ಕರ್ನಾಟಕ

ಮಹಾಭಾರತ ಕಾಲದ ದ್ವಾರಕಾನಗರದ ಉತ್ಖನನಕ್ಕೆ ಸ್ವಾಮಿ ಮನವಿ

Pinterest LinkedIn Tumblr


ಬೆಂಗಳೂರು: ಗುಜರಾತ್​ನಲ್ಲಿ ಸಮುದ್ರದಲ್ಲಿ ಮುಳುಗಡೆಯಾಗಿರುವ ಪುರಾತನ ದ್ವಾರಕಾ ನಗರಿಯ ಉತ್ಖನನ ಕಾರ್ಯವನ್ನು ಪುನಾರಂಭಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂಸದ ಸುಬ್ರಮಣಿಯನ್ ಸ್ವಾಮಿ ಮನವಿ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಪ್ರಧಾನಿ ಅವರಿಗೆ ಸ್ವಾಮಿ ಪತ್ರ ಬರೆದಿದ್ದಾರೆ.

2001ರಲ್ಲೇ ಅರಬ್ಬೀ ಸಮುದ್ರದ ಆಳದಲ್ಲಿ ಮುಳುಗಿರುವ ನಗರವೊಂದರ ಕುರುಹು ಸಿಕ್ಕಿತಾದರೂ ಆ ನಿಟ್ಟಿನಲ್ಲಿ ಹೆಚ್ಚಿನ ಸಂಶೋಧನೆಗಳು ನಡೆದಿಲ್ಲ. 2004ರವರೆಗೆ ಡಾ. ಎಸ್.ಆರ್. ರಾವ್ ನೇತೃತ್ವದ ಮಾಲಿನ್ಯ ಸಂಶೋಧನಾ ತಂಡವು ಒಂದಷ್ಟು ಅಧ್ಯಯನ ನಡೆಸಿದೆ. 2004ರ ನಂತರ ಸಂಶೋಧನೆಯಲ್ಲಿ ಯಾವ ಪ್ರಗತಿ ಆಗಿಲ್ಲ ಎಂದು ಸುಬ್ರಮಣಿಯನ್ ಸ್ವಾಮಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

2004ರಲ್ಲಿ ದ್ವಾರಕಾ ನಗರ ಸಂಶೋಧನಾ ಕಾರ್ಯಕ್ಕೆ 14 ಕೋಟಿ ರೂ ಬಜೆಟ್ ಇಡುವಂತೆ ಅಂದಿನ ಸರಕಾರವನ್ನು ಡಾ. ರಾವ್ ಅವರು ಕೇಳಿಕೊಂಡಿದ್ದರು. ಆದರೆ, ಯುಪಿಎ ಸರಕಾರ ಯಾವ ಆಸಕ್ತಿಯನ್ನೂ ತೋರಲಿಲ್ಲ. ಈಗ ನೀವು ಈ ಕಾರ್ಯಕ್ಕೆ ನೆರವು ಒದಗಿಸಬೇಕು ಎಂದು ಸುಬ್ರಮಣಿಯನ್ ಸ್ವಾಮಿ ಕೋರಿದ್ದಾರೆ.

ಜ್ಯೋತಿಷಿಗಳು ಮಹಾಭಾರತದ ಕಾಲಗಣನೆಯನ್ನು ಲೆಕ್ಕ ಹಾಕಿದ್ದು, ಸುಮಾರು 50 ಶತಮಾನಗಳ ಹಿಂದೆ ಇಲ್ಲಿ ಕೌರವರು, ಪಾಂಡವರು, ಕೃಷ್ಣ ಯುದ್ಧ ಮಾಡಿದ್ದರೆನ್ನಲಾಗಿದೆ. 2001ರಲ್ಲಿ ಸಮುದ್ರದಲ್ಲಿ ಪತ್ತೆಯಾದ ನಗರವು ಸುಮಾರು 34 ಶತಮಾನಗಳ ಹಿಂದೆ, ಅಂದರೆ ಸುಮಾರು ಕ್ರಿಸ್ತಪೂರ್ವ 1,443ರಲ್ಲಿ ಸಮುದ್ರದಲ್ಲಿ ಮುಳುಗಡೆಯಾಗಿರುವುದು ಗೊತ್ತಾಗಿದೆ. ಮಹಾಭಾರತ ಯುದ್ಧವಾಗಿ ಸಹಸ್ರಾರು ವರ್ಷಗಳ ನಂತರ ದ್ವಾರಕಾ ನಗರಿ ಸಮುದ್ರದಲ್ಲಿ ಮುಳುಗಿತು ಎಂದು ಪುರಾಣಗಳೂ ಹೇಳುತ್ತವೆ.

ಈ ವಿಚಾರವನ್ನು ತಮ್ಮ ಪತ್ರದಲ್ಲಿ ಉಲ್ಲೇಖಿಸಿರುವ ಸುಬ್ರಮಣಿಯನ್ ಸ್ವಾಮಿ, ದ್ವಾರಕಾ ನಗರಿಯ ಉತ್ಖನನ ಕಾರ್ಯ ನಡೆಯುವುದು ಬಹಳ ಮಹತ್ವದ್ದಾಗಿದೆ ಎಂದಿದ್ಧಾರೆ. ಭಾರತ ದೇಶವು ವಿಶ್ವದ ಅತ್ಯಂತ ಪುರಾತನ ನಾಗರಿಕತೆಯಾಗಿತ್ತು ಎಂಬುದು ಈ ಉತ್ಖನನದ ಫಲಿತಾಂಶದಿಂದ ಸಾಬೀತಾಗಬಹುದು. ಆದ್ದರಿಂದ ತಾವು ದ್ವಾರಕಾ ನಗರದ ಮರು ನಿರ್ಮಾಣಕ್ಕೆ ವಿಶೇಷ ತಂಡವೊಂದನ್ನ ಕಟ್ಟಬೇಕು ಎಂದು ಪ್ರಧಾನಿ ಅವರಿಗೆ ಸ್ವಾಮಿ ಕೋರಿಕೊಂಡಿದ್ದಾರೆ.

Comments are closed.