ಕರ್ನಾಟಕ

ಕಾಂಗ್ರೆಸ್​ ರಾಮನಗರ ಬಿಟ್ಟುಕೊಟ್ಟರೆ ನಾವು ಸುಮ್ಮನಿರಲ್ಲ

Pinterest LinkedIn Tumblr


ರಾಮನಗರ: ರಾಜ್ಯದಲ್ಲಿ ಏರ್ಪಟ್ಟಿರುವ ಜೆಡಿಎಸ್ ಜತೆಗಿನ ಮೈತ್ರಿಯನ್ನು ನಾನು ಸೇರಿದಂತೆ ಕಾಂಗ್ರೆಸ್​ನ ನಾಯಕರು ಯಾರೂ ಒಪ್ಪಿಕೊಂಡಿಲ್ಲ ಎಂದು ಪರಿಷತ್​ ಸದಸ್ಯ ಸಿ.ಎಂ.ಲಿಂಗಪ್ಪ ಹೇಳಿದ್ದಾರೆ.

ರಾಮನಗರದ ಜಿಲ್ಲಾ ಕಾಂಗ್ರೆಸ್​ ಕಚೇರಿಯಲ್ಲಿ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಲಿಂಗಪ್ಪ, “ರಾಜ್ಯದಲ್ಲಿ ಸರ್ಕಾರ ರಚಿಸಲು ಕಾಂಗ್ರೆಸ್​ ಮತ್ತು ಜೆಡಿಎಸ್​ ಮೈತ್ರಿ ಮಾಡಿಕೊಂಡಿತು. ಆದರೆ, ಈ ಮೈತ್ರಿಯನ್ನು ನಾನೂ ಸೇರಿದಂತೆ ಕಾಂಗ್ರೆಸ್ ಪಕ್ಷದ ಮನಸ್ಸುಗಳು ಒಪ್ಪಿಕೊಳ್ಳಲು ಸಿದ್ಧವಿಲ್ಲ. ಒಂದು ವೇಳೆ ರಾಮನಗರ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜೆಡಿಎಸ್​ನೊಂದಿಗೆ ಮೈತ್ರಿ ಮಾಡಿಕೊಂಡರೆ ವಿರೋಧ ಎದುರಿಸಬೇಕಾಗುತ್ತದೆ. ಪಕ್ಷದ ನಿರ್ಧಾರದ ವಿರುದ್ಧವೇ ಚುನಾವಣೆಗೆ ಸ್ಪರ್ಧಿಸುವ ಮೂಲಕ ಮೈತ್ರಿಗೆ ನಮ್ಮ ಸಹಮತ ಇಲ್ಲ ಎಂದು ಹೇಳುತ್ತೇವೆ,” ಎಂದು ಲಿಂಗಪ್ಪ ಹೇಳಿದ್ದಾರೆ.

ರಾಮನಗರ ಜಿಲ್ಲೆಯ ಮಟ್ಟಿಗೆ ಸ್ಥಳೀಯ ನಾಯಕರೆನಿಸಿಕೊಂಡಿರುವ ಸಿ.ಎಂ. ಲಿಂಗಪ್ಪ, ರಾಮನಗರ ವಿಧಾನಸಭೆಯ ಮಾಜಿ ಶಾಸಕರೂ ಹೌದು, 1997ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ದೇವೇಗೌಡರು, ಪ್ರಧಾನಮಂತ್ರಿಯಾದ ನಂತರ ಅವರಿಂದ ತೆರವಾಗಿದ್ದ ರಾಮನಗರ ವಿಧಾನಸಭೆ ಕ್ಷೇತ್ರದಲ್ಲಿ ಜನತಾದಳದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಚಿತ್ರನಟ ಅಂಬರೀಷ್​ ಅವರನ್ನು ಕಾಂಗ್ರೆಸ್​ ಅಭ್ಯರ್ಥಿಯಾಗಿದ್ದ ಸಿಎಂ ಲಿಂಗಪ್ಪ ಸೋಲಿಸಿದ್ದರು. ಆದರೆ, 2004ರ ವಿಧಾನಸಭೆ ಚುನಾವಣೆಯಲ್ಲಿ ಎಚ್​.ಡಿ. ಕುಮಾರಸ್ವಾಮಿ ಅವರಿಂದ ಪರಾಭವಗೊಂಡಿದ್ದರು. ಸಿಂ.ಎ. ಲಿಂಗಪ್ಪ ಸ್ಥಳೀಯ ಮಟ್ಟದಲ್ಲಿ ಜೆಡಿಎಸ್​ ವಿರುದ್ಧವೇ ರಾಜಕಾರಣ ಮಾಡಿಕೊಂಡು ಬಂದವರು.

Comments are closed.