ಕರ್ನಾಟಕ

ಥೈಲ್ಯಾಂಡ್​ನ​ ಗುಹೆಯಲ್ಲಿ ಸಿಲುಕಿದ್ದ ಬಾಲಕರು ಡಿಸ್ಚಾರ್ಜ್​

Pinterest LinkedIn Tumblr


ಬೆಂಗಳೂರು: 18 ದಿನಗಳ ಗುಹೆವಾಸ ಅನುಭವಿಸಿದ್ದ ಥೈಲ್ಯಾಂಡ್​ನ 11ರಿಂದ 14 ವರ್ಷದೊಳಗಿನ ಫುಟ್​ಬಾಲ್​ ಆಟಗಾರರನ್ನು ಡೈವರ್​ಗಳು ಸಂರಕ್ಷಿಸಿದ್ದರು. 8 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 12 ಬಾಲಕರನ್ನು ಇಂದು ಡಿಸ್ಚಾರ್ಜ್​ ಮಾಡಲಾಗಿದೆ. ಆಸ್ಪತ್ರೆಯಿಂದ ಹೊರಬಂದ ಬಾಲಕರು ಇಂದು ಮಾಧ್ಯಮಗಳೊಂದಿಗೆ ಮಾತನಾಡಲಿದ್ದಾರೆ.

ನೀರಿನಿಂದ ಆವೃತವಾಗಿದ್ದ ಥಾಯ್​ ಗುಹೆಯಲ್ಲಿ ನಿರ್ಮಾಣವಾಗಿದ್ದ ನಡುಗಡ್ಡೆಯಲ್ಲಿ ಸಿಲುಕಿಕೊಂಡಿದ್ದ ಬಾಲಕರು ಮತ್ತು ಅವರ ಕೋಚ್​ ಸೇರಿ ಒಟ್ಟು 13 ಜನರನ್ನು ಕಡಿದಾದ ಗುಹೆಯ ಮಾರ್ಗವನ್ನು ಭೇದಿಸಿ ಹೊರಗೆ ಕರೆತರಲು ಹರಸಾಹಸ ಪಟ್ಟಿದ್ದರು ಡೈವರ್​ಗಳು. ಈ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದ ಓರ್ವ ಡೈವರ್​ ಆಕ್ಸಿಜನ್​ ಕೊರತೆಯಿಂದ ತಮ್ಮ ಪ್ರಾಣ ಕಳೆದುಕೊಂಡಿದ್ದರು.

ಇಂದು ಮಾಧ್ಯಮದೊಂದಿಗೆ ಮುಖಾಮುಖಿಯಾಗಲಿರುವ ವೈಲ್ಡ್​ ಬೋರ್ಸ್​ನ ಫುಟ್​ಬಾಲ್​ ತಂಡದ ಬಾಲಕರು ಗುಹೆಯೊಳಗೆ ಸಿಲುಕಿಕೊಂಡ 26 ದಿನಗಳ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿದ್ದಾರೆ. ಬಳಿಕ, ತಮ್ಮ ಮನೆಯವರನ್ನು ಸೇರಿಕೊಳ್ಳಲಿದ್ದಾರೆ.

ಸಾಮಾನ್ಯರಂತೆ ಜೀವನ ನಡೆಸಲಿ:
ಕಗ್ಗತ್ತಲು ತುಂಬಿದ್ದ ಕಡಿದಾದ ಗುಹೆಯೊಳಗೆ ನೀರು ಕೂಡ ತುಂಬಿಕೊಂಡಿದ್ದರಿಂದ ಉಸಿರಾಡಲೂ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ, ಬಾಲಕರಿಗೆ ಸೋಂಕು ತಗುಲಿರುವ ಸಾಧ್ಯತೆ ಇದ್ದುದರಿಂದ ಅವರನ್ನು ಗಾಜಿನ ಕೊಠಡಿಯಲ್ಲಿ ಇರಿಸಿ ತಪಾಸಣೆ ನಡೆಸಲಾಗಿತ್ತು. ಇಂದು ಮಾಧ್ಯಮಗೋಷ್ಠಿಯನ್ನು ನಡೆಸಿ ಬಳಿಕ ಅವರನ್ನು ಮನೆಗೆ ಕಳುಹಿಸುತ್ತಿರುವ ಉದ್ದೇಶವೇ ಮುಂದೆ ಅವರಿಗೆ ಮಾಧ್ಯಮಗಳಿಂದ ಕಿರಿಕಿರಿ ಆಗಬಾರದು. ಒಮ್ಮೆ ಮನೆಗೆ ಹೋದ ನಂತರ ಅವರು ಬೇರೆಲ್ಲರಂತೆ ಸಾಮಾನ್ಯಜೀವನ ನಡೆಸುವಂತಾಗಬೇಕು ಎಂಬ ಕಾರಣದಿಂದ ಎಲ್ಲ ಪ್ರಶ್ನೆಗಳನ್ನೂ ಇಂದೇ ಕೇಳಿ ಬಗೆಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಥೈಲ್ಯಾಂಡ್​ನ ಚೀಫ್​ ಗವರ್ನಮೆಂಟ್​ ವಕ್ತಾರರಾದ ಸನ್ಸರ್ನ್​ ಕೇಕುಮ್ನರ್ಡ್​ ತಿಳಿಸಿದ್ದಾರೆ.

ಅನೌಪಚಾರಿಕವಾಗಿ 45 ನಿಮಿಷಗಳ ಕಾಲ ಪತ್ರಕರ್ತರೊಂದಿಗೆ ಬಾಲಕರ ಮಾತುಕತೆಗೆ ಅವಕಾಶ ಕಲ್ಪಿಸಲಾಗಿದೆ. ಎರಡು ವಾರಗಳಿಗೂ ಹೆಚ್ಚು ಕಾಲ ಗುಹೆಯೊಳಗೆ ಸಿಲುಕಿದ್ದರಿಂದ ಅವರೆಲ್ಲರೂ ಸಾಕಷ್ಟು ಬಳಲಿದ್ದಾರೆ. ಹಾಗಾಗಿ, ಅವರಿಗೆ ಹೆಚ್ಚು ತೊಂದರೆ ಕೊಡುವುದು ಬೇಡ. ಅಲ್ಲದೆ, ವೈದ್ಯರು ಕೂಡ ಆ ಬಾಲಕರ ಕುಟುಂಬದವರಿಗೆ ಮಕ್ಕಳನ್ನು ಒಂದು ತಿಂಗಳ ಮಟ್ಟಿಗಾದರೂ ಮಾಧ್ಯಮಗಳಿಂದ ದೂರವಿಡಿ. ಪದೇಪದೆ ಆ ದಿನಗಳನ್ನು ನೆನಪಿಸುತ್ತಿದ್ದರೆ ಅವರ ಮನಸಿನ ಮೇಲೆ ಇನ್ನಷ್ಟು ಪರಿಣಾಮ ಬೀರುತ್ತದೆ ಎಂದಿದ್ದಾರೆ ಎಂದು ಸನ್ಸರ್ನ್​ ಹೇಳಿದ್ದಾರೆ.

Comments are closed.