ಕರ್ನಾಟಕ

ಉಪ ಚುನಾವಣೆ 2019ರ ಚುನಾವಣೆಗೆ ಮುನ್ನ ಮೈತ್ರಿ ಪಕ್ಷಗಳಿಗೆ ಪರೀಕ್ಷೆ

Pinterest LinkedIn Tumblr


ಬೆಂಗಳೂರು: ಕರ್ನಾಟಕದ ಮೂರು ಲೋಕಸಭಾ ಕ್ಷೇತ್ರಗಳಿಗೆ ನವೆಂಬರ್ 3ರಂದು ನಡೆಯುತ್ತಿರುವ ಉಪ ಚುನಾವಣೆ 2019ರ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಮುನ್ನೋಟ ಎಂದು ವಿಶ್ಲೇಷಿಸಲಾಗಿದೆ. ಈ ಉಪ ಚುನಾವಣೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಒಂದು ಪರೀಕ್ಷೆಯಾಗಿದ್ದು ಬಿಜೆಪಿಗೆ ಮುಂದಿನ ಲೋಕಸಭೆ ಚುನಾವಣೆಗೆ ಒಂದು ದಿಕ್ಸೂಚಿ ಎನ್ನಬಹುದು. ರಾಜ್ಯದ ಮತದಾರರ ಮನಸ್ಸಿನಲ್ಲಿ ಏನಿದೆ ಎಂದು ತಿಳಿದುಕೊಳ್ಳಲು ಸಹ ಈ ಉಪ ಚುನಾವಣೆ ಒಂದು ವೇದಿಕೆಯಾಗಲಿದೆ.
ಮೂರು ಲೋಕಸಭಾ ಕ್ಷೇತ್ರಗಳ ಪೈಕಿ ಶಿವಮೊಗ್ಗ ಮತ್ತು ಬಳ್ಳಾರಿಗಳಲ್ಲಿ ಈ ಹಿಂದಿನ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿತ್ತು. ಮಂಡ್ಯ ಜೆಡಿಎಸ್ ಪಾಲಾಗಿತ್ತು. ಬಿಜೆಪಿ ನಾಯಕರಾದ ಬಿ ಎಸ್ ಯಡಿಯೂರಪ್ಪ ಮತ್ತು ಬಿ ಶ್ರೀರಾಮುಲು ಮತ್ತು ಮಂಡ್ಯದಲ್ಲಿ ಸಿ ಎಸ್ ಪುಟ್ಟರಾಜು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಉಪ ಚುನಾವಣೆ ಅನಿವಾರ್ಯವಾಗಿದೆ.
ಹೊಸದಾಗಿ ಆಯ್ಕೆಯಾಗುವ ಲೋಕಸಭಾ ಸದಸ್ಯರ ಅಧಿಕಾರಾವಧಿ ಇನ್ನು ಕೆಲವೇ ತಿಂಗಳುಗಳಿದ್ದರೂ ಕೂಡ ಉಪ ಚುನಾವಣೆಯಲ್ಲಿ ಪಕ್ಷಗಳ ಜೊತೆ ಭಾರೀ ಸ್ಪರ್ಧೆ ಏರ್ಪಡುವ ಲಕ್ಷಣವಂತೂ ಕಂಡುಬರುತ್ತಿದೆ. ಏಕೆಂದರೆ ಮುಂದಿನ ವರ್ಷದ ಲೋಕಸಭೆ ಚುನಾವಣೆಗೆ ಇದು ಪೂರ್ವಭಾವಿ ಪರೀಕ್ಷೆಯಂತೆ. ಮುಂದಿನ ವರ್ಷ ಲೋಕಸಭೆ ಚುನಾವಣೆಯನ್ನು ಒಟ್ಟಾಗಿ ಎದುರಿಸಬೇಕೆಂದು ಬಯಸುತ್ತಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಸೀಟು ಹಂಚಿಕೆ ವಿಚಾರದಲ್ಲಿ ಸರಿಯಾದ ಆಯ್ಕೆ ಮಾಡಿಕೊಳ್ಳಬೇಕಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಪಾರುಪತ್ಯವಿರುವುದರಿಂದ ಅಲ್ಲಿ ಸೀಟು ಹಂಚಿಕೆ ವಿಚಾರದಲ್ಲಿ ವಿವಾದವೇಳುವ ಪ್ರಮೇಯ ಕಡಿಮೆ. ಇನ್ನು ಬಳ್ಳಾರಿಯಲ್ಲಿ ಕಾಂಗ್ರೆಸ್ ಪ್ರಭಾವ ಹೆಚ್ಚಿರುವುದರಿಂದ ಇಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇನೆ ಎಂದು ಹೊರಡುವ ಸಾಧ್ಯತೆ ಕಡಿಮೆ.
ಆದರೆ ಸಮಸ್ಯೆಯಿರುವುದು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ. ಇಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲು ತೀವ್ರ ಉತ್ಸುಕವಾಗಿದ್ದು, ಕಾಂಗ್ರೆಸ್ ಸೀಟು ಬಿಟ್ಟುಕೊಡುವ ಮನಸ್ಸಿನಲ್ಲಿಲ್ಲ. 2013ರಲ್ಲಿ ಯಡಿಯೂರಪ್ಪನವರು 3.62 ಲಕ್ಷ ಮತಗಳ ಭಾರೀ ಅಂತರದಿಂದ ಗೆದ್ದಿದ್ದು ಈ ಬಾರಿ ಕಾಂಗ್ರೆಸ್ -ಜೆಡಿಎಸ್ ಒಟ್ಟಾಗಿ ಬಿಜೆಪಿ ವಿರುದ್ಧ ಸೆಣಸಲು ಮುಂದಾಗುವ ಸಾಧ್ಯತೆಯಿದೆ.

Comments are closed.