ಕರ್ನಾಟಕ

ಹೆಂಡತಿಯ ಶೀಲ ಶಂಕಿಸಿ ಕೊಲೆ

Pinterest LinkedIn Tumblr


ಬೆಂಗಳೂರು: ಪತ್ನಿಯ ನಡವಳಿಕೆ ಮೇಲೆ ಅನುಮಾನಗೊಂಡ ಪತಿ ಕತ್ತು ಹಿಸುಕಿ ಆಕೆಯನ್ನು ಹತ್ಯೆಗೈದು ಬಳಿಕ ಪೊಲೀಸರಿಗೆ ಶರಣಾದ ಘಟನೆ ರಾಜಗೋಪಾಲನಗರ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ನಡೆದಿದೆ.

ಮೈಸೂರು ಜಿಲ್ಲೆ ಪಿರಿಯಾಪಟ್ಟಣ ಮೂಲದ ಸೌಮ್ಯಾ (29) ಮೃತರು. ಜಗದೀಶ್‌ ಹತ್ಯೆಗೈದ ಆರೋಪಿ. ಜಗದೀಶ್‌ ಮತ್ತು ಸೌಮ್ಯ ದಂಪತಿ ಮೂಲತಃ ಮೈಸೂರಿನವರಾಗಿದ್ದು, ಒಂದು ವರ್ಷ ಹಿಂದೆ ಬೆಂಗಳೂರಿಗೆ ಬಂದು ರಾಜಗೋಪಾಲನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ರಾಜೇಶ್ವರಿ ನಗರದಲ್ಲಿ ಮನೆ ಮಾಡಿಕೊಂಡಿದ್ದರು. ದಂಪತಿಗೆ ಏಳು ವರ್ಷದ ಪುತ್ರ ಇದ್ದಾನೆ. ಜಗದೀಶ್‌ ಕಾರ್ಖಾನೆ ಒಂದರಲ್ಲಿ ಕೆಲಸಕ್ಕೆ ಹೋದರೆ, ಸೌಮ್ಯಾ ಗಾರ್ಮೆಂಟ್ಸ್‌ ಕೆಲಸಕ್ಕೆ ಹೋಗುತ್ತಿದ್ದರು.

ಈ ಮಧ್ಯೆ ಪತ್ನಿಯ ನಡವಳಿಕೆ ಬಗ್ಗೆ ಅನುಮಾನಗೊಂಡ ಜಗದೀಶ್‌, ಗಾರ್ಮೆಂಟ್ಸ್‌ ನಲ್ಲಿ ಆಕೆ ಪರ ಪುರುಷನೊಂದಿಗೆ ಸಂಪರ್ಕ ಹೊಂದಿದ್ದಾಳೆ ಎಂದು ಪ್ರತಿ ನಿತ್ಯ ಜಗಳ ತೆಗೆಯುತ್ತಿದ್ದ. ನಾಲ್ಕೈದು ಬಾರಿ ಹಿರಿಯರು ಕರೆಸಿ ಇಬ್ಬರಿಗೂ ಬುದ್ಧಿವಾದ ಹೇಳಿ ಕಳಿಸಿದ್ದರೂ ದಂಪತಿ ಮಧ್ಯೆ ಜಗಳ ಮುಂದುವರಿದಿತ್ತು.

ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ದಂಪತಿ ನಡುವೆ ಮತ್ತೆ ವಾಗ್ವಾದ ನಡೆದಿದ್ದು, ಈ ವೇಳೆ ಆಕ್ರೋಶ ಗೊಂಡ ಜಗದೀಶ್‌, ಸೌಮ್ಯಾ ಅವರನ್ನು ಕೆಳಗೆ ಬೀಳಿಸಿ, ಆಕೆ ಕುತ್ತಿಗೆ ಮೇಲೆ ಕಾಲು ಇಟ್ಟು ಕೊಲೆ ಮಾಡಿದ್ದಾನೆ. ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ. ಘಟನೆ ವೇಳೆ ದಂಪತಿ ಪುತ್ರ ಸಂಬಂಧಿಕರ ಮನೆಗೆ ಹೋಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ರಾಜಗೋಪಾಲನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ

Comments are closed.