ್ನು ನಗರ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ಈ ಕುರಿತು ಯಾರೇ ಸಾರ್ವಜನಿಕರು ದೂರು ನೀಡಿದರೂ ಅದನ್ನು ಸ್ವೀಕರಿಸಿ ಪ್ರಕರಣ ದಾಖಲಿಸಿ ತನಿಖೆ ಮಾಡುವುದಾಗಿ ತಿಳಿಸಿದ್ದಾರೆ.

ಪುಂಡರ ಗುಂಪಿನ ಕಾರು ಪತ್ತೆ: ಓಪನ್ ಸ್ಟ್ರೀಟ್ ಫೆಸ್ಟಿವಲ್‌ನಲ್ಲಿ ಇಬ್ಬರು ಯುವತಿಯರಿಗೆ ಕಿರುಕುಳ ನೀಡಿದ್ದಾರೆ ಎನ್ನಲಾದ ಪುಂಡರ ಗುಂಪಿನ ಕಾರು ಶ್ರೀರಾಂಪುರದಲ್ಲಿ ಪತ್ತೆಯಾಗಿದ್ದು, ಅದರ ಮಾಲೀಕರು ಮಾತ್ರ ಕಾಣೆಯಾಗಿದ್ದಾರೆ.
ಕಿರುಕುಳಕ್ಕೆ ಒಳಗಾದ ಯುವತಿಯ ಮನೆಯವರು ಪುಂಡರ ಕಾರನ್ನು ಪಾಲೋ ಮಾಡಿ, ಕಾರ್ ನಂಬರ್ ಪತ್ತೆಹಚ್ಚಿ, ಪೊಲೀಸರಿಗೆ ತಿಳಿಸಿದ್ದರು. ಈ ದೂರನ್ನು ಜನರಲ್ ಪಿಟಿಷನ್ ಎಂದು ಸ್ವೀಕರಿಸುವ ಲಕ್ಷ್ಮೀಪುರಂ ಪೊಲೀಸರು ಕಾರನ್ನು ಪತ್ತೆ ಮಾಡಿದ್ದು, ಕಾರು ಬೆಂಗಳೂರಿನಲ್ಲಿ ನೋಂದಣಿಯಾಗಿದ್ದು, ಮೈಸೂರಿಗೆ ವರ್ಗವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರನ್ನು ಇನ್ನು ಠಾಣೆಗೆ ತರಲಾಗಿಲ್ಲ.

Comments are closed.