ಗಲ್ಫ್

ಮುತ್ತುಗಳ ದ್ವೀಪದಲ್ಲಿ ಹರಡಲಿದೆ ಕಸ್ತೂರಿ ಕನ್ನಡದ ಕಂಪು; ಪ್ರಪ್ರಥಮ ಅಂತರಾಷ್ಟ್ರೀಯ ಸಾಹಿತ್ಯ ಸಮ್ಮೇಳನಕ್ಕೆ ದ್ವೀಪ ರಾಷ್ಟ್ರ ಬಹರೇನ್ ನಲ್ಲಿ ವೇದಿಕೆ ಸಜ್ಜು

Pinterest LinkedIn Tumblr

ಬಹರೇನ್: ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಆಯೋಜಿಸಿರುವ ಪರಿಷತ್ತಿನ 104 ವರುಷಗಳ ಇತಿಹಾಸದಲ್ಲಿಯೇ ಪ್ರಥಮವೆನಿಸಕೊಳ್ಳಲಿರುವ ಪ್ರಪ್ರಥಮ ಅಂತಾರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನವು ಬಹರೈನ್ ದ್ವೀಪ ರಾಷ್ಟ್ರದಲ್ಲಿ ಇದೇ ಬರುವ ಅಕ್ಟೋಬರ್ ತಿಂಗಳ 5 ಹಾಗು 6 ರಂದು ಜರುಗಲಿದೆ . ದ್ವೀಪದ ಹೃದಯ ಭಾಗವಾದ ಮನಾಮದಲ್ಲಿರುವ ಇಂಡಿಯನ್ ಕ್ಲಬ್ಬಿನ ‘ಸಂಸ್ಕಾರ್ ‘ ಸಭಾಂಗಣದಲ್ಲಿ ಎರಡು ದಿನಗಳ ಕಾಲ ಜರುಗಲಿರುವ ಈ ಸಮ್ಮೇಳನಕ್ಕೆ ಇದಾಗಲೇ ಕ್ಷಣ ಗಣನೆ ಪ್ರಾರಂಭವಾಗಲಿದೆ .

ಇಲ್ಲಿನ ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಸಂಘ ಹಾಗು ಹಂಪಿ ಕನ್ನಡ ವಿಶ್ವ ವಿದ್ಯಾನಿಲಯದ ಜಂಟಿ ಸಹಯೋಗದೊಂದಿಗೆ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿರುವ ಸಮ್ಮೇಳನಕ್ಕೆ ನಾಡಿನಿಂದ 100ಕ್ಕೂ ಹೆಚ್ಚು ಸಾಹಿತಿಗಳು,ಕವಿಗಳು,ಲೇಖಕರು ,ಬರಹಗಾರರು ,ಚಿಂತಕರು ಆಗಮಿಸಲಿದ್ದಾರೆ . ಈ ಎರಡು ದಿನಗಳ ಸಮ್ಮೇಳನದಲ್ಲಿ ಕವಿ ಗೋಷ್ಠಿ ,ವಿಚಾರ ಗೋಷ್ಠಿ, ವಿವಿಧ ಸಂವಾದಗಳು ,ಕಮ್ಮಟಗಳ ಜೊತೆಗೆ ಎರಡೂ ದಿನಗಳು ನಾಡಿನ ಹಾಗು ಬಹರೈನ್ ನ ಕಲಾವಿದರುಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳು ಪ್ರದರ್ಶನಗೊಳ್ಳಲಿದೆ .

ಅಕ್ಟೋಬರ್ 5ರ ಶುಕ್ರವಾರದಂದು ಅಪರಾಹ್ನ 2 ಸರಿಯಾಗಿ ಸಮ್ಮೇಳನಕ್ಕೆ ವಿದ್ಯುಕ್ತ ಚಾಲನೆ ದೊರಕಲಿದ್ದು ಕನ್ನಡ ಮತ್ತು ಸಂಸ್ಕ್ರತಿ ಸಚಿವೆ ,ಜನಪ್ರಿಯ ನಟಿ ಡಾಕ್ಟರ್ ಜಯಮಾಲಾರವರು ಸಮ್ಮೇಳನವನ್ನು ಉದ್ಘಾಟಿಸಲಿದ್ದರೆ ,ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾಕ್ಟರ್ ಮನು ಬಳೆಗಾರ್ ರವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ . ಮುಖ್ಯ ಅತಿಥಿಗಳಾಗಿ ಕವಿ ಡಾ .ಎಚ್ .ಎಸ್ .ವೆಂಕಟೇಶ ಮೂರ್ತಿ,ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊಫೆಸರ್ ಎಸ್ .ಜಿ .ಸಿದ್ಧರಾಮಯ್ಯ ,ಹಂಪಿ ವಿ ವಿ ಕುಲಪತಿ ಡಾ ಮಲ್ಲಿಕಾ ಘಂಟಿ ಯವರ ಜೊತೆಗೆ ಬಹರೈನ್ ಕನ್ನಡ ಸಂಘದ ಅಧ್ಯಕ್ಷರಾದ ಶ್ರೀ ಪ್ರದೀಪ್ ಶೆಟ್ಟಿ ಯವರ ಉಪಸ್ಥಿತಿ ಇರಲಿದೆ .

ಈ ಎರಡು ದಿನಗಳ ಸಮ್ಮೇಳನದಲ್ಲಿ ವಿವಿಧ ರೀತಿಯ ಗೋಷ್ಠಿಯ ಜೊತೆಗೆ ಸಂವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಗಲ್ಫ್ ಕನ್ನಡಿಗರ ಸ್ಥಿತಿಗತಿ ಕುರಿತಾದ ವಿಚಾರ ಗೋಷ್ಠಿಯು ಪ್ರೊ ಮಲ್ಲೇಪುರಂ ವೆಂಕಟೇಶ್ ಅಧ್ಯಕ್ಷತೆಯಲ್ಲಿ ಜರುಗಲಿದ್ದರೆ ಸಮ್ಮೇಳನದ ಎರಡನೇ ದಿನ ಅಂದರೆ ಆಗಸ್ಟ್ 6ರಂದು ನಡೆಯಲಿರುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಪದ್ಮಶ್ರೀ ದೊಡ್ಡರಂಗೇಗೌಡ ವಹಿಸಿಕೊಳ್ಳಲಿದ್ದಾರೆ . ಕನ್ನಡ ಸಾಹಿತ್ಯದಲ್ಲಿ ಹಾಸ್ಯ ಈ ಗೋಷ್ಠಿಯು ಸಾಹಿತಿ ಡಾ ಸಿದ್ದಲಿಂಗಯ್ಯ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಇನ್ನು ಹಿರಿಯ ಸಾಹಿತಿಗಳೊಂದಿಗಿನ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ ಮನು ಬಳಿಗಾರ್ ಇವರು ವಹಿಸಿಕೊಳ್ಳಲಿದ್ದರೇ,ವಿಶ್ವ ಬಾರತಿಗೆ ಕನ್ನಡದಾರತಿ ವಿಚಾರ ಗೋಷ್ಠಿಯ ಅಧ್ಯಕ್ಷತೆಯನ್ನು ಡಾ ಸರಜೂ ಕಾಟ್ಕರ್ ವ್ಹಸಿಕೊಳ್ಳಲಿದ್ದಾರೆ . ಇದರ ಜೊತೆಗೆ ಅನೇಕ ಪರ್ಯಾಯ ಗೋಷ್ಠಿಗಳನ್ನು ನಡೆಸಲು ತೀರ್ಮಾನಿಸಲಾಗಿದ್ದು ಜಾಗತೀಕರಣ ಮತ್ತು ಭಾಷಾ ಬಿಕ್ಕಟ್ಟು ಹಾಗು ವಲಸೆ ಕನ್ನಡಿಯಾಗರು ಮತ್ತು ಸಾಂಸ್ಕ್ರತಿಕ ಬಿಕ್ಕಟ್ಟು ಈ ವಿಚಾರದ ಬಗೆಗೂ ಸಮ್ಮೇಳನದಲ್ಲಿ ವಿಚಾರ ಮಂಡಿಸಲಿದ್ದಾರೆ .

ಆಗಸ್ಟ್ 6ರಂದು ಈ ಎರಡು ದಿನಗಳ ಸಮ್ಮೇಳನಕ್ಕೆ ಕನ್ನಡ ನಾಡು,ನುಡಿ ,ಶ್ರೀಮಂತ ಕಲೆ,ಇತಿಹಾಸಗಳನ್ನು ಬಿಂಬಿಸುವ ವರ್ಣರಂಜಿತ ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ತೆರೆ ಬೀಳಲಿದೆ . ಸಮಾರೋಪ ಸಮಾರಂಭದಲ್ಲಿ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು .ಟಿ .ಖಾದರ್ ಮತ್ತು ರಾಜ್ಯ ಸಭಾ ಸದಸ್ಯ ಎಲ್ ಹನುಮಂತಯ್ಯರವರು ಪಾಲ್ಗೊಳ್ಳಲಿದ್ದಾರೆ . ಈ ಎರಡೂ ದಿನಗಳ ಸಮ್ಮೇಳನದ ಅಧ್ಯಕ್ಷ ಸ್ಥಾನವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ ಮನು ಬಳಿಗಾರ್ ರವರು ಅಲಂಕರಿಸಲಿದ್ದಾರೆ .

ಮುತ್ತುಗಳ ದ್ವೀಪದಲ್ಲಿ ಮತ್ತೊಮ್ಮೆ ಕಸ್ತೂರಿ ಕನ್ನಡದ ಕಂಪು ಪಸರಿಸಲಿದ್ದು ನಾಡು ನುಡಿ ಕಲೆ ಸಂಸ್ಕ್ರತಿಗಳಿಗೆ ನಿರಂತರ ಕೊಡುಗೆಯನ್ನು ನೀಡುತ್ತಾ ಬಂದಿರುವ ಇಲ್ಲಿನ ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಸಂಘವು ಸಮ್ಮೇಳನದ ಪೂರ್ವಭಾವಿ ತಯಾರಿಯ ಪ್ರಕ್ರಿಯೆಯಲ್ಲಿ ನಿರತವಾಗಿದ್ದು ಈ ಸಮ್ಮೇಳನವು ದ್ವೀಪದ ಕನ್ನಡಿಗರ ಇತಿಹಾಸದಲ್ಲಿ ಇನ್ನೊಂದು ಮೈಲಿ ಗಲ್ಲಾಗಲಿದೆ . ದ್ವೀಪದ ಎಲ್ಲಾ ಕನ್ನಡಿಗರಿಗೂ ಸಮ್ಮೇಳನಕ್ಕೆ ಮುಕ್ತ ಪ್ರವೇಶವಿದ್ದು ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮ್ಮೇಳನವನ್ನು ಯಶಸ್ವೀ ಮಾಡುವುದರ ಜೊತೆಗೆ ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಕನ್ನಡ ಸಂಘದ ಅಧ್ಯಕ್ಷರಾದ ಶ್ರೀ ಪ್ರದೀಎಫ್ ಶೆಟ್ಟಿ ಯವರು ಇತ್ತೀಚೆಗೆ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಕರೆ ನೀಡಿದರು. ಸಮ್ಮೇಳನದ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಶ್ರೀ ಪ್ರದೀಪ್ ಶೆಟ್ಟಿ ಯವರನ್ನು ದೂರವಾಣಿ ಸಂಖ್ಯೆ 39147114 ಮುಖೇನ ಸಂಪರ್ಕಿಸಬಹುದು .

ವರದಿ- ಕಮಲಾಕ್ಷ ಅಮೀನ್

Comments are closed.