ಕರ್ನಾಟಕ

ಗ್ರಾಮ ಪಂಚಾಯತ್ ಗಳಲ್ಲಿ ಆಧಾರ್ ತಿದ್ದುಪಡಿ ಕೇಂದ್ರಗಳು ಆರಂಭ

Pinterest LinkedIn Tumblr


ತಾಳಿಕೋಟೆ: ಗ್ರಾಮ ಪಂಚಾಯಿತಿಗಳಲ್ಲಿ ಆಧಾರ್ ತಿದ್ದುಪಡಿ ಕೇಂದ್ರಗಳು ಆರಂಭವಾಗಿರುವುದರಿಂದ ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಲ್ಲ ಗ್ರಾಪಂಗಳ ಅಭಿವೃದ್ಧಿ ಅಧಿಕಾರಿಗಳಿಗೆ ಅ.1ರಂದು ಪತ್ರ ಬರೆದು ಆಧಾರ್ ತಿದ್ದುಪಡಿ ಕೇಂದ್ರಗಳನ್ನು ತಕ್ಷಣ ಆರಂಭಿಸುವಂತೆ ಸೂಚಿಸಿದ್ದಾರೆ. ಅಲ್ಲದೆ, ಅ.4ರಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಪಿಡಿಒ ಹಾಗೂ ಕಂಪ್ಯೂಟರ್ ಆಪರೇಟರ್​ಗಳ ಸಭೆಯಲ್ಲಿ ಕೂಡ ಆಧಾರ್ ತಿದ್ದುಪಡಿ ಕೇಂದ್ರಗಳು ಕಾರ್ಯಾರಂಭವಾಗದ ಕುರಿತು ಚರ್ಚೆ ನಡೆದಿದ್ದು, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೆ ತರಲು ನಿರ್ಲಕ್ಷ್ಯಹಿಸಿದ ಅಧಿಕಾರಿಗಳ ವಿರುದ್ಧ ಇಒ ಗರಂ ಆಗಿದ್ದರು. ಆಧಾರ್ ತಿದ್ದುಪಡಿ ತಕ್ಷಣದಿಂದ ಆರಂಭಿಸಬೇಕು. ಇಲ್ಲದಿದ್ದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು. ಇದರಿಂದ ಎಚ್ಚೆತ್ತ ಪಿಡಿಒಗಳು ತಕ್ಷಣದಿಂದಲೇ ಆಧಾರ್ ತಿದ್ದುಪಡಿ ಕೇಂದ್ರಗಳನ್ನು ಆರಂಭಿಸಿದ್ದಾರೆ. ಗ್ರಾಪಂಗಳಲ್ಲಿ ಆಧಾರ್ ತಿದ್ದುಪಡಿಗಳು ಆರಂಭವಾಗುತ್ತಿದ್ದಂತೆ ನಾಗರಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಏನೆಲ್ಲ ತಿದ್ದುಪಡಿ ಮಾಡಬಹುದು: ಹೆಸರು,ವಿಳಾಸ, ಲಿಂಗ, ಮೊಬೈಲ್ ಸಂಖ್ಯೆ, ಭಾವಚಿತ್ರ, ಇ-ಮೇಲ್ ಐಡಿ, ಜನ್ಮ ದಿನಾಂಕ ತಿದ್ದುಪಡಿ ಮಾಡಿಸಬಹುದು. ವಿಳಾಸ, ಹೆಸರು ತಪ್ಪಾಗಿದ್ದರೆ ಸರಿಪಡಿಸಬಹುದು. ಆದರೆ, ಆಧಾರ್ ಅಪ್​ಡೇಟ್​ಗೆ ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.

ಹೊಸ ನೋಂದಣಿ ಇಲ್ಲ

ಗ್ರಾಪಂ ಕಚೇರಿಗಳಲ್ಲಿ ಹೊಸ ನೋಂದಣಿ ಮಾಡಿಸಲು ಸಾಧ್ಯವಿಲ್ಲ. ಬೆರಳಚ್ಚು ಮತ್ತು ಕಣ್ಣಿನ ಪಟಲ (ಐರಿಸಿ)ಬದಲಾವಣೆ ಮಾಡಲಾಗುವುದಿಲ್ಲ. ಮಗುವಿಗೆ 5 ವರ್ಷ ತುಂಬಿದ ಬಳಿಕ ಬಯೋಮೆಟ್ರಿಕ್ ದತ್ತಾಂಶ ಪರಿಷ್ಕರಣೆ ಮಾಡಿಸಬೇಕಿದೆ. ಅಂತಹ ಮಕ್ಕಳು ಮತ್ತು ವಯಸ್ಕರು ಅಟಲ್ ಜನಸ್ನೇಹಿ ಕೇಂದ್ರ, ನಾಡ ಕಚೇರಿಗಳಲ್ಲಿ ಹೊಸದಾಗಿ ನೋಂದಣಿ ಮಾಡಿಕೊಳ್ಳಬಹುದು.

Comments are closed.