ಕರ್ನಾಟಕ

ರಾಜ್ಯದ ವಿವಿಧೆಡೆ ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆ?

Pinterest LinkedIn Tumblr


ಬೆಂಗಳೂರು: ವಾತಾವರಣದಲ್ಲಿನ ಮೂರು ರೀತಿಯ ಬೆಳವಣಿಗೆಯಿಂದ ಮುಂದಿನ ಎರಡು ದಿನಗಳು ಮಳೆ ಮತ್ತೆ ಮುಂದುವರಿಯುವ ಸಾಧ್ಯತೆ ಇದೆ. ದಕ್ಷಿಣ ಒಡಿಶಾದಲ್ಲಿ ಮತ್ತು ಪೂರ್ವ-ಪಶ್ಚಿಮ ವಲಯದಲ್ಲಿ ಚಂಡಮಾರುತದ ಪರಿಚಲನೆ ಹಾಗೂ ಕರ್ನಾಟಕ-ಕೇರಳ ಕರಾವಳಿ ಭಾಗದಲ್ಲಿ ಕಡಿಮೆ ಒತ್ತಡ ಕಂಡುಬಂದಿರುವುದರಿಂದ ರಾಜ್ಯದ ವಿವಿಧೆಡೆ ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆ ಸಾಧ್ಯತೆ ಇದೆ.

ಈ ಮಧ್ಯೆ ಪುನರ್ವಸು ಮಳೆ ಆರ್ಭಟಕ್ಕೆ ಮಲೆನಾಡು ಭಾಗ ತತ್ತರಿಸಿದೆ. ಚಿಕ್ಕಮಗಳೂರಿನ ಕಂಬಿಹಳ್ಳಿ ಗ್ರಾಮದಲ್ಲಿ ಕೊಟ್ಟಿಗೆ ಗೋಡೆ ಬಿದ್ದು ಓರ್ವ ಮಹಿಳೆ ಮೃತಪಟ್ಟಿದ್ದಾರೆ. ಕಂಬಿಹಳ್ಳಿಯಲ್ಲಿ ಸೋಮವಾರ ರಾತ್ರಿ ಕೊಟ್ಟಿಗೆಗೆ ಹಸು ಕಟ್ಟಲು ತೆರಳಿದ್ದಾಗ ಗೋಡೆ ಕುಸಿದು ಬಿದ್ದು ವನಜಾ (48)
ಎಂಬುವವರು ಮೃತಪಟ್ಟಿದ್ದಾರೆ. ಮಳೆಯಿಂದಾಗಿ ಗೋಡೆ ಶಿಥಿಲಗೊಂಡಿತ್ತು. ಇದನ್ನು ಗಮನಿಸದೆ ಸುರಿಯುತ್ತಿರುವ ಮಳೆಯಲ್ಲೇ ಕೊಟ್ಟಿಗೆಗೆ ತೆರಳಿ
ದ್ದಾಗ ಅವಘಡ ಸಂಭವಿಸಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಮಳೆಯಿಂದ ಮೃತಪಟ್ಟವರ ಸಂಖ್ಯೆ ಮೂರಕ್ಕೇರಿದೆ.

ಮುಳ್ಳಯ್ಯನಗಿರಿ ಬೆಟ್ಟ ಶ್ರೇಣಿಯಲ್ಲಿ ಗುಡ್ಡ ಕುಸಿದು ರಸ್ತೆ ಸಂಚಾರ ಸ್ಥಗಿತಗೊಂಡಿದ್ದರೆ, ಮಲೆ ನಾಡು ಪ್ರದೇಶಗಳಲ್ಲಿ ನದಿಗಳು ಉಕ್ಕಿ ಹರಿಯುತ್ತಿವೆ. ಶೃಂಗೇರಿ, ಕೊಪ್ಪ, ನರಸಿಂಹರಾಜಪುರ, ಮೂಡಿಗೆರೆ ತಾಲೂಕು ಸೇರಿ ಚಿಕ್ಕಮಗಳೂರು ತಾಲೂಕಿನ ವಿವಿಧೆಡೆ ಸೋಮವಾರ ಸಂಜೆಯಿಂದ ಬಿಡದೇ ಮಳೆಯಾಗುತ್ತಿದೆ.

ಮಂಗಳವಾರ ಮುಳ್ಳಯ್ಯನಗಿರಿ ಬೆಟ್ಟ ಶ್ರೇಣಿಯ ಹಲವೆಡೆ ಗುಡ್ಡ ಕುಸಿದಿದ್ದು, ರಸ್ತೆ ಸಂಚಾರಕ್ಕೆ ಅಡಚಣೆಯುಂಟಾಗಿತ್ತು. ಶೃಂಗೇರಿ ತಾಲೂಕಿನಲ್ಲಿ
ಭಾರೀ ಮಳೆಯಾಗುತ್ತಿದ್ದು, ತುಂಗಾ ನದಿ ಉಕ್ಕಿ ಹರಿಯುತ್ತಿದೆ. ಶೃಂಗೇರಿ ಶಾರದಾ ಪೀಠದ ಕಪ್ಪೆ ಶಂಕರ ದೇವಾಲಯ ಸಂಪೂರ್ಣ ಮುಳುಗಿದ್ದು,
ಸಂಧ್ಯಾವಂದನ ಮಂಟಪ ಮುಳುಗುವ ಹಂತ ತಲುಪಿದೆ.

ಕೊಪ್ಪ ತಾಲೂಕಿನಲ್ಲೂ ವರುಣನ ಆರ್ಭಟ ಜೋರಾಗಿದೆ. ಬಾಳೆಹೊನ್ನೂರು-ಕಳಸ ರಸ್ತೆಯ ತೆಪ್ಪದಗುಂಡಿ ಬಳಿ ದೊಡ್ಡ ಮರ ಬಿದ್ದು, ಸಂಚಾರ
ಅಸ್ತವ್ಯಸ್ತಗೊಂಡಿತ್ತು. ತುಂಗಾ, ಭದ್ರಾ ಮತ್ತು ಹೇಮಾವತಿ ನದಿಗಳಲ್ಲಿ ನೀರಿನ ಪ್ರಮಾಣ ಏರುತ್ತಲೇ ಇದ್ದು, ಪ್ರವಾಹದ ಭೀತಿ ಎದುರಾಗಿದೆ.
ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದ ಆಯ್ದ ಭಾಗಗಳಲ್ಲಿ ವ್ಯಾಪಕವಾಗಿ ಭಾರಿಯಿಂದ ಅತಿ ಭಾರೀ ಮಳೆ ಬೀಳುವ ನಿರೀಕ್ಷೆ
ಇದೆ. ಅದೇ ರೀತಿ, ದಕ್ಷಿಣ ಒಳನಾಡಿನ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನದ ಹಲವೆಡೆ ಭಾರೀ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ಪ್ರಕಟಣೆ ತಿಳಿಸಿದೆ.

ಮಂಗಳವಾರ ಬೆಳಗ್ಗೆ ಉತ್ತರ ಕನ್ನಡದ ಗೇರುಸೊಪ್ಪದಲ್ಲಿ ಅತಿ ಹೆಚ್ಚು 160 ಮಿ.ಮೀ. ಮಳೆ ದಾಖಲಾಗಿದೆ.

ಬಾಲಕಿ ಶವ ಪತ್ತೆ
ತಾಯಿಯೊಂದಿಗೆ ಕಾಲುಸಂಕ ದಾಟುತ್ತಿದ್ದಾಗ ಕಾಲು ಜಾರಿ ಬಿದ್ದು ನೀರುಪಾಲಾಗಿದ್ದ ಬಾಲಕಿಯ ಶವ ಮಂಗಳವಾರ ಪತ್ತೆಯಾಗಿದೆ. ಆಗುಂಬೆ ವ್ಯಾಪ್ತಿಯ ದುಡ್ಲಿಮನೆ ಬಳಿ ಮರಡಿ ಹಳ್ಳದಲ್ಲಿ ಬಾಲಕಿ ಬಿದ್ದ ಸ್ಥಳದಿಂದ ಒಂದು ಕಿಮೀ ದೂರದಲ್ಲಿ ಪೊದೆಯೊಂದರ ಬಳಿ ಸಿಲುಕಿದ್ದ ಮೃತದೇಹವನ್ನು ಮಂಗಳವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಹೊರತೆಗೆಯಲಾಗಿದೆ. ಮೃತ ವಿದ್ಯಾರ್ಥಿನಿ ಆಶಿಕಾಳ ಮನೆಗೆ ಜಿಲ್ಲಾ ಧಿಕಾರಿ ಡಾ| ಲೋಕೇಶ್‌ ಭೇಟಿ
ನೀಡಿ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರಲ್ಲದೆ ಸರ್ಕಾರದ ಪರವಾಗಿ ಮೃತ ಬಾಲಕಿಯ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಚೆಕ್‌ ವಿತರಿಸಿದರು.

Comments are closed.