ಕರ್ನಾಟಕ

ಫೇಸ್‌ಬುಕ್‌ನಲ್ಲಿ ಸಿಕ್ಕ ಆಭರಣ ಕಳ್ಳಿ

Pinterest LinkedIn Tumblr


ಬೆಂಗಳೂರು: ಫೇಸ್‌ಬುಕ್‌, ವಾಟ್ಸಾಪ್‌ಗ್ಳ ಸ್ಟೇಟಸ್‌ಗಳಲ್ಲಿ ತಮ್ಮ ವಿವಿಧ ಭಂಗಿಗಳ ಚಿತ್ರಗಳನ್ನು ಹಾಕಿಕೊಳ್ಳುವುದು ಹೆಚ್ಚಿನವರ ಖಯಾಲಿ. ಇದು ಕಳ್ಳಿಯೊಬ್ಬಳನ್ನು ಸೆರೆಮನೆಗೆ ತಳ್ಳಿ, ಕಂಬಿ ಎಣಿಸುವಂತೆ ಮಾಡಿದ ಘಟನೆ ನಗರದಲ್ಲಿ ನಡೆದಿದೆ.

ಶುಶ್ರೂಷೆಗೆಂದು ಬಂದು ವಿಶ್ವಾಸಗಳಿಸಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕದ್ದು ಕಣ್ಮರೆಯಾಗಿದ್ದ ಮಹಿಳೆ ಫೇಸ್‌ಬುಕ್‌ ಮತ್ತು ವಾಟ್ಸ್‌ಆ್ಯಪ್‌ ಸಾಮಾಜಿಕ ಜಾಲತಾಣಗಳ ಸ್ಟೇಟಸ್‌ಗಳಲ್ಲಿ ತಾನು ಕದ್ದು ಸಂಪಾದಿಸಿದ ಹಣದಲ್ಲಿ ಖರೀದಿಸಿದ ಒಡವೆಗಳನ್ನು ಧರಿಸಿಕೊಂಡಿರುವ ಫೋಟೋ ಪ್ರದರ್ಶಿಸಿ ವರ್ಷದ ಬಳಿಕ ಪೊಲೀಸರ ಅತಿಥಿಯಾಗಿದ್ದಾಳೆ.

ಬಂಧಿತ ಮಹಿಳೆ ಶಿವಮೊಗ್ಗ ಮೂಲದ ಕವಿತಾ (26) ಎಂದು ಗುರುತಿಸಲಾಗಿದೆ. ಆರೋಪಿ ಕವಿತಾ, ಶ್ರೀರಾಮಪುರ 3ನೇ ಕ್ರಾಸ್‌ ನಿವಾಸಿ ಖಾಸಗಿ ಕಂಪನಿಯ ನಿವೃತ್ತ ಅಧಿಕಾರಿ ಸತ್ಯನಾರಾಯಣರಾವ್‌ ಎಂಬುವರ ಮನೆಯಲ್ಲಿ ಕಳ್ಳತನ ಮಾಡಿದ್ದಳು. ಈಕೆಯಿಂದ 5 ಲಕ್ಷ ರೂ. ಮೌಲ್ಯದ 150 ಗ್ರಾಂ ಚಿನ್ನಾಭರಣ ಮತ್ತು 2 ಕೆ.ಜಿ. ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂಡಲಪಾಳ್ಯ ನಿವಾಸಿ ಕವಿತಾ ವಿವಾಹವಾಗಿದ್ದು, ಮೊದಲ ಪತಿಯಿಂದ ದೂರವಾಗಿದ್ದಳು. ಬಳಿಕ ಸುರೇಶ್‌ ಎಂಬಾತನನ್ನು ಎರಡನೇ ಮದುವೆಯಾಗಿದ್ದು, ಈತ ಯಾವುದೇ ಕೆಲಸಕ್ಕೆ ಹೋಗುತ್ತಿಲ್ಲ. ಹೀಗಾಗಿ ಮನೆಯ ಶುಶ್ರೂಷಕಿಯರನ್ನು ನೇಮಿಸುವ ಖಾಸಗಿ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದರು. ಕಾಯಿಲೆಯಿಂದ ಬಳಲುತ್ತಿದ್ದ ಸತ್ಯನಾರಾಯಣರಾವ್‌ ಪತ್ನಿಗೆ ಆರೈಕೆಗಾಗಿ ಆರೋಪಿ 2017 ಫ್ರೆಬ್ರವರಿಯಲ್ಲಿ ಕೆಲಸಕ್ಕೆಂದು ಸೇರಿಕೊಂಡಿದ್ದಾಳೆ. ಈ ವೇಳೆ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ನೋಡಿ ಕಳವು ಮಾಡಲು ನಿರ್ಧರಿಸಿದ್ದಳು. ಈ ದುರುದ್ದೇಶದಿಂದಲೇ ಆರೋಪಿ ಒಮ್ಮೆ ಮನೆಯ ಹಿಂಬಾಗಿಲ ಕೀ ಕಳವು ಮಾಡಿದ್ದಳು. ಮನೆಯಲ್ಲಿ ಎರಡೂ ಕೀ ಇದ್ದುದರಿಂದ ಸತ್ಯನಾರಾಯಣರಾವ್‌ ಕಳುವಾಗಿರುವ ಕೀ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಆಸ್ಪತ್ರೆಗೆ ಹೋದಾಗ ಕಳವು
ಈ ನಡುವೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿಯನ್ನು ಸತ್ಯನಾರಾಯಣರಾವ್‌ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆರೈಕೆಗಾಗಿ ಎರಡು ದಿನಗಳ ಕಾಲ ಕವಿತಾ ಆಸ್ಪತ್ರೆಯಲ್ಲೇ ತಂಗಿದ್ದಳು. ನಂತರ ಮನೆಗೆ ಹೋಗಿ ಸ್ನಾನ ಮಾಡಿ ಬರುತ್ತೇನೆ ಎಂದು ಹೇಳಿ ನೇರವಾಗಿ ಸತ್ಯನಾರಾಯಣರಾವ್‌ ಮನೆಗೆ ಬಂದ ಆರೋಪಿ ಹಿಂಬಾಗಿಲ ಮೂಲಕ ಒಳ ಪ್ರವೇಶಿಸಿ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ಕಳವು ಮಾಡಿ ಪರಾರಿಯಾಗಿದ್ದಳು. ಅನಂತರ ಯಾರಿಗೂ ತಿಳಿಯದ್ದಂತೆ ಮತ್ತೆ ಆಸ್ಪತ್ರೆಗೆ ಹೋಗಿದ್ದಾಳೆ.

ಆಸ್ಪತ್ರೆಯಿಂದ ವಾಪಸ್‌ ಬಂದ ಸತ್ಯನಾರಾಯಣರಾವ್‌ಗೆ ಮನೆಯಲ್ಲಿ ಕಳ್ಳತನವಾಗಿರುವುದು ತಿಳಿದು ಶ್ರೀರಾಮಪುರ ಠಾಣೆಗೆ ದೂರು ನೀಡಿದ್ದರು. ಆದರೆ, ಯಾರ ಮೇಲೂ ಅನುಮಾನ ವ್ಯಕ್ತಪಡಿಸಿರಲಿಲ್ಲ. ಜತೆಗೆ ಘಟನೆ ನಡೆದ ತಿಂಗಳ ಬಳಿಕ ಆರೋಪಿ ಕೆಲಸ ಬಿಟ್ಟಿದ್ದಳು. ಆದರೂ ಕವಿತಾಳನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ಘಟನೆ ವೇಳೆ ಮನೆಗೆ ಹೋಗಿದ್ದಾಗಿ ಹೇಳಿದ್ದಳು. ಹೀಗಾಗಿ ಈಕೆ ಮೇಲೆ ಯಾವುದೇ ಅನುಮಾನ ಇರಲಿಲ್ಲ. ಆದರೆ, ಕೆಲ ತಿಂಗಳ ಬಳಿಕ ಸತ್ಯನಾರಾಯಣರಾವ್‌ ಆರೋಪಿ ಮೇಲೆ ಅನುಮಾನ ಇರುವುದಾಗಿ ಮೌಖೀಕವಾಗಿ ಆರೋಪಿಸಿದ್ದರು ಎಂದು ಪೊಲೀಸರು ತಿಳಿಸಿದರು.

ಫೇಸ್‌ಬುಕ್‌ ನೀಡಿದ ಸುಳಿವು
ಕೆಲ ತಿಂಗಳ ಹಿಂದೆ ಕವಿತಾ ತಾನು ಕಳವು ಮಾಡಿರುವ ಚಿನ್ನಾಭರಣಗಳನ್ನು ಮಾರಾಟ ಮಾಡಿ ಬೇರೆ ಚಿನ್ನ ಖರೀದಿಸಿದ್ದಳು. ಅವುಗಳನ್ನು ಧರಿಸಿ ತನ್ನ ಫೇಸ್‌ಬುಕ್‌ ಮತ್ತು ವಾಟ್ಸ್‌ಆ್ಯಪ್‌ಗ್ಳಲ್ಲಿ ಫೋಟೋಗಳನ್ನು ಪೋಸ್ಟ್‌ ಮಾಡಿದ್ದಳು. ಇದೇ ವೇಳೆ ಆರೋಪಿಯ ಮೇಲೆ ಮೊದಲಿನಿಂದಲೂ ಅನುಮಾನ ವ್ಯಕ್ತಪಡಿಸಿದ್ದ ಪೊಲೀಸರು ಈಕೆಯ ದಿಢೀರ್‌ ಬೆಳವಣಿಗೆಯನ್ನು ಗಮನಿಸಿ ಕವಿತಾಳನ್ನು ಠಾಣೆಗೆ ಕರೆಸಿ ತೀವ್ರವಾಗಿ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾಳೆ. ಈ ಕೃತ್ಯಕ್ಕೆ ಪತಿ ಸುರೇಶ್‌ ಕೂಡ ಸಹಕಾರ ನೀಡಿದ್ದು, ಈತನನ್ನು ವಶಕ್ಕೆ ಪಡೆಯಲಾಗಿದೆ. ಕಳವು ಮಾಡಿದ ಚಿನ್ನಾಭರಣಗಳನ್ನು ಶಿವಮೊಗ್ಗದಲ್ಲಿ ಮಾರಾಟ ಮಾಡಿದ್ದಾಗಿ ಹೇಳಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.