ಕರ್ನಾಟಕ

ಮೊಬೈಲ್‌ ಕೊಡಿಸದ್ದ‌ಕ್ಕೆ ವಿದ್ಯಾರ್ಥಿ ಆತ್ಮಹತ್ಯೆ

Pinterest LinkedIn Tumblr


ಬೆಂಗಳೂರು: ಪೋಷಕರು ಮೊಬೈಲ್‌ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ನೇಣು ಬಿಗಿದುಕೊಂಡ
ಘಟನೆ ಚಿಕ್ಕಜಾಲ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಚಿಕ್ಕಜಾಲದ ಬಿಲ್ಲಮಾರನಹಳ್ಳಿಯ ಗಗನ್‌ (16) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಬಿಲ್ಲಮಾರನಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿದ್ದ ಗಗನ್‌, ಮೊಬೈಲ್‌ ಕೊಡಿಸು ವಂತೆ ಪೋಷಕರಿಗೆ ಕೇಳಿಕೊಂಡಿದ್ದ. ಆದರೆ, ಎಸ್‌ ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದರೆ ಮಾತ್ರ ಮೊಬೈಲ್‌ ಕೊಡಿಸುವುದಾಗಿ ತಂದೆ ಹೇಳಿದ್ದರು.

ಆದರೂ, ಈಗಲೇ ಮೊಬೈಲ್‌ ಕೊಡಿಸಬೇಕು ಎಂದು ಗಗನ್‌ ಹಠ ಮಾಡುತ್ತಿದ್ದ. ಮಂಗಳವಾರ ಸಂಜೆ ಶಾಲೆಯಿಂದ ಮನೆಗೆ ಬಂದ ಗಗನ್‌, ಶಾಲೆಯಲ್ಲಿ ನನ್ನ ಸ್ನೇಹಿತರ ಬಳಿ ಮೊಬೈಲ್‌ ಫೋನುಗಳಿವೆ. ನನಗೂ ಕೊಡಿಸಿ ಎಂದು ಹಠ ಮಾಡಿದ್ದಾನೆ. ಆದರೆ ಎಸ್‌ಎಸ್‌ಎಲ್‌ಸಿ ನಂತರ ಕೊಡಿಸುವುದಾಗಿ ತಿಳಿಸಿದ ತಂದೆ, ಬುದ್ಧಿ ಹೇಳಿದ್ದರು.

ಇದರಿಂದ ನೊಂದ ಗಗನ್‌ ಬುಧವಾರ ನಸುಕಿನ 3 ಗಂಟೆ ಸುಮಾರಿಗೆ ಮನೆ ಪಕ್ಕದ ನಿರ್ಮಾಣ ಹಂತದ ಕಟ್ಟಡಕ್ಕೆ ತೆರಳಿ ನೇಣು ಬಿಗಿದುಕೊಂಡಿದ್ದಾನೆ. ಮುಂಜಾನೆ 4 ಗಂಟೆ ಸುಮಾರಿಗೆ ಎಚ್ಚರಗೊಂಡ ತಾಯಿ, ಮಗ ಮನೆಯಲ್ಲಿ ಇಲ್ಲದಿರುವುದನ್ನು ಗಮನಿಸಿ ಆತನನ್ನು ಹುಡುಕುತ್ತಾ ನಿರ್ಮಾಣ ಹಂತದ ಕಟ್ಟಡದ ಬಳಿ ಹೋದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಚಿಕ್ಕಜಾಲ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.

Comments are closed.