ಕರ್ನಾಟಕ

ಬೆಲ್ಟ್ ಬಿಚ್ಚಿ ಹೊಡಿತೀನಿ, ಏನ್ ಮಾಡ್ತೀನಿ ನೋಡು-ಮಹಿಳೆಗೆ ಶಾಸಕ ವಿ.ಸೋಮಣ್ಣ ಅವಾಜ್

Pinterest LinkedIn Tumblr


ಬೆಂಗಳೂರು: ಬಿಜೆಪಿಯ ಹಿರಿಯ ನಾಯಕ, ಗೋವಿಂದರಾಜ ನಗರ ಶಾಸಕ ವಿ.ಸೋಮಣ್ಣ ಅವರು, ಮಹಿಳೆಗೆ ಏಕವಚನದಲ್ಲಿಯೇ ಕೆಳಮಟ್ಟದ ಪದ ಪ್ರಯೋಗಿಸಿ ನಿಂದಿಸಿರುವ ವಿಡಿಯೋ ವೈರಲ್ ಆಗಿದೆ.

ರಾಜಕಾರಣದಲ್ಲಿ ಸಭ್ಯ, ಮೃದು ಸ್ವಭಾವದ ನಾಯಕ ಅಂತಾ ಗುರುತಿಸಿಕೊಳ್ಳುವ ವಿ.ಸೋಮಣ್ಣರ ಕೆಳಮಟ್ಟದ ಮಾತುಗಳನ್ನು ಕೇಳಿದ ಜನರು ಶಾಕ್ ಆಗಿದ್ದಾರೆ. ಚುನಾವಣೆ ಸಮಯದಲ್ಲಿ ಮಹಿಳೆಯರಿಗೆ ಅಮ್ಮಾ.. ತಾಯಿ ಎಂದು ಕರೆಯುವ ರಾಜಕೀಯ ನಾಯಕರು ಸಹಾಯ ಕೇಳಲು ಹೋದಾಗ ಈ ರೀತಿಯ ಪದ ಪ್ರಯೋಗ ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ವಿಡಿಯೋದಲ್ಲಿ ಏನಿದೆ?: ಶಾಲಾ ಕಟ್ಟಡದ ವಿಚಾರಕ್ಕಾಗಿ ಕೆಲ ಸ್ಥಳೀಯ ಮಹಿಳೆಯರು ಶಾಸಕರನ್ನು ಭೇಟಿ ಆಗಿದ್ದರು. ಇದೇ ವೇಳೆ ಶಾಸಕರು, ಈಯಮ್ಮ ಏನ್ ಕಡಿಮೆ ಇಲ್ಲ, ಬೆಲ್ಟ್ ಬಿಚ್ಚಿ ಹೊಡೀತಿನಿ ನಿಂಗೆ, ಇರು ಏನ್ ಮಾಡ್ತೀನಿ ನೋಡು ಎಂದು ಅವಾಜ್ ಹಾಕಿದ್ದಾರೆ.

ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ವಿ.ಸೋಮಣ್ಣ, ನಾನು 40 ವರ್ಷದಿಂದ ರಾಜಕೀಯದಲ್ಲಿ ಇದ್ದೇನೆ. ವಿಡಿಯೋದಲ್ಲಿರುವ ಧ್ವನಿ ನನ್ನದಲ್ಲ, ಯಾರೋ ಎಡಿಟ್ ಮಾಡಿರುವ ಕೆಲಸ ಇದಾಗಿದ್ದು, ಉದ್ದೇಶ ಪೂರ್ವಕವಾಗಿ ನನ್ನ ತೇಜೋವಧೆಗಾಗಿ ವಿಡಿಯೋ ಮಾಡಿಸಲಾಗಿದೆ ಎಂದು ಆರೋಪಿಸಿದ್ದಾರೆ. 40 ವರ್ಷಗಳ ನನ್ನ ರಾಜಕಾರಣದಲ್ಲಿ ಎಂದಿಗೂ ನಾನು ಇಷ್ಟು ಕೆಳಮಟ್ಟದ ಪದಗಳನ್ನು ಬಳಸಿಲ್ಲ. ಅದರಲ್ಲಿಯೂ ಮಹಿಳೆಯರ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದೇನೆ. ಪ್ರತಿದಿನ ಕಚೇರಿಗೆ ಆಗಮಿಸಿ ಸಾವಿರಾರು ಜನರ ಸಮಸ್ಯೆಗಳನ್ನು ಕೇಳಿ ಬಗೆಹರಿಸುವ ಪ್ರಯತ್ನ ಮಾಡುತ್ತೇನೆ.

ನನ್ನ ಕಚೇರಿಗೆ ಸುಮಾರು 20 ರಿಂದ 30 ಮಹಿಳೆಯರು ಬಂದಿದ್ದರು. ಶಾಲಾ ಆವರಣದಲ್ಲಿರುವ ದೇವಸ್ಥಾನಕ್ಕೆ ಕಾಂಪೌಂಡ್ ಕಟ್ಟಬೇಕೆಂದು ಕೇಳಿಕೊಂಡಿದ್ದರು. ಕಾಂಪೌಂಡ್ ನಿರ್ಮಿಸುವುದರಿಂದ ಶಾಲೆಯ ಮಕ್ಕಳಿಗೆ ತೊಂದರೆ ಆಗಲಿದ್ದು, ದೇವಸ್ಥಾನಕ್ಕಾಗಿ ಬೇರೆ ಸ್ಥಳ ನಿಗದಿ ಮಾಡುತ್ತೇನೆ. ಸರ್ಕಾರದಿಂದ 10 ಲಕ್ಷ ರೂ.ಯನ್ನು ಸಹ ಕೊಡಿಸುತ್ತೇನೆ ಅಂತಾ ಹೇಳಿ ಕಳುಹಿಸಿದ್ದೆ ಎಂದು ಸೋಮಣ್ಣ ಅವರು ಸ್ಪಷ್ಟನೆ ನೀಡಿದ್ದಾರೆ.

ಮಾತು ಬದಲಿಸಿದ ಸೋಮಣ್ಣ: ವಿಡಿಯೋ ಕುರಿತು ಸ್ಪಷ್ಟನೆ ನೀಡುತ್ತಿದ್ದ ಶಾಸಕರು ಕ್ಷಣಾರ್ಧದಲ್ಲಿ ತಮ್ಮ ಮಾತುಗಳನ್ನು ಬದಲಿಸಿದ್ದಾರೆ. ಸ್ಪಷ್ಟನೆ ಆರಂಭದಲ್ಲಿ ನಾನು ಈ ಬಗ್ಗೆ ಸಿಬಿಐಗೆ ದೂರು ಸಲ್ಲಿಸುತ್ತೇನೆ ಅಂತಾ ಹೇಳಿದರು. ಕೊನೆಗೆ ನಾನು ಯಾವುದೇ ದೂರು ನೀಡಲ್ಲ ಅಂದರು. ನಾನೇನು ತಪ್ಪು ಮಾಡಿಲ್ಲ, ಅಲ್ಲಿರುವ ಧ್ವನಿ ನನ್ನದಲ್ಲ. ವಿಡಿಯೋ ವೈರಲ್ ಮಾಡಿರುವವರೇ ಅದಕ್ಕೆ ಸಾಕ್ಷ್ಯಾಧಾರ ಒದಗಿಸಲಿ. ಚುನಾವಣೆಯಲ್ಲಿ ಸೋತ ಹಿನ್ನೆಲೆಯಲ್ಲಿ ಕಾಂಗ್ರೆಸ್‍ನ ಮಾಜಿ ಶಾಸಕ ಪ್ರಿಯಾ ಕೃಷ್ಣ ಅವರೇ ಈ ವಿಡಿಯೋ ಮಾಡಿಸಿರುವ ಸಾಧ್ಯತೆಗಳಿವೆ ಎಂದು ಆರೋಪ ಮಾಡಿದರು.

ಇದೆಲ್ಲಾ ಸುಳ್ಳು ಅಂತಾದ್ರೆ, ವಿಡಿಯೋ ಮೂಲಕ ನಿಮ್ಮ ತೇಜೋವಧೆ ಆಗುತ್ತಿದ್ದರೆ ನೀವು ಯಾಕೆ ದೂರು ದಾಖಲಿಸಿಬರದು ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಯಾರು ಏನ್ ಬೇಕಾದರೂ ಮಾಡಿಕೊಳ್ಳಲಿ, ನಾನೇನು ತಲೆ ಕೆಡಿಸಿಕೊಳ್ಳಲ್ಲ. ವಿಡಿಯೋದಲ್ಲಿರುವ ಧ್ವನಿ ಮಾತ್ರ ನನ್ನದಲ್ಲ ಎಂಬುದನ್ನು ಮಾತ್ರ ಸ್ಪಷ್ಟಪಡಿಸುತ್ತೇನೆ. ಗೌರವ, ಸಂಸ್ಕಾರದಿಂದ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ ಅಂತಾ ಅಂದ್ರು.

Comments are closed.