ಕರ್ನಾಟಕ

ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಚುನಾವಣೆಗೂ ರೆಸಾರ್ಟ್ ರಾಜಕೀಯ!

Pinterest LinkedIn Tumblr


ರಾಮನಗರ: ಬಿಬಿಎಂಪಿ ಮೇಯರ್ ಹಾಗೂ ಉಪಮೇಯರ್ ಚುನಾವಣೆಯಲ್ಲಿಯೂ ರೆಸಾರ್ಟ್ ರಾಜಕೀಯ ಆರಂಭವಾಗಿದೆ. ಬಿಜೆಪಿ ಹೈಜಾಕ್ ಭೀತಿಯಿಂದಾಗಿ ಗುರುವಾರ ರಾತ್ರಿ ಪಾಲಿಕೆಯ ಐವರು ಪಕ್ಷೇತರ ಸದಸ್ಯರನ್ನು ಬಿಡದಿ ಸಮೀಪದ ಈಗಲ್‍ಟನ್ ರೆಸಾರ್ಟ್‍ಗೆ ಕಾಂಗ್ರೆಸ್ ನಾಯಕರು ಕರೆತಂದಿದ್ದಾರೆ.

ಈ ಬಾರಿಯ ಬಿಬಿಎಂಪಿ ಮೇಯರ್ ಸ್ಥಾನವನ್ನು ಕೈ ತಪ್ಪಿಸಲು ಬಿಜೆಪಿ ತಂತ್ರ ರೂಪಿಸುತ್ತಿದೆ ಎನ್ನುವ ಭಯ ಕಾಂಗ್ರೆಸ್ ಪಾಳ್ಯದಲ್ಲಿ ಶುರುವಾಗಿದೆ. ಈಗಾಗಲೇ ಪಾಲಿಕೆಯ ಇಬ್ಬರು ಪಕ್ಷೇತರ ಅಭ್ಯರ್ಥಿಗಳಿಗೆ ಹಲವು ಆಮಿಷಗಳನ್ನು ಒಡ್ಡಿ ಬಿಜೆಪಿ ತನ್ನತ್ತ ಸೆಳೆದುಕೊಂಡಿದೆ ಎನ್ನುವುದು ಕಾಂಗ್ರೆಸ್ ನಾಯಕರ ಆರೋಪ. ಹೀಗಾಗಿ ಉಳಿದ ಐವರನ್ನು ತಮ್ಮ ಜೊತೆಗೆ ಇಟ್ಟುಕೊಳ್ಳಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್ ಈ ರೆಸಾರ್ಟ್ ವಾಸದ ಮೊರೆ ಹೋಗಿದೆ.

ಕಳೆದ ಬಾರಿಯಂತೆ ಈ ಬಾರಿಯೂ ಕಾಂಗ್ರೆಸ್ ನಾಯಕರು ಶಾಸಕರಾದ ಮುನಿರತ್ನ, ಎಸ್.ಟಿ. ಸೋಮಶೇಖರ್, ಭೈರತಿ ಬಸವರಾಜ್ ಅವರಿಗೆ ಪಕ್ಷೇತರ ಶಾಸಕರನ್ನು ಆಪರೇಷನ್ ನಿಂದ ಬಚಾವ್ ಮಾಡುವ ಹೊಣೆ ನೀಡಿದ್ದಾರೆ. ಬೆಂಗಳೂರಿನಿಂದ ಬಿಡದಿಯ ರೆಸಾರ್ಟ್‍ಗೆ ಆಗಮಿಸಿದ ಪಕ್ಷೇತರ ಕಾರ್ಪೋರೇಟರ್‍ಗಳು ಇಂದು ರೆಸಾರ್ಟ್‍ನಲ್ಲಿ ಕಾಲ ಕಳೆಯಲಿದ್ದಾರೆ. ರೆಸಾರ್ಟ್‍ಗೆ ಆಗಮಿಸುತ್ತಿದ್ದಂತೆ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಎಸ್.ಟಿ.ಸೋಮಶೇಖರ್, ಕಳೆದ ಮೂರು ವರ್ಷಗಳಿಂದ ನಮಗೆ 7 ಜನ ಬಿಬಿಎಂಪಿ ಪಕ್ಷೇತರ ಸದಸ್ಯರು ಬೆಂಬಲ ನೀಡುತ್ತಿದ್ದರು. ಆದರೆ ಅವರಲ್ಲಿ ಇಬ್ಬರು ಬಿಜೆಪಿಯ ಆಮಿಷದ ಹಿನ್ನೆಲೆಯಲ್ಲಿ ನಮ್ಮನ್ನು ತೊರೆದಿದ್ದಾರೆ. ಅಷ್ಟೇ ಅಲ್ಲದೆ ಉಳಿದಿರುವ ಐವರನ್ನು ಸೆಳೆಯುವ ಯತ್ನಕ್ಕೆ ಬಿಜೆಪಿಯವರು ಕೈಹಾಕಿದ್ದಾರೆ. ಬಿಜೆಪಿಯವರು ನೀಡುತ್ತಿರುವ ಮಾನಸಿಕ ಕಿರುಕುಳದಿಂದ ತಪ್ಪಿಸಲು ಪಾಲಿಕೆ ಸದಸ್ಯರನ್ನು ಇಲ್ಲಿಗೆ ಕರೆತಂದಿದ್ದೇವೆ. ಸದ್ಯಕ್ಕೆ ಬಂದೋಬಸ್ತ್ ಮಾಡಿಕೊಂಡಿದ್ದು, ಚುನಾವಣೆಯ ಸಮಯಕ್ಕೆ ನೇರವಾಗಿ ಬಿಬಿಎಂಪಿ ಕಚೇರಿಗೆ ಹೋಗುತ್ತೇವೆ ಎಂದು ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರು ಪಕ್ಷೇತರ ಸದಸ್ಯರನ್ನು ರೆಸಾರ್ಟ್‍ಗೆ ಕರೆದೊಯ್ಯಲು ಸೂಚನೆ ನೀಡಿದ್ದಾರೆ.

Comments are closed.