ಕರ್ನಾಟಕ

ಕೊಡಗಿನ ಮಹಾಮಳೆಯ ಸಂತ್ರಸ್ತರಿಗೆ ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ಬೃಹತ್‌ ರ‍್ಯಾಲಿ

Pinterest LinkedIn Tumblr


ಮಡಿಕೇರಿ: ಕೊಡಗಿನ ಮಹಾಮಳೆಗೆ ಸಂಭವಿಸಿದ ಭೂಕುಸಿತಕ್ಕೆ ಸಿಲುಕಿ ಸಂತ್ರಸ್ತರಾಗಿರುವವರಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಕೊಡಗು ಪ್ರಾಕೃತಿಕ ವಿಕೋಪ ಮತ್ತು ನೆರೆ ಸಂತ್ರಸ್ತರ ಸಮಿತಿ, ಕರ್ನಾಟಕ ಬೆಳೆಗಾರರ ಒಕ್ಕೂಟ (ಕೆಜಿಎಫ್‌) ಕೊಡಗು ಪ್ಲಾಂಟರ್ಸ್‌ ಅಸೋಸಿಯೇಷನ್‌ ನೇತೃತ್ವದಲ್ಲಿ ಬೃಹತ್‌ ರ‍್ಯಾಲಿ ಶುಕ್ರವಾರ ಮಡಿಕೇರಿಯಲ್ಲಿ ನಡೆಯಿತು.

ಪ್ರತಿಭಟನೆಯಲ್ಲಿ 39 ಗ್ರಾಮದ ಸಂತ್ರಸ್ತರು, ನಾನಾ ಸಂಘಸಂಸ್ಥೆಗಳ ಪ್ರಮುಖರು ಪಾಲ್ಗೊಂಡು ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.

ಸಂತ್ರಸ್ತರು ಹಾಗೂ ಬೆಳೆಗಾರರ ರ‍್ಯಾಲಿ ನಗರದ ಗಾಂಧಿ ಮೈದಾನದಿಂದ ಆರಂಭವಾಗಿ ಜನರಲ್‌ ತಿಮ್ಮಯ್ಯ ವೃತ್ತದ ಮುಖಾಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭ ಮಾತನಾಡಿದ ಕೊಡಗು ಪ್ರಾಕೃತಿಕ ವಿಕೋಪ ಮತ್ತು ನೆರೆ ಸಂತ್ರಸ್ತರ ಸಮಿತಿ ಅಧ್ಯಕ್ಷ ಮನು ಮೇದಪ್ಪ, ”ಮಹಾಮಳೆಗೆ ಜಿಲ್ಲೆಯ ಜನತೆ ಸಂತ್ರಸ್ತರಾಗಿದ್ದಾರೆ. ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಗಮನ ಹರಿಸಿ ಜಿಲ್ಲೆಗೆ ವಿಶೇಷ ಅನುದಾನಗಳನ್ನು ನೀಡುವುದರ ಮೂಲಕ ನೊಂದ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಬೇಕು,” ಎಂದು ಆಗ್ರಹಿಸಿದರು.

ಕರ್ನಾಟಕ ಬೆಳೆಗಾರರ ಒಕ್ಕೂಟದ ಸಂಘಟನಾಕಾರ ನಂದ ಬೆಳ್ಯಪ್ಪ ಮಾತನಾಡಿ, ”ಜಿಲ್ಲೆಯ ಕಾಫಿ ಬೆಳೆ, ತೋಟಗಾರಿಕಾ ಹಾಗೂ ಸಾಂಬಾರ ಬೆಳೆಗಳ ನಷ್ಟಕ್ಕೆ ಸೂಕ್ತ ಪರಿಹಾರವನ್ನು ಸರಕಾರ ಘೋಷಿಸಬೇಕು. ಈ ಸಂಬಂಧ ಸೂಕ್ತ ಸರ್ವೆಗಳನ್ನು ಆಯಾ ಗ್ರಾಮದಲ್ಲಿ ನಡೆಸಬೇಕಿದೆ, ಬೆಳೆಗಾರರ ಜಾಗದಲ್ಲಿ ಪ್ರತಿ ಎಕರೆಗೆ ಆಯಾ ಸಂದರ್ಭದ ಮಾರುಕಟ್ಟೆ ಧಾರಣೆಗೆ ಅನುಗುಣವಾಗಿ ಬೆಳೆ ನಷ್ಟ ಪರಿಹಾರ ನೀಡಬೇಕು,” ಎಂದು ಆಗ್ರಹಿಸಿದರು.

ಕೊಡಗು ಪ್ಲಾಂಟರ್‌ ಅಸೋಸಿಯೇಷನ್‌ ಮುಖಂಡ ಕೆ.ಕೆ.ವಿಶ್ವನಾಥ್‌ ಮಾತನಾಡಿ, ”ಭೂ ಕುಸಿತದಿಂದ ಜಿಲ್ಲೆಯಲ್ಲಿ ಭೌಗೋಳಿಕ ಏರುಪೇರು ಉಂಟಾಗಿದೆ. ಭೂ ಕುಸಿತ ಜಾಗದಲ್ಲಿ ಮತ್ತೆ ತೋಟ ನಿರ್ವಹಣೆ ಅಸಾಧ್ಯ, ಸರಕಾರದ ಏರಿಯಲ್‌ ಸರ್ವೆಯಿಂದ ನಷ್ಟದ ಮಾಹಿತಿ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ, ಭೌಗೋಳಿಕ ಸರ್ವೆ ಕಾರ್ಯ ಆಯಾ ಗ್ರಾಮದಲ್ಲಿ ಆಗಬೇಕು,” ಎಂದು ಮನವಿ ಮಾಡಿದರು.

ಈ ಸಂದರ್ಭ ಮನವಿಯನ್ನು ವಿಶೇಷ ಜಿಲ್ಲಾಧಿಕಾರಿ ಜಗದೀಶ್‌ ಸೇರಿದಂತೆ ವಿಧಾನ ಪರಿಷತ್‌ ಸದಸ್ಯೆ ವೀಣಾ ಅಚ್ಚಯ್ಯ ಅವರಿಗೆ ನೀಡಿದರು.

ಈ ಸಂದರ್ಭ ಮಾತನಾಡಿದ ವೀಣಾ ಅಚ್ಚಯ್ಯ, ”ಜಿಲ್ಲೆಯ ಸಂತ್ರಸ್ತರ ಹಾಗೂ ಬೆಳೆಗಾರರ ಬೇಡಿಕೆಗಳನ್ನು ಸರಕಾರದ ಹಂತದಲ್ಲಿ ಚರ್ಚಿಸಲಾಗುವುದು. ನಷ್ಟದಲ್ಲಿರುವ ಕೃಷಿಕರ ನ್ಯಾಯಯುತ ಹೋರಾಟಕ್ಕೆ ನನ್ನ ಬೆಂಬಲವಿದೆ,” ಎಂದು ಹೇಳಿದರು.

ಪ್ರತಿಭಟನೆ ನೇತೃತ್ವವನ್ನು ಕೊಡಗು ಪ್ರಾಕೃತಿಕ ವಿಕೋಪ ಮತ್ತು ನೆರೆ ಸಂತ್ರಸ್ತರ ಸಮಿತಿಯ ಕುಕ್ಕೆರ ಜಯಾ ಚಿಣ್ಣಪ್ಪ, ರತನ್‌ ತಮ್ಮಯ್ಯ, ಬಿ.ಎನ್‌.ರಮೇಶ್‌, ಎಸ್‌.ಕೆ.ಅಚ್ಚಯ್ಯ, ಕೊಡಗು ಪ್ಲಾಂಟರ್‌ ಅಸೋಸಿಯೇಷನ್‌ ಎಂ.ಸಿ.ಕಾರ್ಯಪ್ಪ ವಹಿಸಿದ್ದರು.

*ಬೇಡಿಕೆಗಳು

ವಿಶೇಷ ಪ್ಯಾಕೇಜ್‌: ಸೋಮವಾರಪೇಟೆ ಹಾಗೂ ಮಡಿಕೇರಿ ತಾಲೂಕಿನ ಮಕ್ಕಂದೂರು, ಗರ್ವಾಲೆ, ಮಾದಾಪುರ, ಗಾಳಿಬೀಡು, ಶಾಂತಳ್ಳಿ, ಸಂಪಾಜೆ ಹಾಗೂ ಕೆ.ನಿಡುಗಣೆ ಸೇರಿ 7 ಗ್ರಾಮ ಪಂಚಾಯಿತಿ ವ್ಯಾಪ್ತಿಯ 39 ಗ್ರಾಮಗಳಿಗೆ ಮತ್ತು ಗ್ರಾಮಗಳ ಸಂತ್ರಸ್ತರಿಗೆ ವಿಶೇಷ ಪ್ಯಾಕೇಜ್‌ ನೀಡಬೇಕು. ಕಾಫಿ ಮಂಡಳಿ ಸೇರಿದಂತೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಸಂಕಷ್ಟದಲ್ಲಿರುವ ಗ್ರಾಮಗಳನ್ನು ಪರಿಗಣಿಸಬೇಕು.

ಮನೆ ಹಾನಿಗೆ ಪರಿಹಾರ: ಭೂಕುಸಿತ ಮತ್ತು ಗುಡ್ಡ ಕುಸಿತದಿಂದ ಸಂಪೂರ್ಣ ಮನೆ ಕಳೆದುಕೊಂಡವರಿಗೆ ಹಾಗೂ ಭಾಗಶ: ಮನೆ ಹಾನಿಗೀಡಾಗಿದ್ದರೆ ಸೂಕ್ತ ಜಾಗ ಮತ್ತು ಮನೆಯನ್ನು ನೀಡÜಬೇಕು.

ಸಾಲ ಮನ್ನಾ: ಅತಿವೃಷ್ಟಿಯಿಂದ ಹಾನಿಗೊಳಗಾದ ಜಿಲ್ಲೆಯ 38 ಗ್ರಾಮಗಳ ಎಲ್ಲಾ ರೈತರ ಮತ್ತು ಬೆಳೆಗಾರರ ಬ್ಯಾಂಕ್‌ ಹಾಗೂ ಸಹಕಾರ ಸಂಘಗಳ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು.

ಕಾಫಿ ಬೆಳೆ, ತೋಟಗಾರಿಕಾ ಬೆಳೆ ಮತ್ತು ಸಾಂಬಾರ ಬೆಳೆಗಳ ನಷ್ಟಕ್ಕೆ ಪರಿಹಾರ: ಕಾಫಿ ಮಂಡಳಿ ಮತ್ತು ಸಂಬಂಧಪಟ್ಟ ಇಲಾಖೆ ಪ್ರತಿ ಎಕರೆಗೆ ಸಂಬಂಧಿಸಿದಂತೆ ಆಯಾ ಸಂದರ್ಭದ ಮಾರುಕಟ್ಟೆ ಧಾರಣೆಗೆ ಅನುಗುಣವಾಗಿ ಕಾಫಿ (ಅರೆಬಿಕಾ, ರೋಬಸ್ಟಾ), ಕರಿಮೆಣಸು, ಏಲಕ್ಕಿ, ಅಡಿಕೆ ಮತ್ತು ಭತ್ತ ಇವುಗಳಿಗೆ ಸೂಕ್ತ ಪರಿಹಾರವನ್ನು ನಿಗದಿ ಮಾಡಬೇಕು.

ಭೂ ಕುಸಿತ ಪರಿಹಾರ: ಕಾಫಿ ಮಂಡಳಿ ಮತ್ತು ಸಂಬಂಧಿಸಿದ ಇಲಾಖೆಗಳು ಬೆಳೆ ಮತ್ತು ಭೂಮಿ ನಷ್ಟವನ್ನು ಇತರ ತೈಲ ಪೈಪ್‌ ಲೈನ್‌ ಮತ್ತು ವಿದ್ಯುತ್‌ ಟವರ್‌ಗೆ ಘೋಷಿಸಿರುವ ಪರಿಹಾರದ ಮೊತ್ತದ ಪ್ರಕಾರ ಅಷ್ಟೇ ಮೌಲ್ಯದ ಪರಿಹಾರ ಘೋಷಿಸಬೇಕು.

ಹೂಳು ತೆಗೆಯಲು ಕ್ರಮ: ಅತಿವೃಷ್ಟಿಯಿಂದ ಭಾರೀ ಪ್ರಮಾಣದ ಕೆಸರು ಮತ್ತು ತ್ಯಾಜ್ಯ ಹಟ್ಟಿಹೊಳೆ, ಮಕ್ಕಂದೂರು, ಮಾದಾಪುರ, ತಂತಿಪಾಲ ಮತ್ತು ಹಾರಂಗಿಯ ಹಿನ್ನೀರು ಪ್ರದೇಶಗಳಲ್ಲಿ ಸಂಗ್ರಹವಾಗಿದ್ದು, ಇವುಗಳನ್ನು ತೆಗೆಯುವ ಕಾರ್ಯವಾಗಬೇಕು.

ಮರಗಳ ಬಳಕೆಗೆ ಅನುಮತಿ ಬೇಕು: ಅಗತ್ಯ ಪರವಾನಗಿ ನೀಡುವ ಮೂಲಕ ಮರಗಳನ್ನು ಸ್ವಂತ ಬಳಕೆ ಮತ್ತು ಮಾರಾಟ ಮಾಡುವ ಅವಕಾಶವನ್ನು ಮಾಲೀಕರಿಗೆ ಕಲ್ಪಿಸಬೇಕು.

ಹಾರಂಗಿ ಜಲಾಶಯ: ಇತ್ತೀಚಿನ ವರದಿಗಳ ಪ್ರಕಾರ ಹಾರಂಗಿ ಜಲಾಶಯದಲ್ಲಿ ಸಂಗ್ರಹವಾದ ನೀರಿನ ಪ್ರಮಾಣವೇ ಭಾರೀ ಭೂ ಕುಸಿತಕ್ಕೆ ಕಾರಣವೆಂದು ತಿಳಿದು ಬಂದಿದೆ. ಜಿಲ್ಲಾಡಳಿತ ಇದರ ಸತ್ಯಾಸತ್ಯತೆಯನ್ನು ಗಮನಿಸಿ ಸೂಕ್ತ ಕ್ರಮಕೈಗೊಳ್ಳುವ ಮೂಲಕ ಮುಂದೆ ಅನಾಹುತಗಳು ಸಂಭವಿಸದಂತೆ ನೋಡಿಕೊಳ್ಳಬೇಕು.

ಭೌಗೋಳಿಕ ಸರ್ವೇ: ಮಾನವ ಶಕ್ತಿಯ ಮೂಲಕ ಭೌಗೋಳಿಕ ಸರ್ವೇ ಕಾರ್ಯ ನಡೆಸಿ ವರದಿಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು.

ಪುನರ್‌ ವಸತಿ ಮತ್ತು ಪರಿಹಾರ: ಭೌಗೋಳಿಕ ಸರ್ವೇಯ ನಂತರ ವಾಸಿಸಲು ಮತ್ತು ಕೃಷಿ ಮಾಡಲು ಸಾಧ್ಯವಿಲ್ಲ ಎನ್ನುವ ಪ್ರದೇಶದ ಸಂತ್ರಸ್ತರಿಗೆ ಸುರಕ್ಷಿತ ಸ್ಥಳದಲ್ಲಿ ಪುನರ್‌ ವಸತಿ ಮತ್ತು ಕೃಷಿಗೆ ಅಗತ್ಯವಿರುವ ಭೂಮಿಯನ್ನು ನೀಡಬೇಕು ಅಥವಾ ಸೂಕ್ತ ಪರಿಹಾರವನ್ನು ನೀಡಬೇಕು.

ಉದ್ಯೋಗ ಮತ್ತು ಪಿಂಚಣಿ: ಸರಕಾರ ಸಂತ್ರಸ್ತ ಕುಟುಂಬದ ಕನಿಷ್ಠ ಒಬ್ಬರಿಗೆ ಸರಕಾರಿ ಉದ್ಯೋಗ ನೀಡುವುದರೊಂದಿಗೆ ಕುಟುಂಬದ ಒಬ್ಬ ಸದಸ್ಯರಿಗೆ ಮುಂದಿನ 10 ವರ್ಷಗಳ ವರೆಗೆ ಪಿಂಚಣಿಯನ್ನು ನಿಗದಿ ಮಾಡಬೇಕು.

ಶಿಕ್ಷ ಣ: ಸಂತ್ರಸ್ತ ಕುಟುಂಬದಲ್ಲಿರುವ ಎಲ್ಲಾ ವಿದ್ಯಾರ್ಥಿಗಳ ಶಿಕ್ಷ ಣ ವೆಚ್ಚ ಹಾಗೂ ವಸತಿ ನಿಲಯಗಳ ವೆಚ್ಚವನ್ನು ಸರಕಾರ ಭರಿಸಬೇಕು ಮತ್ತು ಸಂತ್ರಸ್ತ ವಿದ್ಯಾರ್ಥಿಗಳು ಆಯ್ಕೆ ಮಾಡುವ ಯಾವುದೇ ಶಾಲಾ-ಕಾಲೇಜುಗಳಲ್ಲಿ ವಿದ್ಯಾಭ್ಯಾಸಕ್ಕೆ ಅವಕಾಶ ಕಲ್ಪಿಸಬೇಕು.

Comments are closed.