ಕರ್ನಾಟಕ

ಅಗ್ಗದ ಐಫೋನ್‌ಗೆ ಮರುಳಾದ 2 ಕೋಟಿಯ ನಾಯಿಗಳ ಒಡೆಯ, 50 ಸಾವಿರ ರೂ. ದೋಖಾ

Pinterest LinkedIn Tumblr


ಬೆಂಗಳೂರು: ಕೋಟ್ಯಂತರ ಬೆಲೆಯ ನಾಯಿ ಮರಿಗಳನ್ನು ಖರೀದಿಸಿ ಸುದ್ದಿಯಾಗಿದ್ದ ಬೆಂಗಳೂರಿನ ವ್ಯಕ್ತಿಯೊಬ್ಬರು ಅಗ್ಗದ ಐಫೋನ್ ಆಸೆಗೆ ಬಿದ್ದು 50 ಸಾವಿರ ರೂಪಾಯಿ ಕಳೆದುಕೊಂಡಿದ್ದಾರೆ. ಸತೀಶ್ ಎಸ್ ಎಂಬವರು ಮೋಸಕ್ಕೊಳಗಾದ ವ್ಯಕ್ತಿ.

ಎರಡು ವರ್ಷಗಳ ಹಿಂದೆ ಸತೀಶ್ ಅವರು ಚೀನಾದಿಂದ ಕೊರಿಯನ್ ಡೋಸಾ ಮ್ಯಾಸ್ಟಿಫ್ ತಳಿಯ ಎರಡು ನಾಯಿ ಮರಿಗಳನ್ನು 2 ಕೋಟಿ ರೂಪಾಯಿ ನೀಡಿ ಖರೀದಿಸಿದ್ದರು. ಚೀನಾದಿಂದ ಬಂದಿಳಿದ ನಾಯಿ ಮರಿಗಳನ್ನು ಮನೆಗೆ ತರಲು ದುಬಾರಿ ಬೆಲೆಯ ರೋಲ್ಸ್ ರಾಯ್ ಮತ್ತು ರೇಂಜ್ ರೋವರ್ ಕಾರು ಕಳಿಸಿ ಸುದ್ದಿ ಮಾಡಿದ್ದರು. ಇಂಥ ಕೋಟ್ಯಧಿಪತಿ ವ್ಯಕ್ತಿ ಅಗ್ಗದ ಮೊಬೈಲ್ ಫೋನ್ ಆಸೆಗೆ ಬಿದ್ದು ಪಂಗನಾಮ ಹಾಕಿಸಿಕೊಂಡಿದ್ದಾರೆ.

ಹೌದು, 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸತೀಶ್ ಅವರ ಪುತ್ರ ಐಫೋನ್ ಎಕ್ಸ್ ಬೇಕೆಂದು ಪಟ್ಟು ಹಿಡಿದಿದ್ದ. ಮಗನ ಆಸೆ ಪೂರೈಸಬೇಕೆಂದು ಸತೀಶ್ ಅವರು ಸೆಕೆಂಡ್ ಹ್ಯಾಂಡ್ ಮೊಬೈಲ್ ಖರೀದಿಸಲು ಒಎಲ್‌ಎಕ್ಸ್ ಆನ್‌ಲೈನ್ ಮಾರುಕಟ್ಟೆ ಮೊರೆ ಹೋಗಿದ್ದಾರೆ.

ಇದೇ ವೇಳೆ ಭಾಸ್ಕರ್ ಎಂಬ ವ್ಯಕ್ತಿ ಐ-ಫೋನ್‌ನಂತೆ ಕಾಣುವ ವಿವೋ 9 ಮೊಬೈಲ್ ಮಾರುವ ಇಂಗಿತ ವ್ಯಕ್ತಪಡಿಸಿದ್ದು, ಸತೀಶ್ ಎಸ್ ಅವರನ್ನು ಸಂಪರ್ಕಿಸಿದ್ದ. ಇಬ್ಬರು ಮೊಬೈಲ್ ವ್ಯವಹಾರ ಸಂಬಂಧ ಕತ್ರಿಗುಪ್ಪೆ ಯುನಿವರ್ಸೆಲ್ಲ್ ಶೋ ರೂಮ್ ಹಿಂಭಾಗದಲ್ಲಿ ಭೇಟಿಯಾಗಿದ್ದರು.

ಸ್ಯಾಂಡಲ್ ವುಡ್ ನಟ ರವಿಚಂದ್ರನ್ ಪುತ್ರನಂತೆ ಕಾಣುತ್ತಿದ್ದ ಭಾಸ್ಕರ್, ಮಾತಿನಲ್ಲಿಯೇ ಸತೀಶ್ ಅವರನ್ನು ಮರಳು ಮಾಡಿದ್ದಾನೆ. ಭಾಸ್ಕರ್ ವಾಕ್ ಚಾತುರ್ಯಕ್ಕೆ ಮರುಳಾದ ಸತೀಶ್, ಮೊಬೈಲ್ ಪಡೆಯುವ ಮುನ್ನವೇ 50 ಸಾವಿರ ರೂಪಾಯಿ ನೀಡಿದ್ದಾರೆ. ಪಕ್ಕದ ಬೀದಿಯಲ್ಲಿರುವ ತನ್ನ ಮನೆಯಿಂದ ಮೊಬೈಲ್ ತಂದು ಕೊಡುತ್ತೇನೆ ಎಂದು ಹೇಳಿ ಹೋದ ಭಾಸ್ಕರ್ ವಾಪಸ್ ಬಾರದೇ ಟೋಪಿ ಹಾಕಿದ್ದಾನೆ. ಈ ಮೂಲಕ ಕೋಟ್ಯಂತರ ರೂಪಾಯಿ ನಾಯಿಯ ವಾರಸುದಾರನಾಗಿರುವ ಸತೀಶ್‌ ಅಗ್ಗದ ಮೊಬೈಲ್ ಹಿಂದೆ ಬಿದ್ದು ಮೋಸ ಹೋಗಿದ್ದಾರೆ.

ಘಟನೆ ಸಂಬಂಧ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.