
ಮಂಡ್ಯ: ಕೃಷ್ಣರಾಜಸಾಗರ ಜಲಾಶಯದಿಂದ ಇಂದು ಮಧ್ಯಾಹ್ನದಿಂದ 20 ಸಾವಿರ ಕ್ಯೂಸೆಕ್ಸ್ ನೀರನ್ನು ಕಾವೇರಿ ನದಿಗೆ ಬಿಡಲಾಗಿದೆ.
ಜಲಾಶಯದ ನೀರಿನ ಮಟ್ಟ 123 ಅಡಿ ಮುಟ್ಟಿರುವುದರಿಂದ ಹಾಗೂ 40 ಸಾವಿರಕ್ಕೂ ಹೆಚ್ಚು ಒಳಹರಿವು ಬರುತ್ತಿರುವ ಹಿನ್ನೆಲೆಯಲ್ಲಿ ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ಇಂದು ಮಧ್ಯಾಹ್ನ 1.20 ಗಂಟೆಗೆ ನದಿಗೆ ನೀರು ಬಿಡಲಾಯಿತು.
ಹೇಮಾವತಿಯ ನೀರೂ ಹೊರಕ್ಕೆ:
ಹಾಸನ ಜಿಲ್ಲೆ ಗೊರೂರು ಜಲಾಶಯದಿಂದ ಇಂದು 15 ಸಾವಿರ ಕ್ಯೂಸೆಕ್ಸ್ ನೀರು ಹರಿಬಿಡಲಾಗಿದೆ. ಲೋಕೋಪಯೋಗಿ ಸಚಿವರಾದ ಹೆಚ್.ಡಿ. ರೇವಣ್ಣ ಪೂಜೆ ಸಲ್ಲಿಸಿದ ನಂತರ ಜಲಾಶಯದಿಂದ ನೀರನ್ನು ಹೊರಗೆ ಹರಿಬಿಡಲಾಯಿತು. ಜಲಾಶಯ ನಿರ್ಮಾಣದ ನಂತರ ಇದೇ ಮೊದಲ ಬಾರಿಗೆ ಇಷ್ಟು ಬೇಗ ನೀರು ಭರ್ತಿಯಾಗಿದ್ದು ವಿಶೇಷವಾಗಿದೆ. ಹಾಸನ ಜಿಲ್ಲೆಯ ಸಕಲೇಶಪುರ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ವ್ಯಾಪ್ತಿಯಲ್ಲಿ ನಿರಂತರವಾಗಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಾಕಷ್ಟು ಪ್ರಮಾಣದ ನೀರು ಹರಿದು ಬರುತ್ತಿದೆ.
ಇಂದು 24 ಸಾವಿರ ಕ್ಯೂಸೆಕ್ಸ್ ಒಳಹರಿವು ಇದ್ದು, ಜಲಾಶಯ ಸಂಪೂರ್ಣ ಭರ್ತಿಗೆ ಕೇವಲ 2 ಅಡಿ ಬಾಕಿ ಇದೆ. ಸುರಕ್ಷತೆ ದೃಷ್ಟಿಯಿಂದ ನದಿಗೆ 15 ಸಾವಿರ ಕ್ಯೂಸೆಕ್ಸ್, ಎಡದಂಡೆ ನಾಲೆಗೆ 2200 ಕ್ಯೂಸೆಕ್ಸ್, ಬಲದಂಡೆ ನಾಲೆಗೆ 200 ಕ್ಯೂಸೆಕ್ಸ್, ಬಲ ಮೇಲ್ದಂಡೆ ನಾಲೆಗೆ 725 ಕ್ಯೂಸೆಕ್ಸ್, ನದಿ ತೂಬಿಗೆ 1300 ಕ್ಯೂಸೆಕ್ಸ್ ನೀರು ಹೊರಗೆ ಹರಿಬಿಡಲಾಗಿದೆ.
Comments are closed.