ಕರ್ನಾಟಕ

ತಮ್ಮ ಪತ್ನಿ ಜೊತೆಗೆ ಐಪಿಎಸ್ ಅಧಿಕಾರಿ ಅಕ್ರಮ ಸಂಬಂಧ: ಗಂಭೀರ ಆರೋಪ ಮಾಡಿದ ಪತಿ

Pinterest LinkedIn Tumblr

ಬೆಂಗಳೂರು: ತಮ್ಮ ಪತ್ನಿ ಜೊತೆಗೆ ಐಪಿಎಸ್ ಅಧಿಕಾರಿ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಪತಿ ಮಾಧ್ಯಮದ ಮುಂದೆ ಬಂದು ಅಳಲು ತೋಡಿಕೊಂಡಿರುವ ಘಟನೆ ನಡೆದಿದೆ. ಈ ಬಗ್ಗೆ ಪೊಲೀಸರ ಗಮನಕ್ಕೆ ತಂದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಕೇಳಿದಾಗ ಐಪಿಎಸ್ ಅಧಿಕಾರಿ ತಮ್ಮನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಪತಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ದಾವಣಗೆರೆ ಮೂಲದ ಸಾಗರ್(ಹೆಸರು ಬದಲಿಸಲಾಗಿದೆ) ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು 2010ರಲ್ಲಿ ಲಾವಣ್ಯ(ಹೆಸರು ಬದಲಿಸಲಾಗಿದೆ) ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾಗಿ ನಾಲ್ಕು ವರ್ಷ ಕಳೆದರೂ ಸಹ ಮಕ್ಕಳಾಗಲಿಲ್ಲವೆಂದು ಬೇಸತ್ತು ಲಾವಣ್ಯ ತನ್ನ ತಾಯಿಯ ಮನೆಯಲ್ಲಿ ವಾಸವಿರಲಾರಂಭಿಸಿದರು.

ಪತಿ ಸಾಗರ್ ಪತ್ನಿಗೆ ಒಂದೂವರೆ ಕೋಟಿ ರೂಪಾಯಿ ನೀಡಿ ದಾವಣಗೆರೆಯಲ್ಲಿ ಗ್ರಾಫಿಕ್ ಡಿಸೈನಿಂಗ್ ಸ್ಟುಡಿಯೊ ಇಡುವಂತೆ ಸಲಹೆ ನೀಡಿದ್ದರು, ಅದರಂತೆ ಉದ್ಯಮ ಆರಂಭಿಸಿದ್ದರು. ಕಳೆದ ವರ್ಷ ಮೇ 22ರಂದು ಲಾವಣ್ಯರ ಸ್ಟುಡಿಯೊಗೆ ಭೇಟಿ ನೀಡಿದ್ದ ಐಪಿಎಸ್ ಅಧಿಕಾರಿ ತನ್ನ ಅವಳಿ ಹೆಣ್ಣು ಮಕ್ಕಳ ಹುಟ್ಟುಹಬ್ಬದ ಪಾರ್ಟಿಗೆ ಬಂದು ಫೋಟೋ, ವಿಡಿಯೊ ಮಾಡುವಂತೆ ಕೇಳಿಕೊಂಡಿದ್ದರು. ಅಧಿಕಾರಿ ಲಾವಣ್ಯರ ಸ್ಟುಡಿಯೊದಲ್ಲಿ ಸ್ವಲ್ಪ ಹೊತ್ತು ಕಳೆದು ಮಾತನಾಡಿ ಹೆಚ್ಚು ಪರಿಚಿತರಾಗಿಬಿಟ್ಟರು.

ಇದಾದ ಬಳಿಕ ಇಬ್ಬರೂ ಸ್ನೇಹಿತರಾಗಿ ಹತ್ತಿರವಾಗತೊಡಗಿದರು. ಈ ವಿಷಯ ಪತಿ ಸಾಗರ್ ಗೆ ಗೊತ್ತಾದಾಗ ಇಬ್ಬರ ಮಧ್ಯೆ ಅಕ್ರಮ ಸಂಬಂಧವಿದೆಯೆಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್ ರಾಜು ಅವರಿಗೆ ದೂರು ನೀಡಿದ್ದರು. ಆದರೆ ಪೊಲೀಸ್ ಮಹಾ ನಿರ್ದೇಶಕಿ ಕೇಸು ದಾಖಲಿಸಿಕೊಳ್ಳಲಿಲ್ಲ. ನಿನ್ನೆ ಮಾಧ್ಯಮದಲ್ಲಿ ಐಪಿಎಸ್ ಅಧಿಕಾರಿ ಮತ್ತು ಲಾವಣ್ಯ ಅವರ ಸಂಬಂಧದ ಕುರಿತು ವಿಡಿಯೊ ಬಹಿರಂಗವಾದ ನಂತರ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್, ಈ ಕುರಿತು ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜು ಅವರಿಂದ ಪ್ರಕರಣ ಬಗ್ಗೆ ವರದಿ ಕೇಳಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ಪಡೆಯೋಣವೆಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿ ಸಂಪರ್ಕಿಸಿದರೆ ನೀಲಮಣಿ ರಾಜು ಅವರು ಫೋನ್ ಕರೆ ಸ್ವೀಕರಿಸಲಿಲ್ಲ. ಇದೀಗ ಸಾಗರ್ ತಮಗೆ ನ್ಯಾಯ ಸಿಗಲು ಕೋರ್ಟ್ ಮೊರೆ ಹೋಗಿದ್ದಾರೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಐಪಿಎಸ್ ಅಧಿಕಾರಿ, ಈ ಆರೋಪಗಳೆಲ್ಲ ನಿರಾಧಾರವಾದದ್ದು. ವಾಹಿನಿಗಳಲ್ಲಿ ಪ್ರಸಾರವಾದ ವಿಡಿಯೊವನ್ನು ತಿರುಚಲಾಗಿದೆ. ಸಾಗರ್ ಒಬ್ಬ ಮನೋವಿಕೃತನಾಗಿದ್ದು ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾನೆ. ಆತ ತನಗೆ ಕಿರುಕುಳ ನೀಡುತ್ತಿರುವುದರಿಂದ ಅವನನ್ನು ತೊರೆಯಲು ನಿರ್ಧರಿಸಿದ್ದೇನೆ ಎಂದು ಆತನ ಪತ್ನಿ ನನಗೆ ಹೇಳಿದ್ದಳು. ಆಕೆ ಸಹ ಆತನ ವಿರುದ್ಧ ಕೇಸು ದಾಖಲಿಸಲು ನಿರ್ಧರಿಸಿದ್ದಳು. ಆದರೆ ಇದು ಕೌಟುಂಬಿಕ ಕಲಹವಾಗಿರುವುದರಿಂದ ದೂರು ನೀಡುವುದು ಬೇಡವೆಂದು ನಾನು ಸಲಹೆ ನೀಡಿದ್ದೆ ಎಂದು ಐಪಿಎಸ್ ಅಧಿಕಾರಿ ತಿಳಿಸಿದ್ದಾರೆ.

ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಲಾವಣ್ಯ, ಕೋರ್ಟಿನಲ್ಲಿ ತಾನು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು ಇದರಿಂದಾಗಿ ತನ್ನ ಪತಿ ಮಾಧ್ಯಮಕ್ಕೆ ವಿಡಿಯೊವನ್ನು ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

Comments are closed.