ಕರ್ನಾಟಕ

ವಿಧಾನಸಭೆ ಕಲಾಪದಲ್ಲಿ ಡ್ರಗ್ಸ್ ಹಾವಳಿ ಚರ್ಚೆ: ನನ್ನ ಮಗ ಡ್ರಗ್ಸ್ ವ್ಯಸನಿಯಾಗಿದ್ದ!

Pinterest LinkedIn Tumblr


ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಡ್ರಗ್ಸ್ ಹಾವಳಿ ಹೆಚ್ಚಾಗಿದೆ. ಇದು ಹೀಗೆಯೇ ಮುಂದುವರಿದರೆ ರಾಜ್ಯ ಉಡ್ತಾ ಪಂಜಾಬ್ ಆಗುತ್ತೆ. ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾಕ್ಕೆ ಕಡಿವಾಣ ಹಾಕಲೇಬೇಕು ಎಂಬುದಾಗಿ ಬಿಜೆಪಿ ಶಾಸಕರು ವಿಧಾನಸಭೆ ಕಲಾಪದಲ್ಲಿ ಆಗ್ರಹಿಸಿದ ಪ್ರಸಂಗ ಶುಕ್ರವಾರ ನಡೆಯಿತು.

ವಿಧಾನಸಭೆ ಕಲಾಪದಲ್ಲಿ ನಿಯಮ 69ರ ಅಡಿ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಶಾಸಕ ಆರ್.ಅಶೋಕ್, ಬೆಂಗಳೂರಿನಲ್ಲಿ ಡ್ರಗ್ಸ್ ಹಾವಳಿ ಮಿತಿ ಮೀರುತ್ತಿದೆ. ಹೀಗಾಗಿ ಡ್ರಗ್ಸ್ ಮಾರಾಟ ಮಾಡುವವರ ವಿರುದ್ಧ ಗೂಂಡಾ ಕಾಯ್ದೆ ಅಡಿ ದೂರು ದಾಖಲಿಸಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಪೂರಕವಾಗಿ ಬಿಜೆಪಿಯ ಶಾಸಕರಾದ ಸುರೇಶ್ ಕುಮಾರ್, ಅರವಿಂದ ಲಿಂಬಾವಳಿ, ಕಾಂಗ್ರೆಸ್ ನ ಶಾಸಕ ಹ್ಯಾರಿಸ್ ಸೇರಿದಂತೆ ಹಲವರು ರಾಜ್ಯದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಡ್ರಗ್ಸ್ ಹಾವಳಿ ಬಗ್ಗೆ ಕಳವಳ ವ್ಯಕ್ತಪಡಿಸಿ, ಇದನ್ನು ಮಟ್ಟಹಾಕಲು ಸರ್ಕಾರ ದಿಟ್ಟ ಕ್ರಮ ಕೈಗೊಳ್ಳಬೇಕು. ನಾವು ಕೂಡಾ ನಿಮ್ಮ ಜೊತೆ ಕೈಜೋಡಿಸುತ್ತೇವೆ ಎಂದು ಸರ್ಕಾರಕ್ಕೆ ವಿನಂತಿ ಮಾಡಿಕೊಂಡರು.

ನನ್ನ ಮಗನೂ ಡ್ರಗ್ಸ್ ಅಡಿಕ್ಟ್ ಆಗಿದ್ದ: ಶಾಸಕ ಕಳಕಪ್ಪ ಬಂಡಿ

ರಾಜ್ಯದಲ್ಲಿ ಡ್ರಗ್ಸ್ ಹಾವಳಿ ತಡೆಗಟ್ಟುವ ವಿಚಾರದಲ್ಲಿ ಬಿಸಿ, ಬಿಸಿ ಚರ್ಚೆ ನಡೆಯುತ್ತಿದ್ದಾಗ ಸಂದರ್ಭದಲ್ಲಿ ಬಿಜೆಪಿ ಶಾಸಕ ಕಳಕಪ್ಪ ಬಂಡಿ ಅವರು ಹೇಳಿದ ವಿಚಾರ ಪ್ರಕರಣದ ಗಂಭೀರತೆಗೆ ಸಾಕ್ಷಿಯಾಯಿತು.

ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದ ನನ್ನ ಮಗ ಒಂದೇ ವರ್ಷದಲ್ಲಿ ಡ್ರಗ್ಸ್ ವ್ಯಸನಿ ಆಗಿಬಿಟ್ಟಿದ್ದ. ಕಾಲೇಜಿಗೆ ಹೋಗುತ್ತಿರಲಿಲ್ಲ, ನಮಗೆ ಗೊತ್ತಾಗಲು ಆರು ತಿಂಗಳು ಬೇಕಾಯಿತು. ಇದೊಂದು ದೊಡ್ಡ ಜಾಲ. ಶ್ರೀಮಂತರ ಮಕ್ಕಳನ್ನೇ ಗುರಿಯಾಗಿರಿಸಿ ಈಶಾನ್ಯ ರಾಜ್ಯದವರು ಡ್ರಗ್ಸ್ ಸರಬರಾಜು ಮಾಡುತ್ತಿದ್ದಾರೆ. ಡ್ರಗ್ಸ್ ಚಟದಿಂದ ನನ್ನ ಮಗನನ್ನು ಹೊರತರಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ ಎಂದು ಕಳಕಪ್ಪ ಬಂಡಿ ತಮ್ಮದೇ ಮಗನ ಉದಾಹರಣೆ ಸದನದ ಮುಂದಿಟ್ಟಿದ್ದರು.

ಗೂಂಡಾ ಕಾಯ್ದೆಯಡಿ ಕ್ರಮ: ಪರಮೇಶ್ವರ್

ಸದನದಲ್ಲಿ ಡ್ರಗ್ಸ್ ಹಾವಳಿ ಚರ್ಚೆ ಬಳಿಕ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಮಾತನಾಡಿ, ಡ್ರಗ್ಸ್ ಮಾರಾಟ ಮಾಡುವವರ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

Comments are closed.