ಕರ್ನಾಟಕ

ಈ ತಿಂಗಳ ಎರಡನೇ ಶನಿವಾರದ ಬದಲಿಗೆ ಅ.20 ರಂದು ರಜೆ ಘೋಷಣೆ ಸಾಧ್ಯತೆ

Pinterest LinkedIn Tumblr

ಬೆಂಗಳೂರು: ಪ್ರಸಕ್ತ ತಿಂಗಳ ಎರಡನೇ ಶನಿವಾರದ ಬದಲಿಗೆ ಅ.20 ರಂದು ರಜೆ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.

ಅಕ್ಟೋಬರ್ 18 ಮತ್ತು 19 ರಂದು ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬ ಬರಲಿದ್ದು, ಅಕ್ಟೋಬರ್ 21 ರಂದು ಭಾನುವಾರ ಬರಲಿದೆ. ಅಕ್ಟೋಬರ್ 20 ಶನಿವಾರ ದಿನದಂದು ರಜೆ ತೆಗೆದುಕೊಂಡರೆ, ನಾಲ್ಕು ದಿನಗಳ ಸುಧೀರ್ಘ ರಜೆ ಸಿಗುವುದೆಂದು ಹೆಚ್ಚು ಮಂದಿ ರಜೆ ತೆಗೆದುಕೊಳ್ಳುವ ಸಾಧ್ಯತೆಗಳಿರುವುದರಿಂದ ಅಕ್ಟೋಬರ್ 13 ಎರಡನೇ ಶನಿವಾರವಾಗಿದ್ದು, ಅಂದು ರಜೆಯನ್ನು ರದ್ದು ಮಾಡಿ, ಅಕ್ಟೋಬರ್ 20 ರಂದೇ ರಜೆ ನೀಡಲು ಸರ್ಕಾರ ಸಿಎಂ ಕುಮಾರಸ್ವಾಮಿಯವರು ಸಲಹೆ ನೀಡಿದ್ದಾರೆಂದು ತಿಳಿದುಬಂದಿದೆ.

ಪ್ರಸಕ್ತ ತಿಂಗಳು ಒಟ್ಟು 31 ದಿನಗಳಿದ್ದು, ಇದರಲ್ಲಿ 10 ದಿನಗಳು ಸರ್ಕಾರಿ ಉದ್ಯೋಗಸ್ಥರಿಗೆ ರಜಾ ದಿನಗಳಿವೆ. 4 ಭಾನುವಾ, ಗಾಂಧಿ ಜಯಂತಿ, ಮಹಾಲಯ ಅಮಾವಸ್ಯೆ (ಅ.8), ಎರಡನೇ ಶನಿವಾರ, ಆಯುಧ ಪೂಜೆ-ವಿಜಯದಶಮಿ (ಅ.18, 19) ಮತ್ತು ವಾಲ್ಮೀಕಿ ಜಯಂತಿ (ಅ.24).

ಕರ್ನಾಟಕ ರಾಜ್ಯ ಸರ್ಕಾರಿ ಉದ್ಯೋಗಸ್ಥರ ಸಂಘದ ಕಾರ್ಯದರ್ಶಿ ಶ್ರೀಕಾಂತ್ ಮಾತನಾಡಿ, ಕೇವಲ ಪ್ರಸಕ್ತ ತಿಂಗಳು ಮಾತ್ರ ಎರಡನೇ ಶನಿವಾರದ ಬದಲಿಗೆ ಮೂರನೇ ಶನಿವಾರ ರಜೆ ನೀಡಲು ಸರ್ಕಾರ ನಿರ್ಧರಿಸಿದ್ದೇ ಆದರೆ, ಅದಕ್ಕೆ ನಾವು ಸಹಕಾರ ನೀಡುತ್ತೇವೆ. ಆಡಳಿತದ ಉದ್ದೇಶವಾಗಿದ್ದರೆ, ಅದು ಸಾರ್ವಜನಿಕರಿಗೆ ಸಹಾಯವಾಗಲಿದೆ. ಎರಡನೇ ಶನಿವಾರ ಕೆಲಸ ಮಾಡಿ, ಅ.20 ರಂದು ರಜೆ ತೆಗೆದುಕೊಳ್ಳಲು ಸಿದ್ಧರಿದ್ದೇವೆಂದು ಹೇಳಿದ್ದಾರೆ.
ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 1986ರಲ್ಲಿ ಸರ್ಕಾರಿ ನೌಕರರಿಗೆ ಎರಡನೇ ಶನಿವಾರ ರಜೆ ನೀಡುವ ಪದ್ಧತಿ ಆರಂಭವಾಗಿತ್ತು. ಒಂದು ವೇಳೆ ಎರಡನೇ ಶನಿವಾರದಂದು ರಜೆ ನೀಡುವುದನ್ನು ನಿಲ್ಲಿಸಿದ್ದರೆ, ಕುಮಾರಸ್ವಾಮಿಯವರು ಈ ಸಂಪ್ರದಾಯವನ್ನು ಮುರಿದ ಮೊದಲ ಮುಖ್ಯಮಂತ್ರಿಯಾಗುತ್ತಿದ್ದರು.

ಕೆಲ ದಿನಗಳ ಹಿಂದಷ್ಟೇ ಸಚಿವ ಪ್ರಿಯಾಂಕ ಖರ್ಗೆಯವರು ಸರ್ಕಾರಿ ನೌಕರರಿಗೆ 5 ದಿನಗಳ ಕೆಲಸದ ವಾರ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಇದು ಭಾರಿ ಚರ್ಚೆಗೆ ಗ್ರಾಸವಾಗಿದೆ.

ಖರ್ಗೆಯವರು ಶಿಫಾರಸ್ಸನ್ನು ಸರ್ಕಾರಿ ನೌಕರರ ಸಂಘಟನೆಯ ಸದಸ್ಯರು ಸ್ವಾಗತಿಸಿದ್ದಾರೆ. ಈ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಜಯಂತಿಗಳಿಗೆ ಸಾಕಷ್ಟು ರಜೆಗಳನ್ನು ನೀಡಲಾಗುತ್ತದೆ. ಇದರ ಅಗತ್ಯವಿಲ್ಲ. ಇಂತಹ ರಜೆಗಳನ್ನು ರದ್ದು ಮಾಡಿ, ಶನಿವಾರ ಹಾಗೂ ಭಾನುವಾರ ರಜೆ ನೀಡಿ, ಕೆಲಸದ ಅವಧಿಯನ್ನು ವಿಸ್ತರಿಸಿದರೆ, ನಮಗೆ ಸಮಸ್ಯೆಗಳಿಲ್ಲ. ಆದರೆ, ಜಾತಿ ಮೇಲೆ ಅವಲಂಬಿತರಾಗಿರುವ ಕೆಲ ರಾಜಕೀಯ ನಾಯಕರು ಜಯಂತಿಗಳಿಗಿರುವ ರಜೆಗಳನ್ನು ರದ್ದು ಮಾಡಲು ಒಪ್ಪುತ್ತಿಲ್ಲ ಎಂದು ತಿಳಿಸಿದ್ದಾರೆ.

Comments are closed.