ಕರ್ನಾಟಕ

ಅನ್ನಭಾಗ್ಯ ಅಕ್ಕಿ ಕಡಿತ ನಿರ್ಧಾರ ಪರಿಶೀಲಿಸಲು ಕುಮಾರಸ್ವಾಮಿಗೆ ಸಿದ್ದರಾಮಯ್ಯ ಮತ್ತೊಂದು ಪತ್ರ

Pinterest LinkedIn Tumblr


ಬೆಂಗಳೂರು: ಅನ್ನಭಾಗ್ಯ ಅಕ್ಕಿಯ ಪ್ರಮಾಣ ಕಡಿತಗೊಳಿಸಿರುವುದು ಹಾಗೂ ತೈಲದ ಮೇಲಿನ ತೆರಿಗೆ ಹೆಚ್ಚಳ ಮಾಡಿರುವುದನ್ನು ಸಮರ್ಥಿಸಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಯೂ ಟರ್ನ್‌ ಮಾಡಿದ್ದಾರೆ.

ಬಜೆಟ್‌ನಲ್ಲಿನ ಈ ನಿರ್ಧಾರಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಎರಡೂ ನಿರ್ಧಾರಗಳನ್ನು ಪುನರ್‌ ಪರಿಶೀಲಿಸುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಆಗ್ರಹಿಸಿದ್ದಾರೆ.

ಸರಕಾರದ ವಿರುದ್ಧ ಪತ್ರ ಸಮರ ನಡೆಸುತ್ತಿರುವ ಸಿದ್ದರಾಮಯ್ಯ, ತಮ್ಮ ಅವಧಿಯಲ್ಲಿ ತೆಗೆದುಕೊಂಡ ಅನ್ನಭಾಗ್ಯ ಯೋಜನೆಯಲ್ಲಿ ಮಾರ್ಪಾಟು ಮಾಡಿರುವ ನಿರ್ಧಾರವನ್ನು ಖಂಡಿಸಿದ್ದಾರೆ. ಅಲ್ಲದೆ ಪತ್ರದಲ್ಲಿ ಯೋಜನೆಯ ಜತೆಗೆ ಭಾವಾತ್ಮಕ ಸಂಬಂಧಗಳೂ ಇವೆ. ಜಾತಿ ಭೇದಗಳನ್ನು ಮರೆತ ಯೋಜನೆ ಇದಾಗಿದೆ ಎಂದು ತೀಕ್ಷ್ಣ ಪದಗಳಲ್ಲಿ ಹೇಳಿದ್ದಾರೆ.

ಪೆಟ್ರೋಲ್‌ ಹಾಗೂ ಡೀಸಲ್‌ ಬೆಲೆ ಏರಿಕೆ ಸಂಬಂಧ ಕಾಂಗ್ರೆಸ್‌ ಪಕ್ಷ ರಾಷ್ಟ್ರ ಮಟ್ಟದಲ್ಲಿ ಹೋರಾಟ ನಡೆಸುತ್ತಿದೆ. ಬಿಜೆಪಿ ಸರಕಾರದ ವಿರುದ್ಧ ಇದೇ ವಿಚಾರದಲ್ಲಿ ಪ್ರತಿಭಟನೆಯನ್ನೂ ನಡೆಸುತ್ತಿದೆ. ಇಂತಹ ಸನ್ನಿವೇಶದಲ್ಲಿ ತೈಲ ಬೆಲೆ ಏರಿಕೆ ಮಾಡಿರುವ ನಿರ್ಧಾರ ಸಮಂಜಸವಲ್ಲ. ಇದರಿಂದ ಜನಸಾಮಾನ್ಯರ ಮೇಲೆ ತೀವ್ರ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಕೂಡಲೇ ಈ ಬಗ್ಗೆ ಮರು ಪರಿಶೀಲಿಸುವಂತೆ ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ.

ನೀವು ಮಂಡಿಸಿರುವ ಬಜೆಟ್‌ನಲ್ಲಿ ಅನ್ನಭಾಗ್ಯ ಯೋಜನೆಯಲ್ಲಿ ನೀಡುತ್ತಿದ್ದ 7 ಕಿಲೋ ಅಕ್ಕಿಯನ್ನು 5ಕಿಲೋಗೆ ಇಳಿಸಿರುವುದು ಅಚ್ಚರಿಯ ನಿರ್ಧಾರ. ಈ ಯೋಜನೆಗೆ ನಮ್ಮ ಅಧಿಕಾರದ ಅವಧಿಯಲ್ಲಿ 2450 ಕೋಟಿ ರೂ. ನಿಗದಿಪಡಿಸಲಾಗಿತ್ತು. 2 ಕೆಜಿ ಅಕ್ಕಿ ಕಡಿಮೆ ಮಾಡುವುದರಿಂದ ದೊಡ್ಡ ಪ್ರಮಾಣದ ಹಣ ಉಳಿತಾಯ ಆಗಲಾರದು. ಅಕ್ಕಿಯ ಪ್ರಮಾಣ ಕಡಿತದಿಂದ ಬಡವರ ಮೇಲೆ ಪರಿಣಾಮ ಬೀರಲಿದೆ ಎಂಬುದನ್ನು ಮರೆಯಬಾರದು. ಈ ನಿರ್ಧಾರದ ಬಗ್ಗೆ ಅನೇಕ ಜಿಲ್ಲೆಗಳಿಂದ ಅಸಮಾಧಾನವೂ ಕೇಳಿ ಬಂದಿದೆ. ಹೀಗಾಗಿ ಈ ನಿರ್ಧಾರವನ್ನು ಕೂಡಲೇ ಮರುಪರಿಶೀಲಿಸಬೇಕು ಎಂದು ಪತ್ರದಲ್ಲಿ ಹೇಳಿದ್ದಾರೆ.

Comments are closed.