ಕರ್ನಾಟಕ

‘ಬಿಜೆಪಿಗೆ ಹೆದರಿ ಕಾಂಗ್ರೆಸ್​​ ತೊರೆಯಬೇಡ’: ‘ಆನಂದ್​​ ಸಿಂಗ್’​ಗೆ ಸಿದ್ದರಾಮಯ್ಯ

Pinterest LinkedIn Tumblr


ಬೆಂಗಳೂರು: ಕಾಂಗ್ರೆನ್​ನಲ್ಲಿ​ ಹಲವರ ವಿರೋಧದ ನಡುವೆಯೂ ನಿಮಗೆ ಟಿಕೆಟ್​​ ಕೊಡಿಸಿ ಗೆಲ್ಲಿಸಿದ್ದೇನೆ. ಯಾವುದೇ ಕಾರಣಕ್ಕೂ ಬಿಜೆಪಿಗೆ ಹೆದರಿ ಕಾಂಗ್ರೆಸ್​​ ತೊರೆಯಬೇಡಿ. ಅಲ್ಲದೇ ಬಿಜೆಪಿ ಪಕ್ಷದ ಬೆದರಿಕೆಗಳಿಗೆ ಜಗ್ಗಬೇಡಿ, ನಾನು ನಿಮ್ಮೊಂದಿಗೆ ಇರುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಶಾಸಕ ಆನಂದ್​ ಸಿಂಗ್​ಗೆ ಧೈರ್ಯ ತುಂಬಿದ್ದಾರೆ.

ಕಾವೇರಿ ನಿವಾಸಕ್ಕೆ ಇಂದು ಶಾಸಕ ಆನಂದ್​ ಸಿಂಗ್​ ಸೇರಿದಂತೆ ಸಚಿವ ಜಮೀರ್​​ ಅಹಮ್ಮದ್​ ಖಾನ್ ತಂಡ​​ ತೆರಳಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಜತೆಗೆ ಕಾಂಗ್ರೆಸ್​​ ಶಾಸಕರ ರಾಜಕೀಯ ಚರ್ಚೆ ಬಿರುಸುಗೊಂಡಿದೆ. ಈ ವೇಳೆ ನಿಮ್ಮನ್ನು ತುಂಬಾ ಕಷ್ಟಪಟ್ಟು ಗೆಲ್ಲಿಸಲಾಗಿದೆ. ಹೀಗಾಗಿ ಪಕ್ಷ ಬಿಡಬೇಡಿ ಎಂದು ಸಿದ್ದರಾಮಯ್ಯ ಮನವೊಲಿಕೆಗೆ ಮುಂದಾಗಿದ್ದಾರೆ.

ಮೈತ್ರಿ ಸರ್ಕಾರ ಅಸ್ಥಿತ್ವಕ್ಕೆ ಬರುವ ಕೆಲವೇ ಗಂಟೆಗಳ ಮುನ್ನ ಕಾಂಗ್ರೆಸ್ ಪಾಳಯದಲ್ಲಿ ಆಪರೇಷನ್ ಕಮಲ ಭೀತಿಯಿತ್ತು. ವಿಧಾನಸಭೆ ಅಧಿವೇಶನ ಕರೆದು ವಿಶ್ವಾಸಮತ ಯಾಚನೆ ಮಾಡುವ ಸಂದರ್ಭದಲ್ಲಿ ಕಾಂಗ್ರೆಸ್​ ಶಾಸಕರಾದ ಆನಂದ್ ಸಿಂಗ್ ಮತ್ತು ಪ್ರತಾಪ್ ಗೌಡ ಪಾಟೀಲ್ ನಾಪತ್ತೆಯಾಗಿದ್ದರು. ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಕಾಂಗ್ರೆಸ್​​ ಪಾಳಯದಲ್ಲಿ ಆಂತಕ ಮೂಡಿತ್ತು.

ಬಳಿಕ ಡಿಕೆಶಿ ಬ್ರದರ್ಸ್​​ ನಡೆಸಿದ ಕಾರ್ಯಾಚರಣೆ ಫಲವಾಗಿ ವಿಧಾನಸಭೆಗೆ ಆಗಮಿಸಿ ಶಾಸಕರಾಗಿ ಇಬ್ಬರು ಪ್ರಮಾಣ ವಚನ ಸ್ವೀಕರಿಸಿದರು. ಆನಂದ್​​ ಸಿಂಗ್​​ ಮತ್ತು ಪ್ರತಾಪ್​ ಗೌಡ ಪಾಟೀಲ್​​ ಇಬ್ಬರು ನಾಯಕರಿಗೆ ಸಚಿವ ಡಿಕೆ ಶಿವಕುಮಾರ್​​ ಪಕ್ಷದ ಪರವಾಗಿ ವಿಪ್ ಜಾರಿ ಮಾಡಲಾಗಿತ್ತು.

ಬಿಜೆಪಿಗೆ ಹೋಗಲಿದ್ದಾರೆ ಎಂಬ ವಿಚಾರಕ್ಕೆ ಇಂಬು ನೀಡುವಂತೆ ಡಿಕೆ ಶಿವಕುಮಾರ್ ಅವರು ಮತ್ತೆ ಆನಂದ್ ಸಿಂಗ್​ರನ್ನು ಭೇಟಿ ಮಾಡಿದ್ದರು. ಯಾವುದೇ ಕಾರಣಕ್ಕೂ ಬಿಜೆಪಿಯತ್ತ ಮುಖ ಮಾಡದಂತೆ ಕಿವಿಮಾತು ಹೇಳಿದ್ದರು. ಸುಮಾರು ಒಂದು ಗಂಟೆಗೂ ಹೆಚ್ಚು ಹೊತ್ತು ಚರ್ಚೆ ನಡೆಸಿದರು.

ಈ ವೇಳೆ ಆನಂದ್ ಸಿಂಗ್​ಗೆ ಯಾವುದೇ ಕಾರಣಕ್ಕೂ ಮತ್ತೆ ಬಿಜೆಪಿಗೆ ಹೋಗಬೇಡಿ. ನೀವು ಹಿರಿಯ ಶಾಸಕ ಎಂದು ಪಕ್ಷಕ್ಕೆ ತಿಳಿದಿದೆ. ಪಕ್ಷದಲ್ಲಿ ಖಂಡಿತಾ ನಿನಗೆ ಸ್ಥಾನಮಾನ ದೊರೆಯುತ್ತದೆ. ಯಾವುದೇ ಆಮಿಷ ಮತ್ತು ಬೆದರಿಕೆಗಳಿಗೆ ಹೆದರಬೇಡ. ನಿನ್ನೊಂದಿಗೆ ನಾವಿದ್ದೇವೆ ಎಂದು ಡಿಕೆ ಶಿವಕುಮಾರ್ ಭರವಸೆ ನೀಡಿದ್ದರು.

ಈಗ ಮತ್ತೆ ಮೈತ್ರಿ ಸರ್ಕಾರದ ಅಸ್ತಿತ್ವದ ಬಗ್ಗೆ ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್​​ ಪಾಳಯದಲ್ಲಿ 20ಕ್ಕೂ ಹೆಚ್ಚು ಶಾಸಕರು ಬಿಜೆಪಿಯತ್ತ ಮುಖ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ, ಆನಂದ್​​ ಸಿಂಗ್​ ಜತೆಗೆ ಮಾತಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಕಾಂಗ್ರೆಸ್​​ ತೊರೆಯಬೇಡ ಎಂದು ತಾಖೀತು ಮಾಡಿದ್ದಾರೆ.

Comments are closed.