
ಬೆಂಗಳೂರು: ರಾಜ್ಯ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಸ್ವಾಗತಿಸಲು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ಎದುರಿಗೆ ಬಂದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಕಂಡರೂ ಕಾಣದಂತೆ, ಕನಿಷ್ಠ ಸೌಜನ್ಯಕ್ಕೂ ಮಾತಾನಾಡಿಸದೇ ಪ್ರತ್ಯೇಕ ಕಾರಿನಲ್ಲಿ ಡಿಕೆಶಿ ಬೆಳಗಾವಿಗೆ ತೆರಳಿದ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿಗೆ ಭೇಟಿ ನೀಡುವ ಸಲುವಾಗಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಡಿಕೆಶಿ ಆಗಮಿಸಿದ್ದರು. ಸುದ್ದಿ ತಿಳಿದು ಡಿಕೆಶಿ ಅವರನ್ನು ಸ್ವಾಗತಿಸಲು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತಂಡ ಹೂಗುಚ್ಛೊದೊಂದಿಗೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಎದುರಾದರೂ ಕೂಡ ಡಿಕೆಶಿ ಮಾತನಾಡದೇ ತಮ್ಮ ಪಾಡಿಗೆ ಕಾರಿನಲ್ಲಿ ಹೋಗಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಈ ಹಿಂದೆ ಪಿಎಲ್ ಡಿ ಬ್ಯಾಂಕ್ ಚುನಾವಣೆ ವಿಚಾರದಲ್ಲಿ ಡಿಕೆಶಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಬೆಂಬಲ ನೀಡಿದ್ದರು. ಹೀಗಾಗಿ ಜಾರಕಿ ಹೊಳಿ ಬ್ರದರ್ಸ್ ಅವರು ಡಿಕೆಶಿಗೆ ಬೆಳಗಾವಿ ರಾಜಕಾರಣಕ್ಕೆ ತಲೆಹಾಕದಂತೆ ಎಚ್ಚರಿಕೆ ನೀಡಿದ್ದರು. ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಜಾರಕೊಳಿ ಬ್ರದರ್ಸ್ ಬಂಡಾಯ ದೋಸ್ತಿ ಸರ್ಕಾರಕ್ಕೆ ಕಂಟಕವಾಗಿ ಪರಿಣಮಿಸಿತ್ತು.
ವಿದೇಶದಿಂದ ಆಗಮಿಸಿದ ಕೂಡಲೇ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಜಾರಕಿಹೊಳಿ ಬ್ರದರ್ಸ್ ಜತೆಗೆ ಮಾತುಕತೆ ನಡೆಸಿದ್ದರು. ಜಾರಕಿ ಹೊಳಿ ಬ್ರದರ್ಸ್ ಮನವಿ ಮೇರೆಗೆ ಮಧ್ಯಪ್ರವೇಶಿಸಿದ್ದ ಸಿದ್ದರಾಮಯ್ಯ ಅವರು, ಡಿಕೆಶಿ ಶಿವಕುಮಾರ್ ಅವರಿಗೆ ಬೆಳಗಾವಿ ರಾಜಕಾರಣಕ್ಕೆ ತಲೆ ಹಾಕದಂತೆ ಬುದ್ದಿ ಹೇಳಿದ್ದರು.
ಅಗತ್ಯವಿಲ್ಲದ ವಿಷಯಕ್ಕೆ ತಲೆ ಹಾಕುವುದು ಎಷ್ಟರಮಟ್ಟಿಗೆ ಸರಿ? ನಿಮ್ಮ ಜಿಲ್ಲೆಯ ರಾಜಕಾರಣಕ್ಕೆ ಬೇರೆಯವರು ತಲೆ ಹಾಕಿದ್ರೆ ನೀನು ಸುಮ್ಮನೆ ಇರ್ತೀರಾ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದರು. ಇನ್ನು ಮುಂದೆ ಹೀಗೆಲ್ಲ ಮಾಡಿಕೊಳ್ಳಬೇಡಿ, ಅವಶ್ಯಕತೆ ಇಲ್ಲದೇ ಇರೋ ಕಡೆ ನೀವು ಹೋಗದೇ ಇರಿ ಅಂತ ಡಿಕೆಶಿಗೆ ಸಿದ್ದರಾಮಯ್ಯ ಅವರು ಮನವಿ ಮಾಡಿದ್ದರು.
ಹೀಗಾಗಿ ಡಿಕೆ ಶಿವಕುಮಾರ್ ಅವರು ಬೆಳಗಾವಿಗೆ ತೆರಳುತ್ತಿದ್ದ ವೇಳೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಭೇಟಿಯಾದ್ರೂ ಕೂಡ ಮಾತನಾಡಿಸಲಿಲ್ಲ ಎನ್ನಲಾಗಿದೆ. ಡಿಕೆಶಿಯ ಈ ನಡೆ ಬಗ್ಗೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ಧಾರೆ. ಇನ್ನು ಈ ವಿಚಾರ ಹಿಂದೆ ಬೇರೆ ಯಾವುದಾದರೂ ಕಾರಣ ಇದೆಯಾ? ಎಂಬ ಅನುಮಾನುಗಳು ಹುಟ್ಟಿಕೊಂಡಿದೆ.
ಇನ್ನು ರಮೇಶ್ ಜಾರಕಿಹೊಳಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ಧರು. ಈ ವೇಳೆ ಬಂಡಾಯ ಶಮನಕ್ಕೆ ಮುಂದಾದ ಮಾಜಿ ಸಿಎಂ ಮುಂದೆ ರಮೇಶ್ ಜಾರಕಿಹೊಳಿ ಮೂರು ಬೇಡಿಕೆ ಇಟ್ಟಿದ್ದಾರೆ. ಖಡಕ್ ಆಗೇ ಮಾತು ಮುಂದುವರೆಸಿದ್ದ ರಮೇಶ್ ಜಾರಕೊಹೊಳಿ ಆರಂಭದಲ್ಲಿಯೇ ಡಿ.ಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ಧಾರೆ ಎನ್ನುತ್ತಿವೆ ಮೂಲಗಳು.
Comments are closed.