
ಬೆಂಗಳೂರು: ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ವಿರುದ್ಧ ಮತ್ತೊಂದು ದೋಷಾರೋಪ ಪಟ್ಟಿ ಕೋರ್ಟ್ಗೆ ಸಲ್ಲಿಕೆಯಾಗಿದೆ. ಅತ್ಯಾಚಾರ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿದ್ದ ಸಿಐಡಿ ಪೊಲೀಸರ ತಂಡ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದೆ. ಈ ಮೂಲಕ ರಾಘವೇಶ್ವರ ಭಾರತೀ ಸ್ವಾಮಿಗೆ ಮತ್ತೆ ಸಂಕಷ್ಟ ಎದುರಾಗಿದೆ.
ಈ ಹಿಂದೆ ರಾಮಕಥಾ ಗಾಯಕಿ ನೀಡಿದ್ದ ಅತ್ಯಾಚಾರ ದೂರಿನ ಸಂಬಂಧ ಸಿಐಡಿ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಅದಾದ ನಂತರ ‘ಪರಸ್ಪರ ಒಪ್ಪಿಗೆಯ ದೈಹಿಕ ಸಂಪರ್ಕ’ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ ದೋಷಾರೋಪ ಪಟ್ಟಿಯಲ್ಲಿ ಹೊರಿಸಿದ್ದ ಆರೋಪಗಳಿಂದ ಸ್ವಾಮೀಜಿಯನ್ನು ಮುಕ್ತಗೊಳಿಸಿತ್ತು.
ಇದೀಗ ಸಿಐಡಿ ಡಿವೈಎಸ್ಪಿ ಧರಣೀಶ್ ನೇತೃತ್ವದ ತನಿಖಾ ತಂಡ ರಾಮಕಥಾ ಗಾಯಕಿ ನೀಡಿದ್ದ ದೂರಿನ ನಂತರದಲ್ಲಿ ಭಕ್ತೆಯೊಬ್ಬರು ದಾಖಲಿಸಿದ್ದ ದೂರಿನ ಸಂಬಂಧ ತನಿಖೆ ನಡೆಸಿ, ಚಾರ್ಜ್ಶೀಟ್ ಸಲ್ಲಿಸಿದೆ. ಉನ್ನತ ಮೂಲಗಳ ಮಾಹಿತಿ ಪ್ರಕಾರ ಎರಡು ದಿನಗಳ ಹಿಂದೆಯೇ ಸಿಐಡಿ ಸಲ್ಲಿಸಿದೆ ಆದರೆ ಮಾಧ್ಯಮಕ್ಕೆ ಮಾಹಿತಿ ನೀಡಲು ನಿರಾಕರಿಸುತ್ತಿದೆ.
ನ್ಯೂಸ್ 18 ಕನ್ನಡ ತನಿಖಾಧಿಕಾರಿ ಧರಣೀಶ್, ಸಿಐಡಿ ಡಿಜಿಪಿ ಪ್ರವೀನ್ ಸೂದ್, ಸಿಐಡಿ ಎಡಿಜಿಪಿ ಕೆಎಸ್ಆರ್ ಚರಣ್ ರೆಡ್ಡಿ ಅವರನ್ನು ಪ್ರಯತ್ನಿಸಿತಾದರೂ ಮಾಹಿತಿ ಲಭ್ಯವಾಗಲಿಲ್ಲ. ಹೆಸರು ಹೇಳಲು ಇಚ್ಛಿಸದ ಉನ್ನತ ಮೂಲದ ಪ್ರಕಾರ, ಐಪಿಸಿ 323 (ಸ್ವಯಂಪ್ರೇರಣೆಯಿಂದ ವ್ಯಕ್ತಿಗೆ ಹಾನಿ), 376 (ಅತ್ಯಾಚಾರ), 376 (2) (F) (ಹದಿನಾರು ವರ್ಷದೊಳಗಿನ ಯುವತಿಯ ಮೇಲೆ ಅತ್ಯಾಚಾರ), 498A (ಪತಿ ಅಥವಾ ಪತಿಯ ಸ್ನೇಹಿತರಿಂದ ಲೈಂಗಿಕ ದೌರ್ಜನ್ಯ ಮತ್ತು ಇನ್ನೂ ಕೆಲ ಭಾರತೀಯ ದಂಡ ಸಂಹಿತೆಯ ಕಾಯಿದೆ ಅಡಿಯಲ್ಲಿ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ ಎನ್ನಲಾಗಿದೆ.
ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಸಿಐಡಿ ತನಿಖಾ ತಂಡ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದೆ ಎಂದು ಮೂಲಗಳು ಮಾಹಿತಿ ನೀಡುತ್ತವೆ. ರಾಘವೇಶ್ವರ ಭಾರತಿ ಸೇರಿದಂತೆ ಒಟ್ಟೂ ಏಳು ಜನರ ವಿರುದ್ಧ ಸಿಐಡಿ ದೋಷಾರೋಪ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಆಗಸ್ಟ್ 29, 2015ರಂದು ಉತ್ತರ ಕನ್ನಡ ಮೂಲದ ಮಹಿಳೆಯೊಬ್ಬರು ಸಾಮೀಜಿ ವಿರುದ್ಧ ದೂರು ನೀಡಿದ್ದರು. ಗಿರಿನಗರ ಪೊಲೀಸ್ ಠಾಣೆಗೆ ಸಂತ್ರಸ್ತೆ ನೀಡಿದ್ದ ದೂರಿನಲ್ಲಿ ಸ್ವಾಮೀಜಿ ಅತ್ಯಾಚಾರ ಮಾಡಿದ್ದಾರೆ ಎಂಬುದಾಗಿ ಉಲ್ಲೇಖಿಸಿದ್ದರು. ಪ್ರಕರಣದ ಎಫ್ಐಆರ್ ಆದ ನಂತರ ಪ್ರಕರಣವನ್ನು ಸರ್ಕಾರ ಸಿಐಡಿಗೆ ವರ್ಗಾವಣೆ ಮಾಡಿತ್ತು. ಸುಮಾರು ಮೂರು ವರ್ಷಗಳ ನಂತರ ಪ್ರಕರಣ ಸಂಬಂಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಮಹಿಳಾ ಹಕ್ಕುಗಳ ಕಾರ್ಯಕರ್ತೆಯೊಬ್ಬರು, ಪೊಲೀಸರು ಬೇರೆ ಪ್ರಕರಣಗಳಲ್ಲಿ ಮಾಹಿತಿಯೇನು, ಪೂರ್ಣ ದೋಷಾರೋಪ ಪಟ್ಟಿಯ ಪ್ರತಿಯನ್ನು ಬೇಕಾದರೂ ಕೊಟ್ಟು ಬಿಡುತ್ತಾರೆ. ಆದರೆ ಈ ಪ್ರಕರಣದಲ್ಲಿ ದೋಷಾರೋಪ ಪಟ್ಟಿ ಆಗಿದೆಯಾ ಇಲ್ಲವಾ ಎಂಬುದನ್ನೂ ಸರಿಯಾಗಿ ಸ್ಪಷ್ಟ ಪಡಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
Comments are closed.