ಕರ್ನಾಟಕ

ಮಲೆನಾಡಿನಲ್ಲಿ ನಕ್ಸಲ್ ಚಳವಳಿ ಮತ್ತೆ ಸಕ್ರಿಯ

Pinterest LinkedIn Tumblr


ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಹಾಗೂ ಪಶ್ಚಿಮಘಟ್ಟ ಪ್ರದೇಶದಲ್ಲಿ ಮತ್ತೆ ನಕ್ಸಲರು ಸಕ್ರಿಯರಾಗುವ ಮೂಲಕ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದ ನಿದ್ದೆಗೆಡಿಸಿದೆ. ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆ ನಾಯಕತ್ವದ ಕೊರತೆಯಿಂದ ಕ್ಷೀಣಿಸಿದೆ ಎಂಬ ನಿರೀಕ್ಷೆ ಸಂಪೂರ್ಣ ಹುಸಿಯಾಗಿದೆ.

ನಾಯಕಿಯಾಗಿದ್ದ ಕನ್ಯಾಕುಮಾರಿಯಿಂದ ಹಿಡಿದು ನೂರ್ ಶ್ರೀಧರ್, ನಿಲ್ಗುಳಿ ಪದ್ಮನಾಭವರೆಗಿನ 15 ಮಂದಿ ನಕ್ಸಲರು ಶರಣಾಗತಿ ಮೂಲಕ ಚಳವಳಿಯಿಂದ ಮುಖ್ಯವಾಹಿನಿಗೆ ಮರಳಿದ ಪರಿಣಾಮ ಹಾಗೂ ನಕ್ಸಲ್ ಪೀಡಿತ ಪ್ರದೇಶದಲ್ಲಿ ಆಗಿರುವ ಅಭಿವೃದ್ಧಿಯಿಂದ ಮಲೆನಾಡು ಹಾಗೂ ಪಶ್ಚಿಮಘಟ್ಟ ಪ್ರದೇಶದಲ್ಲಿ ನಕ್ಸಲ್ ಚಟುವಟಿಕೆ ದುರ್ಬಲಗೊಂಡಿದೆ ಎಂದೇ ಭಾವಿಸಲಾಗಿತ್ತು. ಆದರೆ ಚಳವಳಿ ಆರಂಭದಲ್ಲೇ ನಾಯಕತ್ವ ವಹಿಸಿದ್ದ ಬಿ.ಜಿ.ಕೃಷ್ಣಮೂರ್ತಿ ಮತ್ತೆ ಸಕ್ರಿಯನಾಗಿದ್ದಾನೆ ಎನ್ನುವ ಅಂಶ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.

ಮೂಡಿಗೆರೆ ತಾಲೂಕು ಗುಳ್ಯಾ ಗ್ರಾಮದಲ್ಲಿ ಬಿ.ಜಿ.ಕೃಷ್ಣಮೂರ್ತಿ ಹಾಗೂ ಮುಂಡಗಾರು ಲತಾ ನೇತೃತ್ವದಲ್ಲಿ 8 ಮಂದಿ ನಕ್ಸಲರ ತಂಡ ವಾಸುದೇವ ಅವರ ಮನೆಗೆ ಬಂದು ನಕ್ಸಲ್ ಚಳವಳಿ ಬೆಂಬಲಿಸುವಂತೆ ಆಗ್ರಹಿಸಿದ್ದರೆಂಬ ಹಿನ್ನೆಲೆಯಲ್ಲಿ ವಾಸುದೇವ ಅವರ ದೂರು ಆಧರಿಸಿ ಬಿ.ಜಿ.ಕೃಷ್ಣಮೂರ್ತಿ, ಮುಂಡಗಾರು ಲತಾ ಮತ್ತಿತರರ ವಿರುದ್ಧ ಶಂಕೆ ವ್ಯಕ್ತಪಡಿಸಿ ಕುದುರೆಮುಖ ಪೊಲೀಸರು ಅ.9ರಂದು ಎಫ್​ಐಆರ್ ದಾಖಲಿಸಿದ್ದಾರೆ.

ಪ್ರಭಾವಿ ನಕ್ಸಲ್ ನಾಯಕ ಸಾಕೇತ್ ರಾಜನ್ ಎನ್​ಕೌಂಟರ್​ನಲ್ಲಿ ಹತ್ಯೆಯಾದ ಬಳಿಕ ಮಲೆನಾಡು ಹಾಗೂ ಪಶ್ಚಿಮಘಟ್ಟದಲ್ಲಿ ಚಳವಳಿ ನೇತೃತ್ವ ಬಿ.ಜಿ.ಕೃಷ್ಣಮೂರ್ತಿಯನ್ನು ಅರಸಿ ಬಂದಿತ್ತು. ಒಂದೆರಡು ವರ್ಷಗಳಲ್ಲೇ ಆತ ಅರಣ್ಯದಲ್ಲಿ ಕಾಲಿಗೆ ಗಾಯ ಮಾಡಿಕೊಂಡು ದೀರ್ಘಕಾಲದ ಚಿಕಿತ್ಸೆಯಲ್ಲಿರುವ ಕಾರಣ ನಕ್ಸಲ್ ಚಳವಳಿಗೆ ನಾಯಕತ್ವದ ಕೊರತೆ ತಲೆದೋರಿದೆ. ಮುಂಡಗಾರು ಲತಾ ಸಹ ವಯೋಸಹಜ ಸಮಸ್ಯೆಯಿಂದ ಕ್ರಿಯಾಶೀಲವಾಗಿಲ್ಲ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಜತೆಗೆ ನಕ್ಸಲ್ ಗುಂಪಿಗೆ ಹೊಸದಾಗಿ ಯಾರೂ ಸೇರ್ಪಡೆಯಾಗಿಲ್ಲ ಎನ್ನುವುದು ಇದಕ್ಕೆ ಪುಷ್ಟಿ ನೀಡಿತ್ತು. ಪೊಲೀಸ್ ಇಲಾಖೆ ಸಹ ಹೀಗೆಯೇ ಅಭಿಪ್ರಾಯ ವ್ಯಕ್ತಪಡಿಸಿತ್ತು.

ಈ ನಡುವೆ ಬಿ.ಜಿ.ಕೃಷ್ಣಮೂರ್ತಿ ಅರಣ್ಯ ಪ್ರದೇಶದಲ್ಲಿ ಕಾಡಾನೆ ದಾಳಿಯಿಂದ ಮೃತಪಟ್ಟಿರುವ ಬಗ್ಗೆ ಎಎನ್​ಎಫ್ ಶಂಕೆ ವ್ಯಕ್ತಪಡಿಸಿದ್ದು, ಈ ಬಗ್ಗೆ ಯಾವುದೇ ಮೂಲದಿಂದಲೂ ಖಚಿತವಾಗಿಲ್ಲ. ಜತೆಗೆ ಇದೀಗ ಸಕ್ರಿಯನಾಗಿ ತಂಡದ ನೇತೃತ್ವದಲ್ಲಿರುವನೆಂಬ ಮಾಹಿತಿ ಆತಂಕ ತಂದೊಡ್ಡಿದೆ.

ನಕ್ಸಲ್ ಚಟುವಟಿಕೆ ಕ್ಷೀಣಿಸಿದ ಹಿನ್ನೆಲೆಯಲ್ಲಿ ಶೃಂಗೇರಿ ಹಾಗೂ ಮೂಡಿಗೆರೆ ತಾಲೂಕಿನಲ್ಲಿ ಎಎನ್​ಎಫ್ ಪಡೆಯ ಕಾರ್ಯ ನಿರ್ವಹಣೆ ಅಗತ್ಯವಿದೆಯೇ ಎನ್ನುವ ಪ್ರಶ್ನೆ ಕೂಡ ಒಂದೊಮ್ಮೆ ಕೇಳಿ ಬಂದಿತ್ತು.

ಶೃಂಗೇರಿ, ಕಿಗ್ಗಾ ಮತ್ತು ದೇವಾಲೆಕೊಪ್ಪದ ನಕ್ಸಲ್ ನಿಗ್ರಹ ದಳದ ಸಿಬ್ಬಂದಿ ನಕ್ಸಲರ ಪತ್ತೆಗೆ ಕೂಂಬಿಂಗ್ ಕಾರ್ಯಾಚರಣೆ ತೀವ್ರಗೊಂಡಿದ್ದು, ಎಎನ್​ಎಫ್​ನಿಂದ ಶೋಧ ಮುಂದುವರಿದಿದೆ.

ತಂಡದಲ್ಲಿ ಯಾರ್ಯಾರಿದ್ದಾರೆ?: ಬಿ.ಜಿ.ಕೃಷ್ಣಮೂರ್ತಿ ನೇತೃತ್ವದಲ್ಲಿ ಮುಂಡಗಾರು ಲತಾ, ವಿಕ್ರಂ ಗೌಡ, ಹೊಸಗದ್ದೆ ಪ್ರಭಾ ಮತ್ತಿತರ ನಾಲ್ವರು ತಂಡದಲ್ಲಿದ್ದಾರೆ. ಪೊಲೀಸರು ಸಹ ಉಳಿದವರನ್ನು ಶಂಕಿತರು ಎಂದು ಎಫ್​ಐಆರ್​ನಲ್ಲಿ ಉಲ್ಲೇಖಿಸಿದ್ದಾರೆ.

ಶರಣಾಗತರಾದವರು: ಹಾಗಲಗಂಚಿ ವೆಂಕಟೇಶ್, ಹೊರಲೆ ಜಯ, ಎಡಗುಂದ ಕೋಮಲ, ಕೃಷ್ಣ, ಕುಂದೂರು ಮಲ್ಲಿಕಾ, ಸಿರಿಮನೆ ನಾಗರಾಜ್, ನೂರ್ ಶ್ರೀಧರ್, ರಿಜ್ವಾನಾ ಬೇಗಂ, ಕನ್ಯಾಕುಮಾರಿ, ಪತಿ ಶಿವು, ಮುಂಡರಗಿಯ ಚೆನ್ನಮ್ಮ, ನಿಲ್ಗುಳಿ ಪದ್ಮನಾಭ ಸೇರಿ ಒಟ್ಟು 15 ಮಂದಿ ಶರಣಾಗಿದ್ದಾರೆ

Comments are closed.