ಮಂಡ್ಯ: ಜಿಲ್ಲೆಯ ಜೀವನಾಡಿ ಕೆಆರ್‌ಎಸ್ ಅಣೆಕಟ್ಟೆಗೆ ಯಾವುದೇ ತೊಂದರೆಯಾಗಿಲ್ಲ. ಭಾರೀ ಪ್ರಮಾಣದ ಶಬ್ದ ಕೇಳಿಬಂದ ಕುರಿತು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‍ಎನ್‍ಡಿಎಂಸಿ) ಮೂರು ಕಾರಣಗಳು ನೀಡಿದೆ ಎಂದು ಕಾರ್ಯನಿರ್ವಾಹಕ ಎಂಜಿನಿಯರ್ ಬಸವರಾಜೇಗೌಡ ತಿಳಿಸಿದ್ದಾರೆ.
ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಸೆಪ್ಟೆಂಬರ್ 25ರಂದು ಶಬ್ದ ಕೇಳಿ ಬಂದ ತಕ್ಷಣವೇ ನಾವು ನಮ್ಮ ಸಿಬ್ಬಂದಿ ಅಣೆಕಟ್ಟೆಯನ್ನು ಸಂಪೂರ್ಣ ಪರಿಶೀಲಿಸಿದ್ದು, ಯಾವುದೇ ತೊಂದರೆಯಾಗಿಲ್ಲ. ಈ ಕುರಿತು ವರದಿ ತಯಾರಿಸಿ, ಮೈಸೂರು ಜಿಲ್ಲಾಧಿಕಾರಿಗೆ ನೀಡಿದ್ದೇವೆ. ಇತ್ತ ಕೆಎಸ್‍ಎನ್‍ಡಿಎಂಸಿ ಕೂಡಾ ವಿಸ್ತಾರವಾದ ವರದಿಯನ್ನು ಕೊಟ್ಟಿದೆ ಎಂದರು.
ಕೆಎನ್‍ಡಿಎಂಸಿ ವರದಿಯಲ್ಲಿ ಗಣಿಗಾರಿಕೆ ಉದ್ದೇಶದಿಂದ ಸ್ಫೋಟಗಳ ಬಳಕೆ, ಭೂ ಕುಸಿತ ಅಥವಾ ಗಾಳಿಯ ಒತ್ತಡದಿಂದ ಶಬ್ದ ಕೇಳಿ ಬಂದಿರಬಹುದು ಎನ್ನಲಾಗಿದೆ. ಆದರೆ ಮುಖ್ಯ ಕಾರಣ ಗಣಿಗಾರಿಕೆ ಉದ್ದೇಶದಿಂದ ಸ್ಫೋಟ ಮಾಡಲಾಗಿದೆ ಅಂತ ಶಂಕೆ ವ್ಯಕ್ತಪಡಿಸಿದೆ ಎಂದು ಮಾಹಿತಿ ನೀಡಿದರು.
ಕೆಎಸ್‍ಎನ್‍ಡಿಎಂಸಿ ವರದಿಯ ಬೆನ್ನಲ್ಲೇ ಎಚ್ಚೆತ್ತುಕೊಂಡ ಮಂಡ್ಯ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಅವರು, ಕೆಆರ್‌ಎಸ್ ಡ್ಯಾಂನ 20 ಕಿ.ಮೀ. ವ್ಯಾಪ್ತಿ ಪ್ರದೇಶದಲ್ಲಿ ಸ್ಫೋಟಕ ಬಳಕೆಗೆ ನಿಷೇಧ ಹೇರಿ ಆದೇಶ ಹೊರಡಿಸಿದ್ದಾರೆ. ಕೆಆರ್‌ಎಸ್ ಡ್ಯಾಂ ಸುತ್ತಲಿನ ಕೆಲವು ಭಾಗಗಳಲ್ಲಿ ಸ್ಫೋಟಕಗಳನ್ನು ಬಳಸಿ ಗಣಿಕಾರಿಕೆ ನಡೆಸಲಾಗುತ್ತಿದೆ. ಇದರಿಂದಾಗಿ ಭೂಮಿ ಕಂಪನವಾಗುತ್ತಿದ್ದು, ಆ ಪ್ರದೇಶದ ಮನೆಗಳ ಗೋಡೆಗಳು ಬಿರುಕು ಬಿಡುತ್ತಿವೆ. ಅಷ್ಟೇ ಅಲ್ಲದೆ ಶಬ್ದ ಮಾಲಿನ್ಯವೂ ಉಂಟಾಗುತ್ತಿದೆ. ಹೀಗಾಗಿ ಕೆಆರ್‌ಎಸ್ ಡ್ಯಾಂ ಸಂರಕ್ಷಣೆ ಉದ್ದೇಶದಿಂದ ಈ ಆದೇಶ ಹೊರಡಿಸಲಾಗಿಲೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
Comments are closed.